ವಡ್ಡರ್ಸೆ: ಎನ್ಎಸ್ಎಸ್ ಶಿಬಿರದಲ್ಲಿ ಹಠಾತ್ ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿಯರು
ಕೋಟ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಕ್ಕೆ ಆಗಮಿಸಿದ್ದ ಸುಮಾರು 20 ಮಂದಿ ವಿದ್ಯಾರ್ಥಿನಿಯರು ಹಠಾತ್ತನೆ ಅಸ್ವತ್ಥರಾಗಿ ಪ್ರಜ್ಞಾಶೂನ್ಯರಾದ ಘಟನೆ ಇಲ್ಲಿನ ವಡ್ಡರ್ಸೆ ಗ್ರಾಮ ಪಂಚಾಯಿತಿ ಸಮೀಪದ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿದೆ.
ಉಡುಪಿ ತಾಲೂಕಿನ ಬಾರ್ಕೂರಿನ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಷನಲ್ ಸರ್ಕಾರಿ ಕಾಲೇಜಿನ ಪದವಿ ವಿದ್ಯಾರ್ಥಿಗಳ ರಾ.ಸೇ.ಯೋ. ವಾರ್ಷಿಕ ಶಿಬಿರ ಡಿ. 21ರಿಂದ 29ರವರೆಗೆ ಇಲ್ಲಿ ನಡೆಯುತ್ತಿದೆ.
ಒಟ್ಟು 46 ವಿದ್ಯಾರ್ಥಿನಿಯರು ಮತ್ತು 49 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದು, ಪ್ರತಿದಿನದಂತೆ ಬುಧವಾರ ರಾತ್ರಿಯೂ 11 ಗಂಟೆಯವರೆಗೆ ಸ್ಥಳೀಯರ ಮನರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಲ್ಲಿಂದ ತಾವು ಉಳಿದುಕೊಂಡಿದ್ದ ಸುಮಾರು 200 ಮೀಟರ್ ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದ ಈ ವಿದ್ಯಾರ್ಥಿನಿಯರು ಚೀರಾಡುತ್ತಾ ಹಿಂದಕ್ಕೆ ಓಡಿ ಬಂದು ಸಭಾಂಗಣದಲ್ಲಿ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡರು. ತಕ್ಷಣ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗುರುವಾರ ಅವರು ಚೇತರಿಸಿಕೊಂಡಿದ್ದಾರೆ.
ಸ್ಥಳೀಯರ ಉಪಟಳ?: ಮಂಗಳವಾರ ರಾತ್ರಿ ಎನ್ಎಸ್ಎಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇಳೆ ಸ್ಥಳೀಯ ಕೆಲವು ಹುಡುಗರು ಅನವಶ್ಯಕವಾಗಿ ಕೇಕೆ, ಸಿಳ್ಳು ಹಾಕಿ ಉಪಟಳ ಕೊಟ್ಟಿದ್ದರು ಎನ್ನಲಾಗಿದೆ. ನಂತರ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ ಮತ್ತು ಉಪನ್ಯಾಸಕರು ಕಾರ್ಯಕ್ರಮ ಸಾಂಗವಾಗಿ ನಡೆಯುವಂತೆ ಕ್ರಮ ಕೈಗೊಂಡು ಕಾರ್ಯಕ್ರಮ ಮುಂದುವರಿಸಲಾಗಿತ್ತು.
ಎಸ್ಪಿ ಡಾ. ಬೋರಲಿಂಗಯ್ಯ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮುಸುಕುಧಾರಿಗಳಿಂದ ಆತಂಕ: ತನಿಖೆಯ ವೇಳೆ ವಿದ್ಯಾರ್ಥಿನಿಯರು, ತಾವು ಸಭಾಂಗಣದಿಂದ ಉಳಿದುಕೊಂಡಿದ್ದ ಶಾಲೆಗೆ ಹೋಗುತ್ತಿದ್ದಾಗ, ಅಡ್ಡರಸ್ತೆಯಲ್ಲಿ 4 - 5 ಮಂದಿ ಜನ ಮುಸುಕುಧಾರಿಗಳು ತಮ್ಮನ್ನು ಅಡ್ಡಗಟ್ಟಿ ಹೆದರಿಸಿದರು, ಇದರಿಂದ ತೀವ್ರ ಭಯಭೀತರಾಗಿ ತಾವು ಕೂಗುತ್ತಾ ಹಿಂದಕ್ಕೆ ಓಡಿ ಹೋಗಿ ಬಿದ್ದುಬಿಟ್ಟೆವು ಎಂದಿದ್ದಾರೆ.
ಈ ಮಧ್ಯೆ, ಶಿಬಿರದಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಯಾರೋ ಕಿಡಿಗೇಡಿ ಯುವಕರು ಕ್ಲೋರೋಫಾರಂ ಸಿಂಪಡಿಸಿದ್ದಾರೆ, ವಿದ್ಯಾರ್ಥಿನಿಯರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂಬ ಗಾಳಿಸುದ್ದಿ ಹರಡಿ, ಮುಂಜಾನೆ ನೂರಾರು ಮಂದಿ ಸ್ಥಳೀಯ ಜನರು ತಂಡೋಪತಂಡವಾಗಿ ಶಿಬಿರಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸತೊಡಗಿದ್ದರು. ತಕ್ಷಣ ಕೋಟ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಆಸ್ಪತ್ರೆಗೆ ದಾಖಲು: ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿನಿಯರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗುರುವಾರ ಬೆಳಗ್ಗೆ ಎಂದಿನಂತೆ ಶಿಬಿರಾರ್ಥಿಗಳು ದೇವಸ್ಥಾನದ ಸುತ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಇದೇ ವೇಳೆ ಮತ್ತೆ ಇಬ್ಬರು ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿದ್ದರು, ಅವರನ್ನು ಸ್ಥಳೀಯರ ನೆರವಿನಿಂದ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನಾ ಸ್ಥಳಕ್ಕೆ ರಾತ್ರಿಯೇ ಡಿವೈಎಸ್ಪಿ ಪ್ರಭುದೇವ ಮಾನೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್. ನಾಯ್ಕ್ ಆಗಮಿಸಿ ಪರಿಶೀಲಿಸಿದ್ದರು. ಸ್ಥಳೀಯರಾದ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಮತ್ತು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಆಸ್ಪತ್ರೆಗೆ ಭೇಟಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಕ್ಲೋರೋಫಾರಂ ಕಾರಣವಲ್ಲ; ಎಸ್ಪಿ
ವಿದ್ಯಾರ್ಥಿನಿಯರ ಮೇಲೆ ಯಾರೂ ಕ್ಲೋರೋಫಾರಂ ಅಗಲಿ ಅಥವಾ ಇನ್ಯಾವುದೇ ಪ್ರಜ್ಞೆ ಕಳೆದುಕೊಳ್ಳುವಂತಹ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿಲ್ಲ, ಪ್ರಜ್ಞೆ ಕಳೆದುಕೊಳ್ಳುವುದಕ್ಕೆ ಅದು ಕಾರಣವೂ ಅಲ್ಲ ಎಂದು ಎಸ್ಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಸ್ಥಳೀಯ ಕೆಲವು ಕಿಡಿಗೇಡಿ ಯುವಕರನ್ನು ಸ್ವಲ್ಪ ಉದ್ಧಟತನದಿಂದ ವರ್ತಿಸಿದ್ದರು, ಈ ಬಗ್ಗೆ ಶಿಬಿರದ ಸಂಯೋಜಕರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರೇ ಬುಧವಾರ ರಾತ್ರಿ ಸಮಯ ಕಾದು ವಿದ್ಯಾರ್ಥಿಯರು ರಸ್ತೆ ದಾಟಿ ತಾವು ಉಳಿದುಕೊಂಡಿದ್ದ ಶಾಲೆಗೆ ಹೋಗುತ್ತಿದ್ದಾಗ ಮುಸುಕು ಹಾಕಿ ಅಡ್ಡಗಟ್ಟಿ ಹೆದರಿಸಿದ್ದು, ಕತ್ತಲಲ್ಲಿ ತೀವ್ರ ಭಯಭೀತರಾಗಿ ವಿದ್ಯಾರ್ಥಿಗಳು ಆಘಾತದಿಂದ ಪ್ರಜ್ಞೆ ಕಳೆದುಕೊಂಡಿರಬೇಕು ಎಂದು ಸಂಶಯಿಸಲಾಗಿದೆ. ಅಪರಾಧಿಗಳನ್ನು ಕೂಡಲೇ ಪತ್ತೆ ಮಾಡಲಾಗುತ್ತದೆ ಎಂದು ಎಸ್ಪಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

