ದಕ್ಷಿಣ ಕನ್ನಡ

ಕೃಷಿ ಪ್ರಧಾನ ದೇಶದಲ್ಲಿ ಕೃಷಿ ನೀತಿಯೇ ಇಲ್ಲ: ಪುಟ್ಟಣ್ಣಯ್ಯ

Published On :

ವಿದ್ಯಾಗಿರಿ, ಮೂಡುಬಿದಿರೆ: ಹೆಸರಿಗೆ ನಮ್ಮದು ಕೃಷಿ ಪ್ರಧಾನ ದೇಶ, ಕೃಷಿ ನೀತಿಯೇ ಇಲ್ಲ. ದೇಶಕ್ಕೆ ಊಟ ಕೊಡುವ ರೈತ ಎಲ್ಲದಕ್ಕೂ ಸರ್ಕಾರವನ್ನು ಬೇಡುವ ಸ್ಥಿತಿ ಇದೆ. ಬ್ರಿಟಿಷರು ನಮ್ಮನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದರೂ ನಮ್ಮಲ್ಲಿ ಇರುವುದು ಮಾತ್ರ ಗುಲಾಮಗಿರಿ ವ್ಯವಸ್ಥೆ ಎಂದು ರೈತ ಮುಖಂಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದ್ದಾರೆ.
ವಿಶ್ವನುಡಿಸಿರಿಯಲ್ಲಿ ಶುಕ್ರವಾರ ಅವರು 'ಕೃಷಿ ನಾಡಿನ ಕೃಷಿ ಬದುಕು' ಕುರಿತು ವಿಶೇಷ ಉಪನ್ಯಾಸ ನೀಡಿದರು.
3 ಲಕ್ಷ ಕೃಷಿಕರ ಆತ್ಮಹತ್ಯೆ: ದೇಶದಲ್ಲಿ ಯಾವ ಕಾರ್ಮಿಕ, ರಾಜಕಾರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ? ಆದರೆ ದೇಶಕ್ಕೆ ಅನ್ನ ಕೊಡುವ, ಮಾನ ಮುಚ್ಚುವ ಬಟ್ಟೆ ಕೊಡುವ, ಹತ್ತಿ ಬೆಳೆಯುವ ರೈತರು 3 ಲಕ್ಷ ಮಂದಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಪ್ರಧಾನ ದೇಶವಾದರೂ ನಾವು ಇನ್ನೂ ಕೃಷಿಯನ್ನು ಒಂದು ಜ್ಞಾನ ಎಂದು ಪರಿಗಣಿಸಿಲ್ಲ. ಪಠ್ಯದಲ್ಲಿ ಕೃಷಿ ಇಲ್ಲ. ಕೇವಲ ಕಬ್ಬು ಬೆಳೆಯಿಂದ 26 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಆದರೆ, ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಿನ್ನ ಇಲ್ಲದಿದ್ದರೂ ಬದುಕಬಹುದು ಆದರೆ, ಊಟ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಸತ್ಯ ಎಂಬುದು ಗೊತ್ತಿದ್ದೂ ನಾವು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದರು.
ಕೃಷಿಕರ ಬಗ್ಗೆ ಕಾಳಜಿ ಇಲ್ಲ. ಕೃಷಿಗೊಂದು ನೀತಿಯಿಲ್ಲ. ಕೃಷಿ ಬೆಳೆಗೆ, ಕೃಷಿಕರಿಗೆ ವೇತನ ಆಯೋಗವಿಲ್ಲ. ಸರ್ಕಾರಕ್ಕೆ ಉತ್ತಮ ಬೀಜ ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ಮೀರಿ ಬೆಳೆದ ಬೆಳೆಗೆ ಸರಿಯಾದ ಬೆಲೆಯಿಲ್ಲ. ಇದೆಲ್ಲದರ ಬದಲು ಎಲ್ಲ ಭೂಮಿಯನ್ನು ಸರ್ಕಾರವೇ ಇಟ್ಟುಕೊಳ್ಳಲಿ, ರೈತರು ಸರ್ಕಾರಿ ನೌಕರರಂತೆ ಸಮಯಕ್ಕೆ ಸರಿಯಾಗಿ ಬಂದು ದುಡಿದು ಹೋಗುತ್ತೇವೆ ಎಂದು ಸರ್ಕಾರದ ರೈತ ವಿರೋಧಿ ನೀತಿಯನ್ನು ಲೇವಡಿ ಮಾಡಿದರು.
ನಮಗಿಂತ ಕೆಟ್ಟವರು ಯಾರೂ ಇಲ್ಲ: ರಾಜ್ಯದಲ್ಲಿ ಎಲ್ಲರೂ ನೀರಿನ ಬಗ್ಗೆ ಮಾತನಾಡುತ್ತಾರೆ. ಕಾವೇರಿಯಲ್ಲಿ ಲಭ್ಯವಿರುವ 77 ಟಿಎಂಸಿ ಹಾಗೂ 380 ಟಿಎಂಸಿ ನೀರನ್ನು ಬಳಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ನಾವು ಮತ್ತು ತಮಿಳುನಾಡಿನವರು 15 ಟಿಎಂಸಿ ನೀರಿಗಾಗಿ ಜಗಳ ಮಾಡುತ್ತೇವೆ. ಆದರೆ, ಎರಡು ರಾಜ್ಯದವರು ಶೇಖರಿಸಲು ಸಾಧ್ಯವಾಗದೆ 30 ಟಿಎಂಸಿ ನೀರು ಬಂಗಾಳಕೊಲ್ಲಿ ಸೇರುತ್ತಿದೆ. ನಮ್ಮ ಹಿಂದಿನ ಹೆಣ್ಣು ಮಕ್ಕಳು ತಮ್ಮ ದೇಹ ಮಾರಿ ರಾಜ್ಯದಲ್ಲಿ 42000 ಕೆರೆಗಳನ್ನು ಕಟ್ಟಿಸಿದ್ದರು. ಅಂತಹ ಕೆರೆಗಳನ್ನು ಇಂದು ಕಾಪಾಡಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ ಅಂದರೆ ನಮಗಿಂತ ಕೆಟ್ಟವರು ಯಾರೂ ಇಲ್ಲ ಎಂದು ಹೇಳಿದರು. ಡಾ. ಮೋಹನ ಆಳ್ವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.