ಮೈಸೂರು ರಾಜ ಮನೆತನ, ಸುಬ್ರಹ್ಮಣ್ಯ ದೇವಾಲಯಕ್ಕೆ 200 ವರ್ಷಗಳ ನಂಟು
ಸುಬ್ರಹ್ಮಣ್ಯ: ಮೈಸೂರು ರಾಜರ ಆಡಳಿತ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಮಾರು 200 ವರ್ಷಗಳ ನಂಟಿದೆ. ಮೈಸೂರು ರಾಜರ ಆಡಳಿತದ ಅವಧಿಯಲ್ಲಿ ಮೈಸೂರು ಸರ್ಕಾರದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರೆ ಸಂದರ್ಭ ಸಕಲೇಶಪುರದ ಶಿರಸ್ತೇದಾರರ ಉಸ್ತುವಾರಿಯಲ್ಲಿ ಜಾತ್ರೆಗೆ ಬೇಕಾದ ಸಾಮಗ್ರಿಗಳು ಬರುತ್ತಿತ್ತು.
1942ರಲ್ಲಿ ಜಯಚಾಮರಾಜ ಒಡೆಯರು ಸುಬ್ರಹ್ಮಣ್ಯಕ್ಕೆ ಬಂದು ಒಂದು ದಿನ ಇಲ್ಲಿ ತಂಗಿದ್ದರು. ಇವರು ಬಿಸಿಲೆ ಮಾರ್ಗದ ಮೂಲಕ ಬರಲು ತಯಾರಿ ನಡೆದಿತ್ತು. ಆಗ ಮೈಸೂರು ಲೋಕೋಪಯೋಗಿ ಇಲಾಖೆಯಿಂದ ಬಿಸಿಲೆ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ಆ ಸಂದರ್ಭದಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಾಣವಾಗಿರಲಿಲ್ಲ. ಇವರ ಪ್ರವಾಸಕ್ಕೆಂದು ಮರದ ದಿಮ್ಮಿಗಳ ಮೂಲಕ ತಾತ್ಕಾಲಿಕ ಸೇತುವೆ ನಿರ್ಮಿಸಿ ಕರೆತರಲಾಗಿತ್ತು.
1964- 65ರಲ್ಲಿ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ ಕೂಡ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದು ದಿನದ ಪ್ರವಾಸ ಬಂದಿದ್ದರು. ಅವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಗಿತ್ತು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ಕೂಡ ಸುಬ್ರಹ್ಮಣ್ಯಕ್ಕೆ ಬಂದ ದಾಖಲೆ ಇದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2008ರ ಡಿಸೆಂಬರ್ 3ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಬ್ರಹ್ಮರಥೋತ್ಸವ ಸೇವೆ ನಡೆಸಿದ್ದಾರೆ.
ಪಾರುಪತ್ಯಗಾರರ ನೇಮಕ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಮೈಸೂರಿನ ಆಡಳಿತ ಪರವಾಗಿ ಕೆಲವೊಂದು ಸೇವೆಗಳು ದಿನನಿತ್ಯ ನಡೆಯುತ್ತಿದ್ದವು. ಮೈಸೂರು ರಾಜರ ವರ್ಧಂತಿ ದಿನ (ಹುಟ್ಟು ಹಬ್ಬ)ಕುಕ್ಕೆ ಸುಬ್ರಹ್ಮಣ್ಯದಿಂದ ಪ್ರಸಾದವನ್ನು ಕೊಂಡು ಹೋಗಿ ತಲುಪಿಸುವ ವ್ಯವಸ್ಥೆ ಕೂಡ ನಡೆಯುತ್ತಿತ್ತು.
ಮೈಸೂರಿನ ಆಡಳಿತದ ಕಡೆಯಿಂದ ಕೆಲವೊಂದು ಸೇವೆಗಳು ನಡೆಯುತ್ತಿದ್ದು, ಅದನ್ನು ನೋಡಿಕೊಳ್ಳಲು ಪಾರುಪತ್ಯಗಾರನನ್ನು ಸಂಬಳ ನೀಡಿ ನೇಮಿಸಿದ್ದರು. ಸುಮಾರು 10 ಮಂದಿಗೆ ಮೈಸೂರು ಆಡಳಿತದಿಂದ ಸಂಬಳ ನೀಡುತ್ತಿದ್ದು, ಅದರಲ್ಲಿ ಮುಖ್ಯವಾಗಿ ಪಾರುಪತ್ಯಗಾರ, ಅರ್ಚಕ, ಕಟ್ಟಿಗೆ ಕೋಲು ಹಿಡಿವವ, ನಿತ್ಯ ದೇವರಿಗೆ ಗರಿಕೆ ಕೊಡುವರೂ ಸೇರಿದ್ದರು. ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಜಾತ್ರೆ ಸಂದರ್ಭ ಮೈಸೂರಿನಿಂದ ಗಂಧದ ಕೊರಡು ನೀಡುವ ವ್ಯವಸ್ಥೆ ನಡೆಯುತಿತ್ತು. ಪ್ರತಿ ವರ್ಷ ಬಾಹರ್ ಹಜಾರ್ 12 ಸಾವಿರ ಜನಕ್ಕೆ ಜಾತ್ರೆ ಸಮಯ ಕೊಪ್ಪರಿಗೆ ಏರಿದ 15 ದಿನಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಬ್ರಹ್ಮಣ್ಯ ದೇವಳದಲ್ಲಿ ಪಾರುಪತ್ಯಗಾರರಾಗಿ ಶ್ರೀನಿವಾಸ್ ರಾವ್, ಶ್ರೀನಿವಾಸ ಶಾಸ್ತ್ರೀ ಹಾಗೂ ಅನಂತ ನಲ್ಲೂರಾಯ ಸೇವೆ ಸಲ್ಲಿಸಿದ್ದರು. ಅನಂತ ನಲ್ಲೂರಾಯರು 1974ರಿಂದ 78ರ ತನಕ ಪಾರುಪತ್ಯಗಾರರಾಗಿದ್ದು, ಇದೀಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಹಲವಾರು ಸೇವೆ: ಮೈಸೂರಿನ ರಾಜರ ಆಡಳಿತದಲ್ಲಿ ಬ್ರಹ್ಮರಥ ಕೊಡಲಾಗಿತ್ತು ಎಂಬ ಮಾಹಿತಿ ಇದ್ದರೂ ಸ್ಪಷ್ಟವಾದ ಯಾವುದೇ ದಾಖಲೆಗಳಿಲ್ಲ. ಆದರೆ, ಹಲವಾರು ಸೇವೆಗಳು ನಡೆಯುತ್ತಿತ್ತು. ಇದಕ್ಕೆ ಉದಾಹರಣೆಯಾಗಿ ಮೈಸೂರು ಮೃಷ್ಟಾನ್ನ ಸೇವೆ ಪ್ರಯುಕ್ತ ದಿನ ನಿತ್ಯ 8 ಜನಕ್ಕೆ ಅನ್ನದಾನ ಹಾಗೂ ನಿತ್ಯ ಸೇವೆಯಲ್ಲಿ ಸಹಸ್ರನಾಮ ಅರ್ಚನೆ ಕೂಡ ನಡೆಯುತಿತ್ತು.
ಮೈಸೂರಿನ ರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರು, ಜಯಚಾಮರಾಜ ಒಡೆಯರ ಭಾವಚಿತ್ರವನ್ನು ದೇವಳದ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ಅದು ಹಾಳಾದುದರಿಂದ ಅದನ್ನು ಇತ್ತೀಚೆಗೆ ತೆಗೆಯಲಾಗಿದೆ ಎಂದು ಮೈಸೂರು ಆಡಳಿತದಲ್ಲಿ ಸುಬ್ರಹ್ಮಣ್ಯದ ಪಾರುಪತ್ಯಗಾರರಾಗಿ ಸೇವ ಸಲ್ಲಿಸಿದ ವೇ.ಮೂ. ಅನಂತ ನಲ್ಲೂರಾಯರ ಅನುಭವದ ಮಾತುಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

