ದಕ್ಷಿಣ ಕನ್ನಡ

ಮುಖ್ಯೋಪಾಧ್ಯಾಯರ ಕೊರತೆ: ಕೇಳುವವರಿಲ್ಲ ಶಿಕ್ಷಕರ ಗೋಳು

Published On :

ಮಂಗಳೂರು: ದ.ಕ. ಜಿಲ್ಲೆಯ ಅರ್ಧದಷ್ಟು ಪ್ರೌಢಶಾಲೆಯಲ್ಲಿ ನಿಯೋಜಿತ ಮುಖ್ಯೋಪಾಧ್ಯಾಯರೇ ಇಲ್ಲ...
 ಜಿಲ್ಲೆಯಲ್ಲಿ ಒಟ್ಟು 161 ಸರ್ಕಾರಿ ಪ್ರೌಢಶಾಲೆಗಳಿದ್ದು, ಸುಮಾರು 80 ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆ ನಿರ್ದೇಶನದಂತೆ ಸಹಶಿಕ್ಷಕರಿಗೆ ಪಾಠ ಪ್ರವಚನದ ಜತೆಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದೆ. ದ.ಕ. ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಮುಖ್ಯೋಪಾಧ್ಯಾಯರ ಕೊರತೆ ಎದುರಿಸುತ್ತಿದ್ದು, ಹೆಚ್ಚಿನ ಶಾಲೆಗಳ ಮುಖ್ಯೋಪಾಧ್ಯಾಯರು ನಿವೃತ್ತಿ ಹೊಂದಿದ್ದರೆ, ಕೆಲವರು ವರ್ಗಾವಣೆಗೊಂಡಿದ್ದಾರೆ.
 ಪ್ರಸ್ತುತ ಪ್ರೌಢಶಾಲೆಯಲ್ಲಿರುವ ಹಿರಿಯ ಶಿಕ್ಷಕರರಿಗೆ ಮುಖ್ಯೋಪಾಧ್ಯಾಯರ ಜವಾಬ್ದಾರಿ ವಹಿಸಲಾಗಿದೆ. ಇದರೊಂದಿಗೆ ತರಬೇತಿ, ಜನಗಣತಿಗಳಿಗೆ ಅಲೆದಾಡುವ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಕ್ಷಣ ಇಲಾಖೆ ನಿಯಮದಂತೆ ಮುಖ್ಯೋಪಾಧ್ಯಾಯರ ನೇಮಕಾತಿಯನ್ನು ಎರಡು ವಿಧಾನಗಳಲ್ಲಿ ಮಾಡಬಹುದು. ಪ್ರಸ್ತುತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರಿಗೆ ಭಡ್ತಿ ನೀಡಬೇಕು. ಇಲ್ಲವೇ ಸರ್ಕಾರ ಮುಖ್ಯೋಪಾಧ್ಯಾಯರ ಹುದ್ದೆಗೆ ಹೊಸ ನೇಮಕಾತಿ ಮಾಡಬೇಕು.
ಈಗಾಗಲೇ ಶಿಕ್ಷಕರಿಗೆ ಜನಗಣತಿ, ತರಬೇತಿ, ಕಾರ್ಯಾಗಾರ ಎಂಬುವುದಾಗಿ ಸುತ್ತಾಡಿಸುತ್ತಿರುವ ಶಿಕ್ಷಣ ಇಲಾಖೆ, ಶಾಲೆಯ ಜವಾಬ್ದಾರಿಯನ್ನು ವಹಿಸಿ ಇನ್ನಷ್ಟು ಒತ್ತಡ ಹೇರಿದೆ.
 ಪ್ರೌಢಶಾಲೆಯ ಸಹ ಶಿಕ್ಷಕರು ಶಿಕ್ಷಣ ಇಲಾಖೆ ಉಪನಿರ್ದೇಶಕರ ನಿರ್ದೇಶನದಂತೆ ಮುಖ್ಯೋಪಾಧ್ಯಾಯರ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಎಲ್ಲ ಜವಾಬ್ದಾರಿಗಳನ್ನು ಶಿಕ್ಷಕರು ಮೌನವಾಗಿ ನಿಭಾಯಿಸುತ್ತಿದ್ದು, ಜತೆಗೆ ಇಲಾಖೆ ಅಧಿಕಾರಿಗಳ ಕಿರುಕುಳವನ್ನು ಸಹಿಸಿಕೊಳ್ಳುತ್ತಿದ್ದಾರೆ.
ಕೆಲಸ ಕಳೆದುಕೊಳ್ಳುವ ಭೀತಿಯಿಂದ ಶಿಕ್ಷಕರು ಅಧಿಕೃತವಾಗಿ ಈ ಕುರಿತು ಯಾವುದೇ ಮಾಹಿತಿ ನೀಡಲು ಮುಂದಾಗುತ್ತಿಲ್ಲ.
ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಹೀಗೆನ್ನುತ್ತಾರೆ.. ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಸರ್ಕಾರದ ಸವಲತ್ತು ಪಡೆಯಲು ಶಿಕ್ಷಣ ಇಲಾಖೆಗೆ ತೆರಳಿದರೆ ಅಲ್ಲಿ ಅಧಿಕಾರಿಗಳು ಯಾವುದೇ ಅನುದಾನ ಇಲ್ಲ, ನೀವು ದಾನಿಗಳಿಂದ ಪಡೆದುಕೊಳ್ಳಿ ಎಂಬ ನಿರ್ಲಕ್ಷ್ಯತನದ ಮಾತಾನಾಡುತ್ತಾರೆ.
ಮಕ್ಕಳ ಸಂಖ್ಯೆ ಕಡಿಮೆ ಇದೆ ಕೆಲಸದ ಒತ್ತಡ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ಸಬೂಬು ಹೇಳುತ್ತಿದೆ.  ಶಾಲೆಯಲ್ಲಿ 10 ರಿಂದ 100 ಮಕ್ಕಳಿದ್ದರೂ ಪಾಠ ಪ್ರವಚನ ಮಾಡಲೇಬೇಕು. ಅಲ್ಲದೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಬೇಕು. ಇದರೊಂದಿಗೆ ಇಲಾಖೆಗಳು ಆಗಾಗ ಕಳಿಸುವ ಸುತ್ತೋಲೆಗೆ ಉತ್ತರ ನೀಡಬೇಕು. ಇಷ್ಟೆಲ್ಲಾ ಒತ್ತಡಗಳ ನಡುವೆ ಕಾರ್ಯನಿರ್ವಹಿಸುವುದೇ ಕಷ್ಟವಾಗಿದೆ.
 'ಶಾಲೆಯ ತೊಂದರೆಗಳ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದರೆ, ಜಿಲ್ಲಾ ಪಂಚಾಯ್ತಿನಲ್ಲಿ ನಡೆಸುವ ಸಭೆಯಲ್ಲಿ ಈ ಘಟನೆ ಪ್ರಸ್ತಾಪಗೊಂಡರೆ, ಅದರ ಪ್ರತಿಫಲ ಅನುಭವಿಸಬೇಕಾದದ್ದು, ಮಾಹಿತಿ ನೀಡಿದ ಶಿಕ್ಷಕರು. ತಮಗಿಂತ ಚಿಕ್ಕ ವಯಸ್ಸಿನ ಇಲಾಖೆ ಅಧಿಕಾರಿಗಳಿಂದ ಬೈಗುಳ ಕೇಳಬೇಕಾದ ಪರಿಸ್ಥಿತಿ ತಮ್ಮದು' ಎನ್ನುತ್ತಾರೆ ನೊಂದ ಶಿಕ್ಷಕರೊಬ್ಬರು.
 ಒತ್ತಡದ ನಡುವೆಯೂ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಜಿಲ್ಲೆಯನ್ನು ಪ್ರಥಮ ಸ್ಥಾನ ತಲುಪಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 4 ಮಂದಿ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಭಡ್ತಿ ನೀಡಲಾಗಿದೆ. ಉಳಿದ ಹುದ್ದೆಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಯಾವುದೇ ಉತ್ತರ ಬಂದಿಲ್ಲ.
- ಮೋಸೆಸ್ ಜಯಶೇಖರ್, ಡಿಡಿಪಿಐ.
'999-2000 ಸಾಲಿನಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ತುಂಬಲಾಗಿತ್ತು. ದ.ಕ. ಜಿಲ್ಲೆಗೆ ಆಗಮಿಸುವ ಮುಖ್ಯೋಪಾಧ್ಯಾಯರು 3 ವರ್ಷಗಳ ನಂತರ ವರ್ಗಾವಣೆ ಪಡೆದು ತಮ್ಮೂರು ಸೇರುತ್ತಾರೆ. ಅಲ್ಲದೆ ಹಲವು ವರ್ಷಗಳಿಂದ ಮುಖ್ಯೋಪಾಧ್ಯಾಯರ ನೇಮಕಾತಿಯಲ್ಲಿ ದ.ಕ. ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ'
- ರಾಮಕೃಷ್ಣ ಶಿರೂರು.
ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ




-ವಜ್ರಾಕ್ಷಿ ಬಂಟ್ವಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.