ಸೌಜನ್ಯಾ ಪರ ಹೋರಾಟ ದಮನಿಸುವ ಹುನ್ನಾರ: ಮಹೇಶ್ ಶೆಟ್ಟಿ ತಿಮರೋಡಿ
ಬಂಟ್ವಾಳ: ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ಧ ಹೋರಾಟದಲ್ಲಿ ಭಾಗವಹಿಸದಂತೆ ಸ್ಥಾಪಿತ ಹಿತಾಸಕ್ತಿಗಳು ವಿದ್ಯಾರ್ಥಿ ಸಮೂಹದ ಮೇಲೆ ಒತ್ತಡ ಹೇರುತ್ತಿವೆ. ಆದರೆ ಇದಕ್ಕೆ ಅಂಜದೆ ಅನ್ಯಾಯದ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿ ಸಮುದಾಯ ಮುಂಚೂಣಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಪ್ರಜಾಪ್ರಭುತ್ವ ವೇದಿಕೆ ಸಂಚಾಲಕ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಬಂಟ್ವಾಳದಲ್ಲಿ ಸೌಜನ್ಯಾ ಪರ ಹೋರಾಟ ಸಮಿತಿ ವತಿಯಿಂದ ಬಿ.ಸಿ. ರೋಡ್ ತಾಲೂಕು ಕಚೇರಿ ಮುಂಭಾಗ ಸೋಮವಾರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿ ಅಂದಿನ ಪಿಎಸ್ಐ ಯೋಗೀಶ್ ಕುಮಾರ್, ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್, ವೈದ್ಯಾಧಿಕಾರಿಗಳನ್ನು ಸೂಕ್ತ ತನಿಖೆಗೊಳಪಡಿಸಿದರೆ ನಿಜ ಬಣ್ಣ ಬಯಲಾಗಲಿದೆ ಎಂದರು.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಯಲ್ಲೂ ಹೋರಾಟದ ಕಿಚ್ಚು ಇದ್ದರೂ ಒತ್ತಡದಿಂದಾಗಿ ಅವರ ಸಂವಿಧಾನದಬದ್ಧ ಹಕ್ಕಿನ ತೋರ್ಪಡಿಕೆಗೆ ಅಡ್ಡಗಾಲಾಗಿದೆ ಎಂದು ಕೇಮಾರು ಮಠದ ಶ್ರೀ ವಿಠಲದಾಸ ಸ್ವಾಮೀಜಿ ಹೇಳಿದರು.
ಕೊಲೆಗೀಡಾದ ವೇದವಲ್ಲಿ ಅವರ ಪತಿ ಡಾ. ಹರಳೆ ಮಾತನಾಡಿದರು.
ಕಣ್ಣೀರು ಸುರಿಸಿದ ಕುಸುಮಾವತಿ: 'ನನ್ನ ಮಗಳು ಇಂದು ಇರುತ್ತಿದ್ದರೆ ಸಮಾಜದಲ್ಲಿ ನಡೆಯುವ ಇಂತಹ ಅನ್ಯಾಯಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದಳು' ಎಂದು ಗದ್ಗದಿತರಾದ ಸೌಜನ್ಯಾ ತಾಯಿ ಕುಸುಮಾವತಿ, ವೇದಿಕೆ ಮುಂಭಾಗದಲ್ಲಿರುವ ವಿದ್ಯಾರ್ಥಿನಿ ಸಮೂಹವನ್ನು ಕಾಣುವಾಗ ನನ್ನ ಮಗಳ ನೆನಪಾಗುತ್ತದೆ ಎಂದು ಕಣ್ಣೀರುಗರೆದರು.
ಸೌಜನ್ಯಾ ತಂದೆ ಚಂದಪ್ಪ ಗೌಡ, ಹೋರಾಟ ಸಮಿತಿಯ ಭುವಿತ್ ಶೆಟ್ಟಿ, ಸಂತೋಷ್ ಇದ್ದರು. ಅನಿಲ್ ಗೌಡ ಪ್ರಸ್ತಾವಿಸಿದರು. ಸತೀಶ್ ಸಾಲ್ಯಾನ್ ಸ್ವಾಗತಿಸಿದರು. ಶೈಲೇಶ್ ವಂದಿಸಿದರು. ಆನಂದ ಕುಲಾಲ್ ನಿರೂಪಿಸಿದರು.
ಪ್ರತಿಭಟನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭೆಗೂ ಮುನ್ನ ಬಿ.ಸಿ. ರೋಡ್- ಕೈಕಂಬ ಪೊಳಲಿ ದ್ವಾರದಿಂದ ಕಾಲ್ನಡಿಗೆ ಜಾಥಾದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

