ಅನಧಿಕೃತ ವಿದ್ಯುತ್ ಸಂಪರ್ಕ ರು. 3.47 ಕೋಟಿ ದಂಡ- ಮೆಸ್ಕಾಂ ಜಾಗೃತ ದಳದ ಕಾರ್ಯಾಚರಣೆ
ಮಂಗಳೂರು: ಮೆಸ್ಕಾಂ ಜಾಗೃತದಳ ಅಧಿಕಾರಿಗಳು ಕೆಎಂಸಿ ಆಸ್ಪತ್ರೆಗೆ ದಾಳಿ ನಡೆಸಿ ದಂತ ವೈದ್ಯಕೀಯ ಕಾಲೇಜ್ ಮತ್ತು ಶಾಲೆಗೆ ಅನಧಿಕೃತವಾಗಿ 5 ವರ್ಷಗಳಿಂದ ವಿದ್ಯುತ್ ಸಂಪರ್ಕ ನೀಡಿರುವುದನ್ನು ಪತ್ತೆ ಹಚ್ಚಿದ್ದು, 3.47 ಕೋಟಿ ದಂಡ ವಿಧಿಸಿದ್ದಾರೆ.
ಹನೀಫ್ ಸಾಹೇಬ್ ಎಂಬವರ ದೂರಿನಂತೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉಡುಪಿ ಮೆಸ್ಕಾಂ ಜಾಗೃತದಳ ಪೊಲೀಸರು ಸೋಮವಾರ ಅತ್ತಾವರ ಕೆಎಂಸಿ ಆಸ್ಪತ್ರೆ 7 ಅಂತಸ್ತಿನ ಕಟ್ಟಡ ಪರಿಶೀಲನೆ ನಡೆಸಿದರು.
ವಿದ್ಯುತ್ ಬಳಕೆ ಮಾಡಿದ ಹಣವನ್ನು ಸರಿಯಾಗಿ ಪಾವತಿಸಲಾಗಿದೆ. ಆದರೆ ಎಳು ಅಂತಸ್ತಿನ ಕಟ್ಟಡಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತ್ಯೇಕ ವಿದ್ಯುತ್ ಸಂಪರ್ಕ ಲಭಿಸಿಲ್ಲ. ಆದ್ದರಿಂದ ಮೆಸ್ಕಾಂ ಅನುಮತಿ ಪಡೆಯದೆ ಸಂಪರ್ಕ ಕಲ್ಪಿಸಿದ್ದರು..
ಎಸ್ಪಿ ಪಿ.ಹರಿಶ್ಚಂದ್ರ, ಡಿವೈಎಸ್ಪಿ ವಿನಯ ಗಾಂವ್ಕರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು. ಭೂಗತ ಕೇಬಲ್ಗಳ ಮೂಲಕ ದಂತ ವೈದ್ಯಕೀಯ ಕಾಲೇಜ್ಗೆ ಕೆಎಂಸಿಯಿಂದ ವಿದ್ಯುತ್ ಅನಧಿಕೃತವಾಗಿ ಸರಬರಾಜು ಮಾಡಿರುವುದು ಬೆಳಕಿಗೆ ಬಂತು.
'ಮಹಾನಗರ ಪಾಲಿಕೆ ಪರವಾನಗಿ ಇರಲಿಲ್ಲ. ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ ಇಲಾಖೆ ಮತ್ತು ಮಹಾನಗರ ಪಾಲಿಕೆ ಪರವಾನಗಿ ನೀಡಲು ನಿರಾಕರಿಸಿತ್ತು' ಎಂದು ಜಾಗೃತದಳ ಡಿವೈಎಸ್ಪಿ ವಿನಯ ಗಾಂವ್ಕರ್ ತಿಳಿಸಿದ್ದಾರೆ.
ಇಂಥ ಅನಧಿಕೃತ ಸಂಪರ್ಕಗಳಿಂದ ಶಾರ್ಟ್ಸರ್ಕ್ಯೂಟ್ ದುರಂತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ವೈದ್ಯಕೀಯ ಕಾಲೇಜ್ ದಂಡ ನೀಡುವಲ್ಲಿ ವಿಳಂಬವಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಎಚ್ಚರಿಕೆ ನೀಡಿದೆ.
ಮಹಾನಗರ ಪಾಲಿಕೆ ಕಟ್ಟಡ ಸಕ್ರಮಗೊಳಿಸುವುದನ್ನು ನಿರೀಕ್ಷಿಸುತ್ತಿದ್ದೆವು. ಸಕ್ರಮಗೊಳಿಸಿದರೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆಯಬಹುದು. ಕಾಲೇಜ್ ಕೆಎಂಸಿ ಆಸ್ಪತ್ರೆಯ ಯುನಿಟ್ನಿಂದ ವಿದ್ಯುತ್ ಸರಬರಾಜಾಗುತ್ತಿದೆ. ವಿದ್ಯುತ್ ಬಿಲ್ ಸರಿಯಾಗಿ ಪಾವತಿಸುತ್ತಿದ್ದೇವೆ ಎಂದು ಕೆಎಂಸಿ ಮೂಲಗಳು ತಿಳಿಸಿವೆ.
--
ವಿಶ್ವ ನುಡಿಸಿರಿಗೆ ನಿಧಿ ಸಂಗ್ರಹ: ಸೀತಾರಾಮ ರೈ
ಪುತ್ತೂರು: ಡಿ.19,20,21,22ರಂದು ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ಗೆ ವಿಶ್ವ ನುಡಿಸಿರಿ ಪುತ್ತೂರು ತಾಲೂಕು ಘಟಕ ವತಿಯಿಂದ ಪ್ರತಿನಿಧಿ ಶುಲ್ಕ, ತೆಂಗಿನ ಕಾಯಿ ಮತ್ತು ಧನ ಸಂಗ್ರಹ ನಡೆಸಲಾಗುತ್ತಿದೆ ಎಂದು ಘಟಕದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ನುಡಿಸಿರಿಗೆ ಕೋಟಿಗೂ ಅಧಿಕ ವೆಚ್ಚವಾಗಲಿದೆ. ಇದನ್ನು ಭರಿಸಲು ಸಹಕರಿಸುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಘಟಕದ ಕಾರ್ಯಾಧ್ಯಕ್ಷ ಬಿ. ಪುರಂದರ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ 4 ದಿನಗಳ ಕಾಲ ಉಚಿತ ಊಟ, ಉಪಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ವಿಶ್ರಾಂತಿಗಾಗಿ 10 ಸಾವಿರಕ್ಕೂ ಅಧಿಕ ದಿಂಬು, ಹೊದಿಕೆ ಸಹಿತ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಘಟಕದ ಕೋಶಾಧಿಕಾರಿ ಬಿ. ಐತ್ತಪ್ಪ ನಾಯ್ಕ ಮತ್ತು ಆಳ್ವಾಸ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಉಷಾ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

