ದ್ವಿತೀಯ- ತೃತೀಯ ರಂಗಕ್ಕೆ ಬ್ಯಾಂಕ್ ಆದ್ಯತೆ ನೀಡಿ: ತುಳಸಿ
ಮಂಗಳೂರು: ಗ್ರಾಮೀಣ ಬ್ಯಾಂಕ್ ಶಾಖೆಗಳ ವ್ಯವಹಾರ ಕ್ಷೀಣಿಸಿರುವುದರಿಂದ ಬ್ಯಾಂಕ್‌ಗಳು ಉದ್ಯಮ ರಂಗದ ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಹೊಸ ಕ್ಷೇತ್ರಗಳ ಕಡೆ ಗಮನಹರಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್‌ನ 152ನೇ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ನಗರ ಮತ್ತು ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಉತ್ತಮ ವ್ಯವಹಾರ ದಾಖಲಾಗಿದೆ. ಆದರೂ ಬ್ಯಾಂಕ್ ದ್ವಿತೀಯ ಕ್ಷೇತ್ರವಾದ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಹಾಗೂ ತೃತೀಯ ಕ್ಷೇತ್ರವಾದ ಶೈಕ್ಷಣಿಕ, ಗೃಹ ಚಟುವಟಿಕೆಗಳಿಗೆ ಗಮನಹರಿಸಬೇಕಾಗಿದೆ ಎಂದರು.
ವಿಶೇಷ ಆರ್ಥಿಕ ವಲಯದಲ್ಲಿ ಹಿಂದೆ ಕೇವಲ ಪೆಟ್ರೋಲಿಯಂ ಉತ್ಪನ್ನಗಳಿಗೆ ಮಾತ್ರ ಅವಕಾಶವಿತ್ತು. ಇದೀಗ ಪ್ಲಾಸ್ಟಿಕ್ ಸೇರಿದಂತೆ ಇತರ ಉತ್ಪನ್ನಗಳ ವ್ಯವಹಾರಕ್ಕೂ ಒಪ್ಪಿಗೆ ನೀಡಲಾಗಿದೆ. ಮಾತ್ರವಲ್ಲದೆ ಸಾಲ ಅರ್ಜಿಗಳನ್ನು ಆದ್ಯತೆಯ ಮೇರೆಗೆ ತುರ್ತು ವಿಲೇವಾರಿ ಮಾಡುವಲ್ಲಿ ಕ್ರಮ ವಹಿಸಬೇಕು. ಆರ್‌ಬಿಐ ನಿರ್ದೇಶನದಂತೆ ಒಂದು ತಿಂಗಳಿಗಿಂತ ಅಧಿಕ ಕಾಲ ಯಾವುದೇ ಸಾಲ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಗ್ರಾಮೋದ್ಯೋಗ ಆಯೋಗವು ಸಾಲಕ್ಕಾಗಿ ತಮಗೆ ಬಂದ ಅರ್ಜಿಯನ್ನು 3 ದಿನದೊಳಗೆ ಬ್ಯಾಂಕ್ ರವಾನಿಸಬೇಕು ಎಂದರು.
ಬಸವ ವಸತಿ ಯೋಜನೆಯಡಿ ಸರ್ಕಾರ ಜಿಲ್ಲೆಯಲ್ಲಿ 3 ಸಾವಿರ ಮನೆಗಳಿಗೆ ಮಂಜೂರಾಗಿದೆ. ಯೋಜನೆ ವೆಚ್ಚವು ರು. 5 ಲಕ್ಷ ಆಗಿದ್ದು, ಸರ್ಕಾರದಿಂದ ರು. 1.2 ಲಕ್ಷ ಸಬ್ಸಿಡಿ ದೊರೆಯುತ್ತದೆ. ಉಳಿದ ಹಣವನ್ನು ಬ್ಯಾಂಕ್ ಸಾಲದ ಮೂಲಕ ಫಲಾನುಭವಿಗಳಿಗೆ ಒದಗಿಸಲು ಬ್ಯಾಂಕ್ ಕ್ರಮ ಕೈಗೊಳ್ಳಬಹುದು ಎಂದರು.
ಲೀಡ್ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಐ.ಟಿ. ಸೇತುರಾಂ ಮಾತನಾಡಿ, ಜಿಲ್ಲಾ ಸಾಲ ಯೋಜನೆ 2013-14ರಡಿ ಅರ್ಧವಾರ್ಷಿಕ ಸಾಲ ವಿತರಣೆ ಗುರಿಯಾದ ರು. 3200 ಕೋಟಿಗೆ ಬದಲಾಗಿ ರು. 3444 ಕೋಟಿ ಸಾಲ ವಿತರಣೆ ಮೂಲಕ ಶೇ. 107 ಸಾಧನೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 90883 ಕಿಸಾನ್ ಕ್ರೆಡಿಟ್ ಕಾರ್ಡ್‌ದಾರರಿದ್ದು, ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರಾಯೋಜಿತ 111 ನೇಕಾರರ ಅರ್ಜಿಯಲ್ಲಿ 44 ಮಂದಿಗೆ ವಿವಿಧ ಶಾಖೆಗಳ ಮೂಲಕ ಒಟ್ಟು ರು. 14.85 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಅರ್ಜಿದಾರರು ನೇಕಾರಿಕೆಯಲ್ಲಿ ತೊಡಗಿಲ್ಲದ ಕಾರಣ ಈ ಕ್ಷೇತ್ರದಲ್ಲಿ ಪ್ರಗತಿ ಕುಂಠಿತವಾಗಿದೆ ಎಂದರು.
ಈ ಸಂದರ್ಭ ನಬಾರ್ಡ್‌ನ ಎಜಿಎಂ ಪ್ರಸಾದ್ ರಾವ್ 2014-15ನೇ ಸಾಲಿಗೆ ತಯಾರಿಸಿರುವ ಜಿಲ್ಲೆಯ 'ಸಂಭಾವ್ಯ ಯೋಜನೆ'(ಪೊಟೆನ್ಶಿಯಲ್ ಲಿಂಕ್ಡ್ ಪ್ಲಾನ್)ಯನ್ನು ಸಿಇಒ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಆರ್‌ಬಿಐ ಪ್ರತಿನಿಧಿ ವಿಜಯ ಕುಮಾರ್, ಲೀಡ್ ಬ್ಯಾಂಕ್ ನೂತನ ಯೋಜನೆಗಳ ನಿರ್ದೇಶಕ ಎ. ಮಂಜುನಾಥ್, ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಅಮರನಾಥ್ ಹೆಗ್ಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

