ದಕ್ಷಿಣ ಕನ್ನಡ

ಬಾಕಿ ಕಾಮಗಾರಿ ತ್ವರಿತಕ್ಕೆ ನಿರ್ಮಿತಿಗೆ ಸೂಚನೆ

Published On :

ಮಂಗಳೂರು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೈಗೊಳ್ಳಬೇಕಾದ ನಿರ್ವಹಣೆ ಸೇರಿದಂತೆ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ತಿಗೊಳಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ತಾಕೀತು ಮಾಡಿದ್ದಾರೆ.
ಶುಕ್ರವಾರ ವೆನ್ಲಾಕ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಅವರು, ಆಸ್ಪತ್ರೆಯ ಸ್ವಚ್ಛತೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ಮುಂಭಾಗ ಕಂಪೌಂಡ್ ನಿರ್ಮಾಣ, ಇನ್ನಿತರ ದುರಸ್ತಿಗೆ ಸೇರಿದಂತೆ ವಿವಿಧ ಕಾಮಗಾರಿಗೆ 2011ರಲ್ಲಿ ರು. 70 ಲಕ್ಷ ಬಿಡುಗಡೆ ಮಾಡಲಾಗಿತ್ತು. ಆದರೆ ಇದುವರೆಗೆ ಕಾಮಗಾರಿ ಮುಕ್ತಾಯವಾಗಿಲ್ಲ. ತಕ್ಷಣವೇ ಕಾಮಗಾರಿ ಮುಗಿಸಬೇಕು. ತಪ್ಪಿದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ನಿರ್ಮಿತಿ ಕೇಂದ್ರ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಆಸ್ಪತ್ರೆ ಆವರಣದಲ್ಲಿ ಕೊಳಚೆ ನೀರು, ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ಸಚಿವ ಖಾದರ್, ಆಸ್ಪತ್ರೆ ನಿರ್ವಹಣೆಗೆ ಪ್ರತ್ಯೇಕ ವಿಭಾಗ ತೆರೆಯುವುದು ಅಥವಾ ಹೊರಗುತ್ತಿಗೆಗೆ ನೀಡುವ ಬಗ್ಗೆ ವರದಿ ನೀಡುವಂತೆ ಇಲಾಖೆ ಎಂಜಿನಿಯರ್‌ಗೆ ಸೂಚಿಸಿದರು.
ವೆನ್ಲಾಕ್ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆ ಮಧ್ಯೆಯ ಒಪ್ಪಂದ ಪ್ರಕಾರ, ಸ್ವಚ್ಛತೆ, ನಿರ್ವಹಣೆ, ವೈದ್ಯಕೀಯ ಹಾಗೂ ಔಷಧ ಸೇವೆಯನ್ನು ಕೆಎಂಸಿ ಆಸ್ಪತ್ರೆ ನೀಡಬೇಕು. ಈ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎಂಬ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆಸ್ಪತ್ರೆ ವೈದ್ಯಾಧಿಕಾರಿಗಳು, ಕೆಎಂಸಿ ಆಡಳಿತದ ಜತೆ ಶೀಘ್ರವೇ ಮಾತುಕತೆ ನಡೆಸಲಾಗುವುದು. ಆಸ್ಪತ್ರೆ ನಿರ್ವಹಣೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಆಸ್ಪತ್ರೆ ಸಮಿತಿ ಸಭೆ ಕಡ್ಡಾಯ ನಡೆಸಬೇಕು ಎಂದು ಹೇಳಿದರು.
ಆಸ್ಪತ್ರೆಯ ಕುಂದುಕೊರತೆ ನಿವಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದ ಸಚಿವ ಖಾದರ್, ಖಾಲಿ ಹುದ್ದೆ ಭರ್ತಿ, ದಾದಿಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರವಾಗುತ್ತಿರುವ ಹಿನ್ನೆಲೆಯಲ್ಲಿ ವೇತನ ನೀಡಿಕೆಯಲ್ಲಿ ತುಸು ವಿಳಂಬವಾಗಿರಬಹುದು. ವಾರದಲ್ಲಿ ವೇತನ ಪಾವತಿಯಾಗುವ ಭರವಸೆ ನೀಡಿದರು.
ವೆನ್ಲಾಕ್‌ಗೆ ಆಧುನಿಕ ಸ್ಪರ್ಶ: 167 ವರ್ಷ ಪುರಾತನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಹೊರ ಆವರಣಕ್ಕೆ ಆಧುನಿಕ ಟಚ್ ನೀಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ತಾಂತ್ರಿಕ ವರದಿ ತಯಾರಿಸುವಂತೆ ಇಲಾಖೆ ಎಂಜಿನಿಯರ್‌ಗೆ ಸೂಚನೆ ನೀಡಿದರು.
ರು. 20 ಕೋಟಿ ವೆಚ್ಚದಲ್ಲಿ 350 ಬೆಡ್‌ನ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು. ಅಲ್ಲದೆ ಅತ್ತಾವರದಲ್ಲಿ ಆರೋಗ್ಯ ಸೌಧ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧವಾಗಿದೆ. ಉಳ್ಳಾಲ ಸೇರಿದಂತೆ ಆಯ್ದ ನಗರಗಳಲ್ಲಿ ಪಾಲಿ ಕ್ಲಿನಿಕ್ ನಿರ್ಮಿಸಲಾಗುವುದು ಎಂದು ಹೇಳಿದರು.  
ವೆನ್ಲಾಕ್ ಆವರಣದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ತೆರೆಯುವ ಪ್ರಸ್ತಾಪ ಮಾಡಿದ ಸಚಿವ ಖಾದರ್, ಸರ್ಕಾರ ಇನ್ನು ಹೆಚ್ಚು ಸರ್ಕಾರಿ ಆಸ್ಪತ್ರೆ ತೆರೆಯುವುದಿಲ್ಲ. ಹಾಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚು ಮಾಡಲಿದ್ದು, ಅದನ್ನೇ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಪಿಜಿ ಕೋರ್ಸ್: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ 2 ವರ್ಷಗಳ ಸ್ನಾತಕೋತ್ತರ ಕೋರ್ಸ್ ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ವಿನಯರಾಜ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ವರಿ ದೇವಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.