ಗುಮಾಸ್ತನಾದದ್ದೇ ತಪ್ಪಾಯ್ತು, ಮಾಸಾಶನಕ್ಕೆ ಕೊಳ್ಳಿ
ಮಂಗಳೂರು: ಎಂಡೋ ಸಂತ್ರಸ್ತರಿಗೆ ನೆರವು ನೀಡುವಲ್ಲಿ ಅಂಗವೈಕಲ್ಯ ಇರುವವರನ್ನು ಮಾಸಾಶನಕ್ಕೆ ಪರಿಗಣಿಸಬೇಕಾದ ಸರ್ಕಾರ, ಕುಟುಂಬದ ಯಜಮಾನನ ಆದಾಯವನ್ನು ಲೆಕ್ಕಹಾಕಿ ಅರ್ಜಿಯನ್ನೇ ತಳ್ಳಿ ಹಾಕಿದೆ. ಈ ಮೂಲಕ ಎಂಡೋ ಸಂತ್ರಸ್ತರ ಬದುಕಿಗೆ ಆಧಾರ ಕಲ್ಪಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಮಾನವೀಯತೆ ಮರೆತವರಂತೆ ವರ್ತಿಸುತ್ತಿದ್ದಾರೆ. ಎಂಡೋ ಸಂತ್ರಸ್ತರಿಗೆ ಸರ್ಕಾರ ನೀಡುವ ನೈಜ ನೆರವು ಇದುವೆಯೇ ಎಂದು ಪ್ರಶ್ನಿಸುವಂತಾಗಿದೆ.
ಇದು ಎಂಡೋಸಲ್ಫಾನ್ ಸಂತ್ರಸ್ತರ ಬದುಕಿಗೆ ಸರ್ಕಾರವೇ ಕೊಳ್ಳಿ ಇಡುತ್ತಿರುವ ಘಟನೆ. ಎಂಡೋಸಲ್ಫಾನ್ನಿಂದ ಬಾಲೆ ಬದುಕು ಕಳಕೊಂಡರೆ, ಆಕೆಯನ್ನು ಪೋಷಿಸಬೇಕಾದವರನ್ನು ದೂರ ಇಡುವ ಕೆಲಸ ಮಾಡುತ್ತಿದೆ.
10 ವರ್ಷದಿಂದ ನ್ಯೂನತೆ: ಪುತ್ತೂರು ತಾಲೂಕಿನ ಅಜ್ಜಿಕಲ್ಲು ನಿವಾಸಿ ಲಕ್ಷ್ಮಣ ನಾಯ್ಕರ ನಾಲ್ಕನೇ ಮಗು ರೇಶ್ಮಾ. ಹುಟ್ಟುವಾಗಲೇ ಶಾರೀರಿಕ ನ್ಯೂನ್ಯತೆಯಿಂದ ಬಳಲುತ್ತಿದ್ದಳು. ಕೈಕಾಲು ಸಪೂರ, ಕುತ್ತಿಗೆಗೆ ಬಲ ಇಲ್ಲ, ದಿನವಿಡೀ ಹಾಸಿಗೆಯಲ್ಲೇ ದಿನಚರಿ. ಮಾತೂ ಆಡೋಲ್ಲ, ನಿಲ್ಲುವುದಾಗಲೂ, ಕೂರುವುದಾಗಲೀ ಸಾಧ್ಯವಾಗುತ್ತಿಲ್ಲ.
ಪುತ್ರಿಯ ಸ್ಥಿತಿಗೆ ಮಮ್ಮಲ ಮರುಗಿದ ತಂದೆ ಲಕ್ಷ್ಮಣ ನಾಯ್ಕ 3 ವರ್ಷ ಸತತ ಔಷಧ ಮಾಡಿದರು. ಆದರೂ ಪ್ರಯೋಜನವಾಗಲಿಲ್ಲ.
ಈಗ ವಯಸ್ಸು 10 ವರ್ಷ ಕಳೆದರೂ ಇನ್ನೂ ಹಾಸಿಗೆಯಿಂದ ಮೇಲೇಳು ಆಗುತ್ತಿಲ್ಲ. ರೇಶ್ಮಾಗೆ ಶಿಕ್ಷಕಿಯೊಬ್ಬರು ಗೃಹ ಆಧಾರಿತ ಶಿಕ್ಷಣ ನೀಡುತ್ತಿದ್ದು, ಈಗ ನಾಲ್ಕನೇ ತರಗತಿ. ಆದರೆ ಓದಲೂ ಬರುತ್ತಿಲ್ಲ, ಬರೆಯಲೂ ಬರುತ್ತಿಲ್ಲ, ಮಾತೂ ಆಡುತ್ತಿಲ್ಲ. ರೇಶ್ಮಾಗೆ ಶೇ.85ರಷ್ಟು ಅಂಗವೈಕಲ್ಯ ಇದೆ ಎಂದು ವೈದ್ಯರು ಸರ್ಟಿಫಿಕೆಟ್ ನೀಡಿದ್ದಾರೆ.
ಜೀವನ ಸಂಕಷ್ಟ: ಲಕ್ಷ್ಮಣ ನಾಯ್ಕ 27 ವರ್ಷದಿಂದ ಆರ್ಲಪದವಿನ ಖಾಸಗಿ ಬ್ಯಾಂಕ್ನಲ್ಲಿ ಗುಮಾಸ್ತನಾಗಿರುವುದೇ ಸರ್ಕಾರದ ಸವಲತ್ತಿಗೆ ಮುಳುವಾಗಿದೆ.
ಉಳಿದ ಮೂವರು ಪುತ್ರಿಯರ ಹಾಗೂ ಓರ್ವ ಪುತ್ರನ ವಿದ್ಯಾಭ್ಯಾಸ ವೆಚ್ಚ, ಮನೆಯ ಖರ್ಚು ನೋಡಿಕೊಳ್ಳಬೇಕು. ಕೆಲವು ವರ್ಷ ಹಿಂದೆ ಹೊಸ ಮನೆ ನಿರ್ಮಿಸಿದ್ದು ಅದರ ಸಾಲದ ಕಂತು ಪ್ರತಿ ತಿಂಗಳು ಪಾವತಿಸಬೇಕು. ಸಾಲದ ಕಂತು ಕಳೆದು ಕೈಗೆ ಸಿಗುವುದು ನಾಲ್ಕೈದು ಸಾವಿರ ಮೊತ್ತ. ಇದರಲ್ಲೇ ಪುತ್ರಿಗೆ ಔಷಧೋಪಚಾರವೂ ಆಗಬೇಕು. ಅಡಕೆ ತೋಟವಿದ್ದರೂ 50 ಅಡಕೆ ಮರದಲ್ಲಿ ಯಾವ ಫಸಲು ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ಲಕ್ಷ್ಮಣ ನಾಯ್ಕ.
ಮಾನವೀಯತೆ ಮರೆತರು: ಎಂಡೋ ಸಂತ್ರಸ್ತರ ಪಟ್ಟಿಯಲ್ಲಿ ಇವರ ಪುತ್ರಿಯ ಹೆಸರು ಸೇರಿಸಿದ್ದಾರೆ. ಎಂಡೋ ಸಂತ್ರಸ್ತರ ಪರೀಕ್ಷೆಗೆ ಎರಡೆರಡು ಸಲ ಪುತ್ರಿಯನ್ನು ಪುತ್ತೂರು ಕ್ಯಾಂಪಿಗೆ ಕರೆದುಕೊಂಡು ಹೋಗಿದ್ದಾರೆ.
ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಎಂಡೋ ಸಂತ್ರಸ್ತರ ಪಟ್ಟಿಗೆ ಈಕೆಯನ್ನು ಸೇರಿಸಿದ ಕಾರಣ ಮಾಸಾಶನ ಕೋರಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಗುಮಾಸ್ತ ವೃತ್ತಿಯಲ್ಲಿರುವುದರಿಂದ ಆದಾಯ ಮಿತಿ ಮೀರುತ್ತದೆ.
ಹಾಗಾಗಿ ಮಾಸಾಶನ ನೀಡಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಅರ್ಜಿಯನ್ನು ತಿರಸ್ಕರಿಸಿದರು ಎಂದು ನೋವಿನಿಂದ ಹೇಳುತ್ತಾರೆ ಲಕ್ಷ್ಮಣ ನಾಯ್ಕ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

