ಬ್ರಹ್ಮರಕೂಟ್ಲು ಟೋಲ್ ವಸೂಲಿ ಆರಂಭ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬ್ರಹ್ಮರಕೂಟ್ಲುನಲ್ಲಿ ಗುರುವಾರ ಮುಂಜಾನೆಯಿಂದ ನಿರೀಕ್ಷೆಯಂತೆ ವಾಹನಗಳಿಂದ ಟೋಲ್ ವಸೂಲಿಗೆ ಚಾಲನೆ ದೊರೆತರೆ, ಇತ್ತ ಪಾಣೆಮಂಗಳೂರು ನೇತ್ರಾವತಿ ಸೇತುವೆ ಬಳಿ ಟೋಲ್ಗೇಟ್ ಸ್ಥಗಿತಗೊಂಡಿದೆ.
ಬುಧವಾರ ಟೋಲ್ಗೇಟ್ ಗುತ್ತಿಗೆದಾರ ಗೋಪಾಲಕೃಷ್ಣ ಮೆಲಾಂಟ ತಾವು ನೀಡಿದ್ದ ಹೇಳಿಕೆಯಂತೆ ಗುರುವಾರ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಪ್ರತಿಭಟನೆ ನಡೆಸಿದ ಬಳಿಕ ಟೋಲ್ ವಸೂಲಿ ಸ್ಥಗಿತಗೊಳಿಸಿದ್ದಾರೆ.
ವಿವಿಧ ಸಂಘಟನೆಗಳು, ಕಾಂಗ್ರೆಸ್ ಹೊರತುಪಡಿಸಿ ವಿವಿಧ ರಾಜಕೀಯ ಪಕ್ಷಗಳು 3 ಕಿ.ಮೀ. ಅಂತರದಲ್ಲಿ ಎರಡೂ ಕಡೆ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬ್ರಹ್ಮರಕೂಟ್ಲುವಲ್ಲಿ ನೂತನವಾಗಿ ಟೋಲ್ ಸಂಗ್ರಹ ಪೊಲೀಸ್ ಬಂದೋಬಸ್ತ್ನಲ್ಲಿ ಆರಂಭಗೊಂಡಿತ್ತು.
ಪಾಣೆಮಂಗಳೂರು ಟೋಲ್ ಗೇಟ್ ಬಳಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ, ಪುರಸಭಾ ಸದಸ್ಯರಾದ ದೇವದಾಸ ಶೆಟ್ಟಿ, ಗೋವಿಂದ ಪ್ರಭು, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಐದು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಇಲ್ಲಿ ಸುಂಕ ವಸೂಲಿ ಸ್ಥಗಿತಗೊಳಿಸಿ ಕೇಂದ್ರವನ್ನು ತೆರವು ಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಇದೇವೇಳೆ ಟೋಲ್ಗೇಟ್ ಗುತ್ತಿಗೆದಾರ ಮೇಲಾಂಟ ಹಾಜರಿದ್ದು, ಇಲಾಕಾಧಿಕಾರಿಗಳು ಸೂಚನೆ ನೀಡಿದರೆ ತಾನು ಇಲ್ಲಿನ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದರು. ಈ ಹಂತದಲ್ಲಿ ಸಿ.ಐ. ರಾಜಶೇಖರ ಮಿಶ್ರಿ ಮಧ್ಯಪ್ರವೇಶಿಸಿ ಇಲಾಖಾಧಿಯೊಂದಿಗೆ ಚರ್ಚಿಸಿದರು. ಪ್ರತಿಭಟನೆಯ ಸಂದರ್ಭ ಎಲ್ಲ ವಾಹನಗಳನ್ನು ಸುಂಕ ನೀಡದೆ ಪ್ರತಿಭಟನಾಕಾರರು ಕಳುಹಿಸಿದರು. ಆಕ್ರೋಶಿತ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಸ್ತೆ ಮಧ್ಯದಲ್ಲಿರುವ ಟೋಲ್ ಸಂಗ್ರಹದ ಕೇಂದ್ರವನ್ನು ತೆರವುಗೊಳಿಸಲು ಮುಂದಾದರು. ಆಗ ಬಿಜೆಪಿ ನಾಯಕರು ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ತಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಮೂರು ದಿನಗಳೊಳಗಾಗಿ ಪಾಣೆಮಂಗಳೂರು ಟೋಲ್ ವಸೂಲಿಯ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಅದುವರೆಗೆ ಇಲ್ಲಿ ಯಾವುದೇ ವಾಹನಗಳಿಂದ ಸುಂಕ ವಸೂಲಿ ಮಾಡದಂತೆ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಿದರು. ಇದೀಗ ಪಾಣೆಮಂಗಳೂರು ನೇತ್ರಾವತಿ ಸೇತುವೆ ಬಳಿ ವಾಹನಗಳಿಂದ ಸುಂಕ ವಸೂಲಿ ಸ್ಥಗಿತಗೊಂಡಿದೆ.
ಪ್ರತಿಭಟನೆಯಲ್ಲಿ ತಾ.ಪಂ. ಉಪಾಧ್ಯಕ್ಷ ಆನಂದ ಶಂಭೂರು, ಬಿಜೆಪಿ ಪ್ರಮುಖರಾದ ರಾಮ್ದಾಸ್ ಬಂಟ್ವಾಳ್, ಸುಲೋಚನಾ ಜಿ.ಕೆ. ಭಟ್, ದಿನೇಶ್ ಭಂಡಾರಿ, ಪುರುಷ ಎನ್. ಸಾಲ್ಯಾನ್, ಪುರುಷ ಸಾಲ್ಯಾನ್ ನರಿಕೊಂಬು, ರೋನಾಲ್ಡ್ ಡಿಸೋಜ ಅಮ್ಟಾಡಿ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ರಮೇಶ್ ಕುಡುಮೇರ್, ರಮಾನಾಥ ರಾಯಿ ಇದ್ದರು.
ಎಸ್ಡಿಪಿಐ ಪ್ರತಿಭಟನೆ: ಬ್ರಹ್ಮರಕೂಟ್ಲುವಿನಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬ್ರಹ್ಮರಕೂಟ್ಲುವಿನಲ್ಲಿ ಪ್ರತಿಭಟನೆ ನಡೆಸಿದರು.
ಟ್ರಾಫಿಕ್ ಜಾಮ್: ಬ್ರಹ್ಮರಕೂಟ್ಲುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಂಕ ವಸೂಲಿ ಆರಂಭವಾಗುತ್ತಿದ್ದಂತೆ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನಿರೀಕ್ಷೆಯಂತೆ ಅಡ್ಡಿಯಾಗಿದೆ. ಪ್ರತ್ಯೇಕ ಎರಡೂ ಕಡೆ ಎರಡು ಸಾಲುಗಳಲ್ಲಿ ಟೋಲ್ ವಸೂಲಿ ನಡೆಸಲಾಗುತ್ತಿದೆ. ಆದರೆ ಇಲ್ಲಿ ರಸ್ತೆ ಸಮರ್ಪಕವಾಗಿ ಅಗಲೀಕರಣವಾಗಿಲ್ಲದ್ದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
ಬೆಳಗ್ಗೆ ಸರ್ಕಾರಿ ಬಸ್ಸೊಂದನ್ನು ವಸೂಲಿಗಾರರು ತಡೆದು ಸುಂಕ ವಸೂಲಿಗೆ ಮುಂದಾದಾಗ ಪ್ರಯಾಣಿಕರು ಆಕ್ಷೇಪಿಸಿ ವಸೂಲಿಗಾರರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಆತ ಸ್ಥಳದಲ್ಲಿದ್ದ ಬಂಟ್ವಾಳ ನಗರ ಠಾಣೆಯ ಸಿಬ್ಬಂದಿಯೊಬ್ಬರ ಸಮ್ಮುಖದಲ್ಲೇ ರೌಡಿಯಂತೆ ವರ್ತಿಸಿದ್ದಾನೆ. ಸುಂಕ ವಸೂಲಿಯ ಮೊದಲ ದಿನವೇ ವಸೂಲಿಗಾರರ ವರ್ತನೆ ಸಾರ್ವಜನಿಕರನ್ನು ಕೆರಳಿಸಿದೆ.
ಬಸ್ ಪ್ರಯಾಣ ದರ ರು. 3 ಹೆಚ್ಚಳ?
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73 ಬಿ.ಸಿ.ರೋಡ್-ಪಡೀಲು ರಸ್ತೆಯಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ಗುರುವಾರದಿಂದ ಟೋಲ್ ಸಂಗ್ರಹ ಪ್ರಾರಂಭವಾಗಿದೆ. ಇದೇ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ಗಳ ಪ್ರಯಾಣ ದರ ಹೆಚ್ಚಿಸುವಂತೆ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಈಗಾಗಲೇ ನೇತ್ರಾವತಿ ಸೇತುವೆಗೆ ಪಾಣೆಮಂಗಳೂರಿನಲ್ಲಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ. ಬಸ್ ಟ್ರಿಪ್ವೊಂದಕ್ಕೆ ರು. 20 ವಿಧಿಸಲಾಗುತ್ತಿದೆ. ಈ ಮೊತ್ತವನ್ನು ಮಾಸಿಕ ಟೋಲ್ ಶುಲ್ಕವಾಗಿ ಕೆಎಸ್ಆರ್ಟಿಸಿ ಪಾವತಿಸುತ್ತಿದೆ. ಮಾಸಿಕ ರು. 2 ಲಕ್ಷ ಗುತ್ತಿಗೆದಾರರಿಗೆ ಶುಲ್ಕವಾಗಿ ನೀಡುತ್ತಿದ್ದು, ಇದಕ್ಕೆ ಕೆಎಸ್ಆರ್ಟಿಸಿ ಶೇ.10 ರಿಯಾಯ್ತಿ ಪಡೆದಿದೆ.
ಈಗ ಮೂರು ಪಟ್ಟು: ಬ್ರಹ್ಮರಕೂಟ್ಲುವಿನಲ್ಲಿ ಇನ್ನು ಮೂರು ಪಟ್ಟು ಹೆಚ್ಚು ಹೆದ್ದಾರಿ ಶುಲ್ಕ ನೀಡಬೇಕಾಗಿದೆ. ಬಸ್ಗಳಿಗೆ ರು. 60 ನಿಗದಿಪಡಿಸಲಾಗಿದೆ. ಮಾಸಿಕ ಪಾಸ್ ಮಾಡಿಸಿಕೊಂಡರೆ ಕೆಎಸ್ಆರ್ಟಿಸಿ ರು. 16 ಲಕ್ಷ ಗುತ್ತಿಗೆದಾರರಿಗೆ ನೀಡಬೇಕು. ಪ್ರಸ್ತುತ ಪಾಣೆಮಂಗಳೂರು ಮತ್ತು ಬ್ರಹ್ಮರಕೂಟ್ಲು ಎರಡು ಕಡೆಗಳಲ್ಲೂ ಶುಲ್ಕ ವಸೂಲಿ ಪ್ರಾರಂಭವಾಗಿದೆ. ಎರಡು ಕಡೆಯೂ ಬಸ್ಗಳು ಶುಲ್ಕ ಪಾವತಿಸಿಯೇ ಸಂಚರಿಸಬೇಕಾಗಿದೆ.
3 ರು.ನಷ್ಟು ಪ್ರಯಾಣ ದರ ಹೆಚ್ಚಳ?: ಬ್ರಹ್ಮರಕೂಟ್ಲು ಮೂಲಕ ಸಂಚರಿಸುವ ಎಲ್ಲ ಕೆಎಸ್ಆರ್ಟಿಸಿ ಬಸ್ಗಳ ಪ್ರಯಾಣ ದರ ಇನ್ನೆರಡು ದಿನಗಳಲ್ಲಿ ಏರಿಕೆಯಾಗಲಿದೆ. ಬುಧವಾರ ಪ್ರಯಾಣ ದರ ಏರಿಸುವಂತೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಲಭಿಸಲಿದೆ. ಅದರಂತೆ ರು. 1ರಿಂದ 3ರ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್ 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ದರ ಏರಿಕೆ ವರೆಗೆ ಸದ್ಯಕ್ಕೆ ನಿತ್ಯ ಶುಲ್ಕ ತೆತ್ತು ಬಸ್ಗಳು ಸಂಚರಿಸುತ್ತಿದ್ದು, ಇದು ಕೆಎಸ್ಆರ್ಟಿಸಿಗೆ ಹೊರೆಯಾಗಿದೆ. ಮಂಗಳೂರು ವಿಭಾಗದಿಂದ ದಿನದಲ್ಲಿ 900 ಟ್ರಿಪ್ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಅದೇ ರೀತಿ ಪುತ್ತೂರು ವಿಭಾಗ, ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸರ್ಕಾರಿ ಬಸ್ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಏಕಕಾಲಕ್ಕೆ ದರ ಏರಿಕೆಯಾಗಲಿದೆ ಎಂದಿದ್ದಾರೆ.
ಪಾಣೆಮಂಗಳೂರಲ್ಲಿ ಶುಲ್ಕ ಸಂಗ್ರಹ ಇಲ್ಲ: ಪಾಣೆಮಂಗಳೂರು ಟೋಲ್ನ ಗುತ್ತಿಗೆದಾರರ ಅವಧಿ ಡಿ.15ಕ್ಕೆ ಮುಕ್ತಾಯಗೊಳ್ಳುತ್ತದೆ. ಹೊಸ ಟೋಲ್ ಸಂಗ್ರಹದ ಗುತ್ತಿಗೆಯನ್ನೂ ಅವರೇ ವಹಿಸಿದ್ದಾರೆ. ಆದ್ದರಿಂದ ಪಾಣೆಮಂಗಳೂರು ಟೋಲ್ನಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸಿದೆ. ಹೊಸ ಗುತ್ತಿಗೆ ಬಳಿಕ ಟೋಲ್ ಸಂಗ್ರಹ ಮುಂದುವರಿಯುವ ಸೂಚನೆ ಲಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

