ಹಸಿರು ಕ್ರಾಂತಿ ಹುನ್ನಾರದಿಂದ ರಾಸಾಯನಿಕ ಕೃಷಿ ಆಗಮನ
ಮೂಡುಬಿದಿರೆ: ದೇಶದಲ್ಲಿ ಹಸಿರು ಕ್ರಾಂತಿ ಹುನ್ನಾರದಿಂದ ರಾಸಾಯನಿಕ ಕೃಷಿ ಬಂತು. ನಂತರ ಚೀನಾ ಗೊಬ್ಬರ ಬಳಕೆಗೆ ಶುರು ಮಾಡಿದಾಗ ಕೃಷಿ ಹಾಗೂ ಜಾನುವಾರನ್ನು ಕಳೆದುಕೊಳ್ಳಬೇಕಾಯಿತು. ಭೂಮಿ ಸತ್ವ ಕಳೆದುಕೊಂಡಿತು. ಇಳುವರಿ ಕಡಿಮೆಯಾದಾಗ ಅನಿವಾರ್ಯವಾಗಿ ಮತ್ತೆ ಸಾವಯವ ಕೃಷಿಯತ್ತ ರೈತರು ಹೊರಳುತ್ತಿದ್ದು, ನೈಸರ್ಗಿಕ, ಸ್ವಾವಲಂಬಿ ಕೃಷಿಯತ್ತ ಮನ ಮಾಡಬೇಕು ಎಂಬುದು ರಾಜ್ಯ ಮಟ್ಟದ ಕೃಷಿಮೇಳದಲ್ಲಿ ವ್ಯಕ್ತವಾದ ಕಳಕಳಿ.
ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನಲ್ಲಿ ಮೊದಲ ಬಾರಿಗೆ ಸಾಹಿತ್ಯ ಸಡಗರಕ್ಕೆ ಕಳಸವಿಟ್ಟಂತೆ ಸಮ್ಮಿಳಿತವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯ ಮಟ್ಟದ ಕೃಷಿಮೇಳಕ್ಕೆ ಭಾನುವಾರ ತೆರೆಬಿತ್ತು. ಮೂರು ದಿನಗಳ ಕಾಲ ನಡೆದ ಕೃಷಿಮೇಳದ ಒಟ್ಟು ಹೂರಣವಾಗಿ ಕೊನೆಗೆ ಪರಿಸರಸ್ನೇಹಿ ಕೃಷಿ ಮತ್ತು ಲಾಭದಾಯಕ ಹೈನೋದ್ಯಮ ವಿಚಾರಗೋಷ್ಠಿ ನಡೆಯಿತು.
ಪ್ರಗತಿಪರ ಕೃಷಿಕರಾದ ಪುಣಚದ ಸುರೇಶ್ ಮತ್ತು ತಿಪಟೂರು ಮಾರಗೊಂಡನಹಳ್ಳಿಯ ಸಾವಯವ ಕೃಷಿಕ ಸದಾಶಿವಪ್ಪರ ಸ್ವಾನುಭವ ಮಂಡನೆ ರಾಸಾಯನಿಕ ಕೃಷಿ ಬಿಟ್ಟು ಹೊರಬನ್ನಿ, ಸಾವಯವ ಕೃಷಿ ಅಪ್ಪಿಕೊಳ್ಳಿ ಎಂಬ ಸಂದೇಶ ನೀಡುವಲ್ಲಿ ಸಫಲವಾಯಿತು. ಕರಾವಳಿ ಕೃಷಿಯನ್ನು ರಾಜ್ಯದ ವಿವಿಧ ಕಡೆಗಳಲ್ಲಿ ಅನುಸರಿಸಲಾಗುತ್ತದೆ. ಕೃಷಿ ನಷ್ಟ ಎಂದು ವಿಷ ಕುಡಿಯಬೇಡಿ, ನಮ್ಮ ಜತೆ ಬನ್ನಿ, ಕೃಷಿಯಲ್ಲಿ ಲಾಭ ಮಾಡಿಸಿ ತೋರಿಸುತ್ತೇನೆ. ನಗರಕ್ಕೆ ವಲಸೆ ಹೋಗುವ ಯುವಕರು ವಾಪಾಸ್ ಹಳ್ಳಿಗೆ ಬರಬೇಕು. ಕೃಷಿಯಲ್ಲಿ ಮಕ್ಕಳನ್ನು ಸ್ವತಃ ತೊಡಗಿಸಿಕೊಳ್ಳಬೇಕು ಎಂದು ಕಳಕಳಿ ವ್ಯಕ್ತಪಡಿಸಿದವರು ಸದಾಶಿವಪ್ಪ.
ಮಣ್ಣು ಸತ್ತರೆ ಎಲ್ಲಿಗೆ...?: ಮಾನವ ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ... ಎಂಬ ಅರ್ಥಗರ್ಭಿತ ಪ್ರಶ್ನೆ ಮುಂದಿಟ್ಟವರು ಬೆಂಗಳೂರು ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಡಾ. ದೇವ ಕುಮಾರ. ಉಪಸಂಹಾರದಲ್ಲಿ ಮಾತನಾಡಿದ ಅವರು, ಕೃಷಿ ಜತೆ ಹೈನುಗಾರಿಕೆ ರೈತರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇಂದಿನ ಕೃಷಿಯಲ್ಲಿ ರೈತರು ಹೆಚ್ಚೆಚ್ಚು ಸ್ವಾವಲಂಬಿಯಾಗಬೇಕು. ರಾಸಾಯನಿಕ ಬಳಕೆಯಿಂದ ಕೃಷಿಗೆ ಋಣಾತ್ಮಕ ಪರಿಣಾಮ ಬೀರುವುದಲ್ಲದೆ, ಅಂತರ್ಜಲ ಕಲುಷಿತಗೊಳ್ಳುತ್ತದೆ. ಕೃಷಿ ಬೆಲೆಯಲ್ಲಿನ ಏರುಪೇರು ತಪ್ಪಿಸಲು ಮಿಶ್ರ ಕೃಷಿ ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ಹೇಳಿದರು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕ ಡಾ. ಸತ್ಯನಾರಾಯಣ ಉಪನ್ಯಾಸ ನೀಡಿ ಸಾವಯವ ಕೃಷಿಯ ಅಗತ್ಯವನ್ನು ಪ್ರತಿಪಾದಿಸಿದರು.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

