ಭ್ರಷ್ಟರಿಗೆ ತ್ವರಿತ ಶಿಕ್ಷೆಯಾಗಲಿ: ನ್ಯಾ.ಸಂತೋಷ್ ಹೆಗ್ಡೆ
ಪುತ್ತೂರು: ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಯಲವು 6 ತಿಂಗಳೊಳಗೆ ತ್ವರಿತವಾಗಿ ಇತ್ಯರ್ಥಪಡಿಸಬೇಕು. ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸ್ವಲ್ಪ ಮಟ್ಟಿಗಾದರೂ ಭ್ರಷ್ಟ ಅಧಿಕಾರಿಗಳಿಗೆ, ಆರೋಪಿಗಳಿಗೆ ಕಾನೂನಿನ ಭಯ ಉಂಟಾಗಬಹುದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ಆರೋಪದಡಿ ಅನೇಕ ಅಧಿಕಾರಿಗಳು ಸಿಕ್ಕಿಬೀಳುತ್ತಾರೆ. ಬಂಧಿತರಾದರೆ ಜಾಮೀನಿನ ಮೇಲೆ ಬಿಡುಗಡೆಗೊಂಡು ಒಂದೆರಡು ದಿನಗಳಲ್ಲಿ ಉದ್ಯೋಗಗಳಿಗೆ ಮರಳುತ್ತಾರೆ. ಭ್ರಷ್ಟ ಅಧಿಕಾರಿಗಳ ಅಪರಾಧ ಸಾಬೀತಾಗಿ ಶಿಕ್ಷೆಯಾಗಬೇಕಾದರೆ 20ರಿಂದ 30 ವರ್ಷ ಕಾಯಬೇಕು. ಆ ಹೊತ್ತಿಗೆ ತಪ್ಪಿತಸ್ಥ ವೃದ್ಧನಾಗಿರುತ್ತಾನೆ ಅಥವಾ ಮೃತಪಟ್ಟಿರುತ್ತಾನೆ. ಆದ್ದರಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತಾಗಬೇಕು. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಭರವಸೆ ನಂಬಬೇಡಿ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣೆ ಸಂದರ್ಭ ಎಲ್ಲ ರಾಜಕೀಯ ಪಕ್ಷಗಳು ಜನರಿಗೆ ವಿವಿಧ ಭರವಸೆಗಳನ್ನು ನೀಡುತ್ತವೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಭರವಸೆಗಳನ್ನು ನೀಡಬಾರದು, ಅದು ಕಾನೂನಿಗೂ ವಿರುದ್ಧವಾಗಿದೆ. ಯಾವ ರಾಜಕೀಯ ಪಕ್ಷದವರ ಭರವಸೆಯನ್ನೂ ನಂಬಬೇಡಿ ಎಂದರು.
ಲಂಚ ನೀಡದೆ ಸರ್ಕಾರಿ ಕೆಲಸ ಸಿಗುವುದಿಲ್ಲ: ಲಂಚ ನೀಡದೆ ಸರ್ಕಾರಿ ಕೆಲಸ ಸಿಗುವುದಿಲ್ಲ. ಲಂಚ ನೀಡಿ ಕೆಲಸಕ್ಕೆ ಸೇರಿಕೊಂಡಾತ ಲಂಚ ಪಡೆಯಲು ಪ್ರಾರಂಭಿಸುತ್ತಾನೆ.
ದೇಶದ ಜನಸಂಖ್ಯೆಯನ್ನು ನಿಯಂತ್ರಿಸದೆ ಇದ್ದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಸಂತೋಷ್ ಹೆಗ್ಡೆ ಪ್ರತಿಪಾದಿಸಿದರು.
ಲೋಕಪಾಲ್ ಮಸೂದೆ ಜಾರಿಯಾಗಲಿ: ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಲಿರುವ ಜನಲೋಕಪಾಲ್ ಮಸೂದೆಯನ್ನು ಬೆಂಬಲಿಸಬೇಕಿದೆ. ಅದರಲ್ಲಿರುವ ತಪ್ಪು- ಒಪ್ಪುಗಳನ್ನು ಆಮೇಲೆ ಪ್ರಶ್ನಿಸೋಣ. ಮಸೂದೆ ಮಂಡನೆ ಮಾಡುವುದನ್ನೇ ಬೇಡ ಎಂದು ಹೇಳಿದರೆ ಮಂಡಿಸುವ ಮಸೂದೆಯೂ ಇಲ್ಲದಂತಾಗುತ್ತದೆ. ಈಗ ಬೇಡ ಎಂದು ತಿರಸ್ಕಾರ ಮಾಡಿದರೆ ಎಷ್ಟೋ ವರ್ಷಗಳ ಬಳಿಕ ಮಂಡನೆಯಗುವ ಸಾಧ್ಯತೆಯೂ ಇದೆ ಎಂದು ಹೇಳಿದರು.
ಸಂವಾದಲ್ಲಿ ಸುಮಾರು 300ಕ್ಕೂ ಹೆಚ್ಚು ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಸಮಾಜ ಸೇವಕರು ಭಾಗವಹಿಸಿದ್ದರು.
--
ಮದುವೆ ಮುಗಿಸಿ ಬರುತ್ತಿದ್ದ ವ್ಯಕ್ತಿಗೆ ತಲವಾರ್ನಿಂದ ಹಲ್ಲೆ ಯತ್ನ
ಮಂಗಳೂರು: ಮೋತಿಮಹಲ್ ಬಳಿ ಮದುವೆ ಮುಗಿಸಿ ಹೊರಬರುತ್ತಿದ್ದ ಉಚ್ಚಿಲ ನಿವಾಸಿ ಮೇಲೆ ದುಷ್ಕರ್ಮಿಗಳು ತಲವಾರ್ಗಳಿಂದ ಹಲ್ಲೆಗೆ ಯತ್ನಿಸಿದ್ದು, ಸ್ಥಳದಲ್ಲಿ ಮಹಿಳೆ, ಮಕ್ಕಳು ಇದ್ದ ಹಿನ್ನೆಲೆಯಲ್ಲಿ ರಕ್ತದ ಕೋಡಿ ಹರಿಯುವುದು ತಪ್ಪಿದೆ. ಸೋಮವಾರ ಮಧ್ಯಾಹ್ನ ಊಟ ಮುಗಿಸಿ ಉಚ್ಚಿಲ ರಫೀಕ್ ಹೊರಬರುತ್ತಿದ್ದರು, ಇದೇ ವೇಳೆ ಬೆಂಗಳೂರು ನಗರದ ನೋಂದಣಿ ಇರುವ ಸ್ಕಾರ್ಪಿಯೋ ಕಾರ್ ಬಂದಿದೆ. ಬಂದ ದುಷ್ಕರ್ಮಿಗಳು ಕೆಳಗೆ ಇಳಿದಿದ್ದು, ಕೈಯಲ್ಲಿ ತಲವಾರ್ಗಳಿತ್ತು. ಅಕ್ಕಪಕ್ಕದಲ್ಲಿ ಮಕ್ಕಳು ಓಡಾಡುತ್ತಿದ್ದರು. ಹಲ್ಲೆಗೆ ಮುಂದೆ ಬರುತ್ತಿದ್ದಂತೆಯೇ ರಫೀಕ್ ಮಕ್ಕಳ ನಡುವೆ ತೂರಿ ತಪ್ಪಿಸಿಕೊಂಡಿದ್ದಾರೆ. ಬಳಿಕ ಜನರೆಲ್ಲ ಒಟ್ಟಾಗಿ ಕಾರ್ಗೆ ಕಲ್ಲಿನಿಂದ ಹೊಡೆದಿದ್ದು, ಹಲ್ಲೆಗೆ ಬಂದವರು ಕಲ್ಲೇಟು ತಿಂದು ಕಾರ್ನಲ್ಲಿ ಪರಾರಿಯಾದರು.
ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ನಡೆಸುತ್ತಿದ್ದಾರೆ. ಹಾಡಹಗಲೇ ನಗರ ಮಧ್ಯೆ ಇಷ್ಟೆಲ್ಲ ನಡೆದರೂ ಪೊಲೀಸರಿಗೆ ಆರೋಪಿಗಳ ಕಾರ್ ಹಿಡಿಯಲು ಸಾಧ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

