ಸ್ವಂತ ಮಕ್ಕಳ ಹಂತಕಗೆ ಗಲ್ಲು
ಪುತ್ತೂರು: ತನ್ನ ಅತ್ತೆ, ನಾದಿನಿ ಹಾಗೂ ಇಬ್ಬರು ಮಕ್ಕಳನ್ನು ದಾರುಣವಾಗಿ ಕೊಲೆಗೈದ ಅಪರಾಧಿಗೆ ಪುತ್ತೂರು 5ನೇ ಹೆಚ್ಚುವರಿ ಸಷೆನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಮೂಲತಃ ಪುತ್ತೂರು ತಾಲೂಕಿನ ಪಾಣಾಜೆ ಅರ್ಧಮೂಲೆ ನಿವಾಸಿ ರಮೇಶ ನಾಯ್ಕ ಶಿಕ್ಷೆಗೀಡಾದ ಅಪರಾಧಿ.
ಮಂಗಳವಾರ ರಾತ್ರಿ 7.35ಕ್ಕೆ ನ್ಯಾಯಾಧೀಶ ಟಿ. ಶಿವಶಂಕರೇ ಗೌಡ ಮರಣದಂಡನೆ ತೀರ್ಪು ಪ್ರಕಟಿಸಿದರು. ಈ ತೀರ್ಪು ಪುತ್ತೂರು ನ್ಯಾಯಾಲಯದ ಇತಿಹಾಸದಲ್ಲಿ ಪ್ರಥಮವಾಗಿದ್ದು, 11 ವರ್ಷಗಳ ಬಳಿಕ ದ.ಕ. ಜಿಲ್ಲೆ ಮಟ್ಟದಲ್ಲಿ ಅಪರಾಧಿಯೊಬ್ಬನಿಗೆ ಮರಣ ದಂಡನೆ ಶಿಕ್ಷೆಯಾಗಿದೆ. ರಮೇಶ ನಾಯ್ಕ ತನ್ನ ಇಬ್ಬರು ಮಕ್ಕಳಾದ ಭುವನ್ರಾಜ್ (10) ಮತ್ತು ಕೃತಿಕಾ (4) ಎಂಬವರನ್ನು ನೀರಿನಲ್ಲಿ ಮುಳುಗಿಸಿ ಅಮಾನುಷವಾಗಿ ಕೊಲೆ ನಡೆಸಿದ ಅಪರಾಧಕ್ಕೆ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ.
ಘಟನೆ ವಿವರ: ಸೊಲ್ಲಾಪುರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಕೃಷ್ಣ ನಾಯ್ಕ ಎಂಬವರ ಪುತ್ರ ರಮೇಶ್ ನಾಯ್ಕ ತುಮಕೂರು ಜಿಲ್ಲೆಯ ಬನಶಂಕರಿ 2ನೇ ಸ್ಟೇಜ್ನ ಕುಮಟಾ ಲೇಔಟ್ನಲ್ಲಿ 'ಸೌರಭ ನಿಲಯ' ಎಂಬ ಮನೆ ಪಡೆದುಕೊಂಡು ಅಲ್ಲಿ ಪತ್ನಿ ಸುಂದರಿ, ಮಕ್ಕಳಾದ ಭುವನ್ರಾಜ್ ಮತ್ತು ಕೃತಿಕಾ ಹಾಗೂ ನಾದಿನಿ ಸುಜಾತರೊಂದಿಗೆ ವಾಸವಾಗಿದ್ದ. ತುಮಕೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದ ಪತ್ನಿ ಸುಂದರಿ ಅವರಿಗೆ ಬಳಿಕ ಮಂಗಳೂರಿನ ಅಳಪೆ ಶಾಖೆಗೆ ವರ್ಗಾವಣೆಯಾಗಿತ್ತು. ಬಳಿಕ ಅವರು ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸಿದ್ದರು. ಆದರೆ ನಾದಿನಿ ಸವಿತಾ ಅವರಿಗೆ ತುಮಕೂರಿನಲ್ಲಿರುವ ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗವಿದ್ದ ಕಾರಣ ಅವರು ಆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಜೊತೆಗೆ ತನ್ನ ತಾಯಿ ಸರಸ್ವತಿ ಅವರನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು.
ಸವಿತಾ, ಮೋಹನ್ ಎಂಬವರನ್ನು ಪ್ರೀತಿಸಿ ಮದುವೆಯಾಗಲು ಹೊರಟಿರುವುದನ್ನು ವಿರೋಧಿಸಿ ಆಕ್ಷೇಪ ವ್ಯಕ್ತಪಡಿಸಿದ್ದ ರಮೇಶ್, 2010 ಜೂ.14ರಂದು ಸವಿತಾ ಮತ್ತು ಆಕೆಯ ತಾಯಿಯ ಕೊಲೆ ಮಾಡಿ ಬಳಿಕ ಮೃತದೇಹವನ್ನು ನೀರಿನ ಟ್ಯಾಂಕ್ಗೆ ಹಾಕಿದ್ದ.
ಅಲ್ಲಿಂದ ಮಂಗಳೂರಿಗೆ ಆಗಮಿಸಿ ತನ್ನ ಪುಟ್ಟ ಮಕ್ಕಳಿಬ್ಬರನ್ನು ಪತ್ನಿ ಇಲ್ಲದ ವೇಳೆ ಪುತ್ತೂರಿಗೆ ಕಾರಿನಲ್ಲಿ ಕರೆತಂದು ತನ್ನ ಹಿಂದಿನ ಮನೆಯಿದ್ದ ಪಾಣಾಜೆ ಬಳಿಯ ಕೆರೆಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಪುತ್ತೂರು ನ್ಯಾಯಾಲಯವು ವಿಧಿಸಿದ ಮರಣದಂಡನೆ ತೀರ್ಪು ಪ್ರತಿಯನ್ನು ಉಚ್ಚ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಒಪ್ಪಿಗೆ ಬಂದ ಬಳಿಕ ಶಿಕ್ಷೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ದೂರುದಾರರ ಪರವಾಗಿ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

