ದಕ್ಷಿಣ ಕನ್ನಡ

ಕಾಡಾನೆ ದಾಳಿ: ಅಪಾರ ಬೆಳೆ ಹಾನಿ

Published On :

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಐನಕಿದು ಗ್ರಾಮದ ಕೆದಿಲ ಎಂಬಲ್ಲಿ ಕೃಷಿಕರ ತೋಟಗಳಿಗೆ ಕಳೆದೆರಡು ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತಿದ್ದು, ಅಪಾರ ಪ್ರಮಾಣದ ಕೃಷಿ ಬೆಳೆಗಳು ಹಾಗೂ ಕೃಷಿ ಉಪಕರಣಗಳನ್ನು ನಾಶ ಮಾಡಿದೆ.
ಸುಮಾರು ಆರು ತಿಂಗಳ ಹಿಂದೆ ಈ ಪರಿಸರದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ ತಲೆದೋರಿತ್ತು. ಬಳಿಕ ಸ್ವಲ್ಪ ಸಮಯಗಳಿಂದ ಕಾಡಾನೆ ಹಾವಳಿ ಇಳಿಮುಖಗೊಂಡಿತ್ತು. ಇದೀಗ ಮತ್ತೆ ಈ ಪರಿಸರದಲ್ಲಿ ಕಾಡಾನೆಗಳ ಸಮಸ್ಯೆ ತಲೆದೋರಿದ್ದು, ಇಲ್ಲಿಯ ಕೆದಿಲ ರಾಮಣ್ಣ ಗೌಡ ಎಂಬವರ ತೋಟಕ್ಕೆ ಮಂಗಳವಾರ ನುಗ್ಗಿದ ಕಾಡಾನೆಗಳ ಹಿಂಡು ಸುಮಾರು 400ಕ್ಕೂ ಮಿಕ್ಕಿ ಬಾಳೆ ಗಿಡಗಳನ್ನು ಗೊನೆ ಸಹಿತ ತಿಂದು ಕೆಡವಿ ಹಾಕಿ ನಾಶಮಾಡಿದೆ.
ಅಲ್ಲದೆ, ತೋಟಗಳಿಗೆ ನಿರಾವರಿಗೆಂದು ಅಳವಡಿಸಲಾದ ಕೃಷಿ ಸಲಕರಣೆಗಳನ್ನು ಕೂಡ ಮೆಟ್ಟಿ ಪುಡಿಗೈದು ಅಪಾರ ನಷ್ಟ ಉಂಟುಮಾಡಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಸುಬ್ರಹ್ಮಣ್ಯ ಚಂಪಾಷಷ್ಠಿ ದಿನ ರಾತ್ರಿ  ಸುಬ್ರಹ್ಮಣ್ಯದಿಂದ ಐನಕಿದು ಮಾರ್ಗವಾಗಿ ಹರಿಹರ ಕಡೆಗೆ ವಾಹನಗಳಲ್ಲಿ ತೆರಳುತ್ತಿದ್ದ ಕೆಲವರಿಗೆ ದಾರಿ ಮಧ್ಯೆ ಕಾಡಾನೆ ಎದುರಾಗಿತ್ತು. ಕಾಡಾನೆಗಳ ಉಪಟಳದಿಂದ ಹಾನಿ ಗೀಡಾದ ಕೃಷಿ ಬೆಳೆಗಳಿಗೆ ಪರಿಹಾರ ನೀಡುವಂತೆ ಮತ್ತು ಕಾಡಾನೆ ದಾಳಿಯಿಂದ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕೃಷಿಕ ರವಿ ಕೆದಿಲ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.