ದಕ್ಷಿಣ ಕನ್ನಡ

ಕುಕ್ಕೆ ಕ್ಷೇತ್ರದಲ್ಲಿ ತುಳು ತೇರಿಗೆ ಸ್ವಾಗತ

Published On :

ಸುಬ್ರಹ್ಮಣ್ಯ: ಒಡಿಯೂರು ದತ್ತಗುರು ಸಂಸ್ಥಾನದ ವಿಜಯ ರಜತ ಸಂಭ್ರಮದ ಪೂರ್ವಭಾವಿಯಾಗಿ ನಡೆದ ತುಳುನಾಡ್ದ ಜಾತ್ರೆ ಹಿನ್ನೆಲೆಯಲ್ಲಿ ಪೂರ್ವ ಭಾಗವಾದ ಸುಳ್ಯದಿಂದ ಹೊರಟ ಮೂಡಾಯಿ ತುಳು ತೇರು ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿತು.
ಸುಬ್ರಹ್ಮಣ್ಯದ ಕುಮಾರಧಾರೆಯಲ್ಲಿ ಸಾಂಪ್ರದಾಯಿಕವಾಗಿ ರಥವನ್ನು ಸುಬ್ರಹ್ಮಣ್ಯದ ತುಳು ತೇರು ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಬೋಳಾರ್ ಮತ್ತು ಸದಸ್ಯರು ಸ್ವಾಗತಿಸಿದರು.  
ತಾಲೂಕು ತುಳು ತೇರು ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಮಲಾ ರಂಗಯ್ಯ, ಸಂಚಾಲಕ ನಂದರಾಜ್ ಸಂಕೇಶ, ಸಂಚಾಲಕ ಅಚ್ಚುತ್ತ ಗೌಡ, ಪ್ರಧಾನ ಕಾರ್ಯದರ್ಶಿ ಯು. ದುಗ್ಗಪ್ಪ, ಉಪಾಧ್ಯಕ್ಷ ಪ್ರಭಾಕರ ಪಡ್ರೆ ಹಾಗೂ ಬಿ. ವಿಠಲ್‌ರಾವ್, ಸುಧೀರ್ ಕುಮಾರ್ ಶೆಟ್ಟಿ, ಸೋಮಸುಂದರ ಶೆಟ್ಟಿ, ಮೋಹನದಾಸ ರೈ, ರತ್ನಾಕರ. ಎಸ್ ಮೊದಲಾದವರು ಕುಮಾರಧಾರದಲ್ಲಿ ತುಳು ತೇರನ್ನು ಬರಮಾಡಿಕೊಂಡರು.
ನಾಳೆ ಆನಂದೋತ್ಸವ
ಮಂಗಳೂರು: ಬಂಟ್ವಾಳ ಬಾಳೆಪುಣಿ ಅನಂಗ ಆನಂದ ಯುವಕ ಮಂಡಲ ವತಿಯಿಂದ ಡಿ. 29 ರಂದು ಆನಂದೋತ್ಸವ-2013 ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಯುವಕ ಮಂಡಲ ಕಟ್ಟಡಕ್ಕೆ ಬೆಳಗ್ಗೆ 9.30ಕ್ಕೆ ಯುವಜನ ಸೇವೆ, ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಶಿಲಾನ್ಯಾಸ ನೆರವೇರಿಸುವರು. ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ಅಂಗನವಾಡಿ ಕಟ್ಟಡವನ್ನು ಜಿಲ್ಲಾ.ಪಂ. ಸದಸ್ಯ ಸಂತೋಷ್ ಕುಮಾರ್ ರೈ ಉದ್ಘಾಟಿಸುವರು. ಜಿ.ಪಂ. ಅಧ್ಯಕ್ಷ ಕೆ. ಕೊರಗಪ್ಪ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಪಾಲ್ಗೊಳ್ಳುವರು ಎಂದು ಮಂಡಲದ ಸ್ಥಾಪಕಾಧ್ಯಕ್ಷ ಗುರುವಪ್ಪ ಬಾಳೆಪುಣಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಅಕ್ಷರಸಂತ ಹರೇಕಳ ಹಾಜಬ್ಬ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸನ್ಮಾನಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಪಾಲ್ಗೊಳ್ಳುವರು ಎಂದು ಹೇಳಿದರು. ಗೋಷ್ಠಿಯಲ್ಲಿ ಬಾಳೆಪುಣಿ ಗ್ರಾ.ಪಂ. ಅಧ್ಯಕ್ಷ ಗಿರೀಶ್ ಬೆಳ್ಳೇರಿ ಇದ್ದರು.
ನಾಳೆ ಸಮಾರೋಪ
ಮಂಗಳೂರು: ಜಮಿಯತುಲ್ ಫಲಾಹ್ ಸಂಘದ ವತಿಯಿಂದ ವರ್ಷಪೂರ್ತಿ ಆಚರಿಸಲಾಗುತ್ತಿದ್ದ ಕಾರ್ಯಕ್ರಮದ ಸಮಾರೋಪವು ಡಿ. 29 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಾದುದ್ದೀನ್ ಸಲಹಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಂಸದರಾದ ನಳಿನ್ ಕುಮಾರ್ ಕಟೀಲ್, ಜಯಪ್ರಕಾಶ್ ಹೆಗ್ಡೆ ಪಾಲ್ಗೊಳ್ಳುವರು ಎಂದರು.
ಸಂಘವು 2013 ಜನವರಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 10 ಘಟಕಗಳ ಮೂಲಕ ದ.ಕ. ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೇತನ ನೀಡುತ್ತಾ ಬಂದಿದೆ ಎಂದರು.
ಜ.1ರಂದು ಕೊಂಕಣಿ
ಆಲ್ಬಂ ಬಿಡುಗಡೆ
ಮಂಗಳೂರು: ಮಾ ಕ್ರಿಯೇಶನ್ಸ್ ಅರ್ಪಿಸುವ ಹಲೋ ದೆವಾ ಕೊಂಕಣಿ ಸಂಗೀತ ಆಲ್ಬಂ ಜ. 1 ರಂದು ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಂಚಾಲಕ ಅರ್ಥೂರ್ ಪಿರೇರಾ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮಾಂಡಣ್ ಸೊಬಾಣ್ ಅಧ್ಯಕ್ಷ ಎರಿಕ್ ಒಝಾರಿಯೊ ಅಧ್ಯಕ್ಷತೆ ವಹಿಸುವರು. ಎಕ್ಸ್‌ಪರ್ಟ್ ವಿದ್ಯಾಸಂಸ್ಥೆ ಅಧ್ಯಕ್ಷ ನರೇಂದ್ರ ನಾಯಕ್, ಕವಿತಾ ಟ್ರಸ್ಟ್ ಅಧ್ಯಕ್ಷ ಮೆಲ್ವಿನ್ ರೋಡ್ರಿಗಸ್ ಪಾಲ್ಗೊಳ್ಳುವರು ಎಂದು ಹೇಳಿದರು. ಆಲ್ಬಂನಲ್ಲಿ ಒಟ್ಟು 12 ಹಾಡುಗಳಿದ್ದು, 8 ಮಂದಿ ಸಂಗೀತ ಕಲಾವಿದರು ಧ್ವನಿ ನೀಡಿದ್ದಾರೆ ಎಂದರು.
ನಾಳೆ ಮಹಿಳಾ ಸಮಾವೇಶ
ಬಂಟ್ವಾಳ: ತಾಲೂಕು ಮಾತೃಶಕ್ತಿ ಸಂಗಮ ಸಮಿತಿ ವತಿಯಿಂದ ಬೃಹತ್ ಮಹಿಳಾ ಸಮಾವೇಶ ಭಾನುವಾರ ಶ್ರೀರಾಮ ವಿದ್ಯಾಕೇಂದ್ರದ ಮೈದಾನ ನಿವೇದಿತಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಚಾಲನ ಸಮಿತಿ ಪ್ರಕಟಣೆ ತಿಳಿಸಿದೆ. ಪೂರ್ವಾಹ್ನ 9ರಿಂದ ಮಹಿಳೆ ಹಾಗೂ ರಾಷ್ಟ್ರೀಯ ಚಿಂತನೆಗಳ ವಿವಿಧ ಗೋಷ್ಠಿಗಳು ನಡೆಯಲಿದ್ದು ಅಖಿಲ ಭಾರತ ರಾಷ್ಟ್ರ ಸೇವಿಕಾ ಸಮಿತಿಯ ಅಲಕಾ ಇನಾಂದಾರ್ ಉದ್ಘಾಟಿಸಲಿದ್ದಾರೆ. ಶ್ರೀಗುರುದೇವದತ್ತ ಸಂಸ್ಥಾನಮ್ ಒಡಿಯೂರಿನ ಶ್ರೀಮಾತಾನಂದಮಯೀ ಆಶೀರ್ವಚನ ನೀಡುವರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಸಹ ವಿಭಾಗ ಪ್ರಚಾರಕ ಪ್ರದೀಪ್ ದಿಕ್ಸೂಚಿ ಭಾಷಣ ಮಾಡಲಿದ್ದು ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸುವರು.
ಇಂದು ಹಗ್ಗಜಗ್ಗಾಟ
ಬಂಟ್ವಾಳ: ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ರಾಜ್ಯಮಟ್ಟದ ಹಗ್ಗಜಗ್ಗಾಟ  ಸ್ಪರ್ಧೆ ನಡೆಯಲಿದೆ. ಪಂದ್ಯಾವಳಿಯನ್ನು ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು.
ಪ್ರವೇಶ ಶುಲ್ಕ ಪಾವತಿಗೆ
ಇಂದು ಗಡುವು
ಮಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ 2013-14ನೇ ಶೈಕ್ಷಣಿಕ ವರ್ಷದ ಎಲ್ಲ ಕೋರ್ಸುಗಳ ಪ್ರವೇಶಾತಿದಂಡ ಶುಲ್ಕ ದಿನವನ್ನು ಡಿ. 28ರವರೆಗೆ ವಿಸ್ತರಿಸಲಾಗಿದೆ. ದ್ವಿತೀಯ ಬಿಎ. ಬಿಕಾಂ ವಿಬಾಗದ ಕನ್ನಡ ಹಾಗೂ ಸಮಾಜ ಶಾಸ್ತ್ರ ಪಠ್ಯಪುಸ್ತಕಗಳನ್ನು ಜನವರಿ ಮೊದಲ ವಾರದಲ್ಲಿ ವಿತರಿಸಲಾಗುತ್ತದೆ ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್
ತೀರ್ಪಿಗೆ ಬೆಂಬಲ
ಮಂಗಳೂರು: ಸಲಿಂಗ ಕಾಮದವನ್ನು ಅಪರಾಧಗೊಳಿಸುವ ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಬಲಿಸಿದೆ. ಏಡ್ಸ್ ವ್ಯಾಧಿಗೆ ಪ್ರಮುಖ ಕಾರಣವಾಗಿರುವ ಸಲಿಂಗಕಾಮವನ್ನು ಏಡ್ಸ್ ವಿರುದ್ಧ ತೆಗೆದುಕೊಂಡ ಕ್ರಮದಂತೆ ದಮನಗೊಳಿಸಬೇಕು ಎಂದು ಪಿಎಫ್‌ಐ ಪ್ರಕಟಣೆ ತಿಳಿಸಿದೆ.
ಕುಕ್ಕೆ ದೇಗುಲ ಮಾಜಿ ಪ್ರಧಾನ ಅರ್ಚಕ ನಿಧನ
ಉಪ್ಪಿನಂಗಡಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಮಾಜಿ ಪ್ರಧಾನ ಅರ್ಚಕ ಟಿ.ಕೇಶವ ಆಸ್ರಣ್ಣ ತೋಟಂತಿಲ (90) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಆಲಂಕಾರಿನ ಸ್ವಗೃಹದಲ್ಲಿ ನಿಧನರಾದರು.   ಅವರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 1945ರಿಂದ 45 ವರ್ಷ ಪ್ರಧಾನ ಅರ್ಚಕರಾಗಿದ್ದರು. ನಂತರ 1989ರಿಂದ 1999ರವರೆಗೆ ಶಾಂತಿಮೊಗರು ಬಾಲಸುಬ್ರಹ್ಮಣ್ಯ ದೇವಾಲಯದಲ್ಲಿಯು ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.  ಅವರು ಇಬ್ಬರು ಗಂಡು, ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.