ಆಹಾರದ ಹಕ್ಕಿಗೆ ರೈತರ ಸಹಕಾರ ಅಗತ್ಯ: ಪ್ರೊ. ಸ್ವಾಮಿನಾಥನ್
ಬೆಂಗಳೂರು: ರೈತರ ಸಹಕಾರದಿಂದ ಮಾತ್ರ ಆಹಾರದ ಹಕ್ಕು ನಿಜವಾದ ರೂಪದಲ್ಲಿ ಜಾರಿಗೊಳ್ಳಲು ಸಾಧ್ಯ
ಎಂದು ಯುನೆಸ್ಕೋ ಇಕೋ ಟೆಕ್ನಾಲಜಿ ಸ್ಥಾಪಕಾಧ್ಯಕ್ಷ ಪ್ರೊ.ಎಂ.ಎಸ್. ಸ್ವಾಮಿನಾಥನ್ ಹೇಳಿದ್ದಾರೆ.
ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ 'ಸುಸ್ಥಿರ ಕೃಷಿ ಅಭಿವೃದ್ಧಿಗೆ ವಿಸ್ತರಣಾ ಶಿಕ್ಷಣ ಕಾರ್ಯತಂತ್ರಗಳು- ಒಂದು ಜಾಗತಿಕ ದೃಷ್ಟಿಕೋನ' ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೇಂದ್ರದ ಆಹಾರ ಭದ್ರತಾ ಕಾಯ್ದೆಯಿಂದಾಗಿ ಆಹಾರದ ಹಕ್ಕಿಗೆ ಇನ್ನಷ್ಟು ಶಕ್ತಿ ದೊರೆತಂತಾಗಿದೆ. ಈ ಕಾಯ್ದೆ ಜಾರಿಗೊಂಡ ಕಾರಣ ಆಹಾರ ಉತ್ಪಾದನೆ ಜವಾಬ್ದಾರಿ ಹೆಚ್ಚಾಗಿದೆ. ಮನೆಯಲ್ಲೇ ಬೆಳೆಯುವ ರಾಗಿ, ಗೋಧಿ, ಅಕ್ಕಿಯಂತಹ ಬೆಳೆಗಳಿಂದ ಮಾತ್ರ ಆಹಾರ ಉತ್ಪನ್ನಗಳ ಬೇಡಿಕೆ ಪೂರೈಸಿ ಆಹಾರ ಭದ್ರತಾ ಕಾಯ್ದೆಯನ್ನು ಯಶಸ್ವಿಗೊಳಿಸಲು ಸಾಧ್ಯ ಎಂದರು.
ಪ್ರಸ್ತುತ ಕೃಷಿ ಕ್ಷೇತ್ರ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ನಗರೀಕರಣದಿಂದಾಗಿ ಕೃಷಿ ಭೂಮಿಗಳು ಮಾಯವಾಗುತ್ತಿದೆ. ಬೆಂಗಳೂರಿನಲ್ಲೂ ಕೃಷಿಗೆಂದು ಭೂಮಿ ಹುಡುಕುವುದು ಕಷ್ಟಸಾಧ್ಯವಾಗಿದೆ ಎಂದು ಹೇಳಿದರು.
ನೀರಿನ ಬಗೆಗಿನ ಜಗಳ ಮುಂದುವರಿದಿದೆ. ಹವಾಮಾನ ವೈಪರೀತ್ಯಗಳಂತಹ ಸವಾಲುಗಳ ಮಧ್ಯೆ ಕೃಷಿ ಕ್ಷೇತ್ರವನ್ನು ಇನ್ನಷ್ಟು ಉನ್ನತಮಟ್ಟಕ್ಕೆ ಒಯ್ಯಬೇಕಿದೆ. ಕಳೆದ ವರ್ಷ ಮಳೆಯೇ ಬಾರದೆ ಬೆಳೆ ನಷ್ಟವಾದರೆ ಈ ವರ್ಷ ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ ಎಂದರು.
1992ರ 'ಡಂಕಲ್ ಡ್ರಾಫ್ಟ್'ನಲ್ಲಿ ಕೃಷಿ ದೇಶಗಳ ಬಗ್ಗೆ ವಿವರ ನೀಡಲಾಗಿದೆ. ಯಾವುದೇ ಕೃಷಿ ರಾಷ್ಟ್ರವು
ಕೃಷಿಯನ್ನು ವ್ಯಾಪಾರವನ್ನಾಗಿ ನೋಡಬಾರದು. ಕೃಷಿ ಆಮದು ಮತ್ತು ರಫ್ತಿನ ವ್ಯವಹಾರ ಮಾತ್ರವಲ್ಲ. ರೈತರಿಗೆ ಪರಸ್ಪರ ಸಹಾಯಹಸ್ತ ಚಾಚುವುದು ಕೂಡ ಕೃಷಿ ರಾಷ್ಟ್ರಗಳ ಉದ್ದೇಶವಾಗಬೇಕು ಎಂದು ಹೇಳಲಾಗಿದೆ ಎಂದರು.
ದೇಶದಲ್ಲಿ ಬಡತನದ ವ್ಯಾಪ್ತಿ ಇನ್ನಷ್ಟು ಹೆಚ್ಚಿದೆ. ವಿಶ್ವದ 78 ಬಡ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶ 66ನೇ ಸ್ಥಾನದಲ್ಲಿದೆ. ನಮ್ಮ ದೇಶದ ಭವಿಷ್ಯ ಕೃಷಿ ಮೇಲೆ ಅವಲಂಬಿತವಾಗಿದೆ. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯಲು ಇನ್ನೂ ಎರಡು ಪಟ್ಟು ಹೆಚ್ಚಿನ ಶ್ರಮ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಆರ್. ದ್ವಾರಕನಾಥ್ ಮಾತನಾಡಿ, ಕರ್ನಾಟಕದಲ್ಲಿನ ಆರೂವರೆ ಕೋಟಿ ಜನರಲ್ಲಿ 4 ಕೋಟಿ ಜನರು ಕೃಷಿಕರು. ಅದರಲ್ಲಿ ಶೇ.85ರಷ್ಟು ಜನರು ಇನ್ನೂ ಕೂಡ ಒಣಭೂಮಿ ಬೇಸಾಯವನ್ನೇ ಅವಲಂಬಿಸಿಕೊಂಡಿದ್ದಾರೆ. ಇದರಲ್ಲಿ ಶೇ.35ರಷ್ಟು ಜನ ಸಣ್ಣ ಹಿಡುವಳಿದಾರರಾದರೆ ಶೇ.45ರಷ್ಟು ಜನ ಮಧ್ಯಮ ಹಿಡುವಳಿದಾರರು ಎಂದರು.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಯುವಕರು ಪದವಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಪದವಿ ಪಡೆದ ನಂತರ ಕೃಷಿ ಕ್ಷೇತ್ರಕ್ಕೆ ಮರಳುವ ಬದಲು ಎಂಎನ್ಸಿ ಕಂಪನಿಗಳಿಗೆ ದುಡಿಯಲು ಹೋಗುತ್ತಾರೆ. ವಿಶ್ವವಿದ್ಯಾಲಯಗಳು, ಕೃಷಿ ಇಲಾಖೆಗಳು ನೇರವಾಗಿ ರೈತರಿಗೆ ಹೆಚ್ಚಿನ ಆದ್ಯತೆ ಮೇಲೆ ಸಹಾಯ ನೀಡಬೇಕು ಎಂದು ಹೇಳಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಡುಪಿ ಕೊಂಡಾಡಿಯ ರೈತ ಯುವಕ ರವೀಂದ್ರ ನಾಯಕ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಸಂಬಂಧಿತ ಸಂಶೋಧನೆಗಳನ್ನು ನಡೆಸಿದ ಅನೇಕರನ್ನು ಗೌರವಿಸಲಾಯಿತು.
ಕೃಷಿ ವಿವಿ ಕುಲಪತಿ ಡಾ.ಕೆ. ನಾರಾಯಣ ಗೌಡ, ಡಾ.ಆರ್.ಆರ್. ಸಿನ್ಹ, ಡಾ.ಎ.ಜಿ. ಸಾವಂತ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

