ತಾಲೂಕಿಗೂ ಬಂತು ಸಕ್ಕಿಂಗ್ ಯಂತ್ರ
ಮಂಗಳೂರು: ಈಗ ಜಿಲ್ಲಾ ಪಂಚಾಯ್ತಿ ಮೂಲಕ ಪ್ರತಿ ತಾಲೂಕಿಗೆ ಸರ್ಕಾರ ಸಕ್ಕಿಂಗ್ ಯಂತ್ರ ನೀಡುತ್ತಿದೆ. ಇದರಿಂದ ತಾಲೂಕು ಮಟ್ಟದಲ್ಲಿ ಮ್ಯಾನ್ಹೋಲ್ ಸಹಿತ ಗುಂಡಿಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸ ಸುಲಭವಾಗಲಿದೆ. ಕರೆ ಬಂದಲ್ಲಿಗೆ ತಕ್ಷಣ ಈ ಯಂತ್ರ ದೌಡಾಯಿಸಲಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರ ಇದನ್ನು ಕಾರ್ಯಗತಗೊಳಿಸುತ್ತಿದೆ.
ಸಣ್ಣಪುಟ್ಟ ಪಟ್ಟಣ, ಹಳ್ಳಿಗಳಲ್ಲಿ ಗುಂಡಿಗಳಿಂದ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವಿಧಾನ ಅವಲಂಬಿಸದೆ ಸ್ಥಳೀಯಾಡಳಿತಗಳು ಕಂಗೆಡುತ್ತಿದ್ದವು. ಯಾಕೆಂದರೆ ಮಾನವ ಶ್ರಮದಿಂದ ಗುಂಡಿಗೆ ಇಳಿದು ತ್ಯಾಜ್ಯ ವಿಲೇವಾರಿ ಮಾಡುವಂತಿಲ್ಲ. ವೈಜ್ಞಾನಿಕ ಯಂತ್ರ ಖರೀದಿಗೆ ಅನುದಾನ ಕೊರತೆ ಕಾಡುತ್ತಿತ್ತು. ಹಾಗಾಗಿ ಗುಂಡಿಗಳಿಂದ ತ್ಯಾಜ್ಯ ವಿಲೇವಾರಿ ಮಾಡುವುದೆಂದರೆ ಪಂಚಾಯ್ತಿಗಳು ಹೈರಾಣಾಗುತ್ತಿದ್ದವು.
ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಮಂಗಳೂರು ತಾಲೂಕು ಪಂಚಾಯ್ತಿಗಳಿಗೆ ಸಕ್ಕಿಂಗ್ ಯಂತ್ರವನ್ನು ಪೂರೈಸಲಾಗಿದ್ದು, ಕಾರ್ಯಾರಂಭಿಸಿವೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಸಕ್ಕಿಂಗ್ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಸ್ವಚ್ಛತೆಗೆ ಇದೇ ಮೊದಲು ಸಕ್ಕಿಂಗ್ ಯಂತ್ರ ಬಳಸಲಾಗುತ್ತಿದೆ. ಎನ್ವಿರೋ ಎಂಜಿನಿಯರ್ಸ್ ಪ್ರೈ. ಲಿ. ಈ ಯಂತ್ರ ಪೂರೈಸಿದೆ.
ಒಂದು ಸಕ್ಕಿಂಗ್ ಯಂತ್ರಕ್ಕೆ ರು. 15.20 ಲಕ್ಷ ಇದೆ. ಪ್ರತಿ ಯಂತ್ರಕ್ಕೆ ಓರ್ವ ಚಾಲಕ ಹಾಗೂ ಓರ್ವ ಕ್ಲೀನರ್ ಸೇರಿ ಇಬ್ಬರು. ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ.
ಕರೆ ಮಾಡಿದರೆ ಸಾಕು: ಸಕ್ಕಿಂಗ್ ಯಂತ್ರದ ನಿರ್ವಹಣೆ ಆಯಾ ತಾಲೂಕು ಪಂಚಾಯ್ತಿಗೆ ಸೇರಿದ್ದು. ತಾ.ಪಂ.ಕಾರ್ಯನಿರ್ವಹಣಾಧಿಕಾರಿಗೆ ಪೋನಾಯಿಸಿ ಸಕ್ಕಿಂಗ್ ಯಂತ್ರದ ಪ್ರಯೋಜನ ಪಡೆಯಬಹುದು. ಪ್ರತಿ ಕಿ.ಮೀ.ಗೆ ರು. 35 ದರ. ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ್ದಕ್ಕೆ ರು. 650 ಶುಲ್ಕ ವಿಧಿಸುತ್ತಾರೆ. ಚಾಲಕ, ಕ್ಲೀನರ್ ವೇತನ, ಯಂತ್ರದ ನಿರ್ವಹಣೆ ಮೊತ್ತ ಎಲ್ಲ ಸೇರಿ ಮಾಸಿಕ ರು. 87,500 ಬೇಕು.
ಸ್ಥಳೀಯ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿಗಳಿಗೆ ನಿತ್ಯ ಉಪಯುಕ್ತ. ಗ್ರಾಮ ಪಂಚಾಯ್ತಿಗಳೂ ಇದರ ಉಪಯೋಗ ಪಡೆಯಬಹುದು. ಬಳಕೆ ಶುಲ್ಕ ಏಕಪ್ರಕಾರ ಇರುವುದರಿಂದ ಖಾಸಗಿ ಅಪಾರ್ಟ್ಮೆಂಟ್ಗಳೂ ಬಳಸಬಹುದು.
ಕಾಂಪೋಸ್ಟ್ ಬಳಕೆ ಚಿಂತನೆ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಪೋಸ್ಟ್ ಗುಂಡಿಗಳನ್ನು ವೈಜ್ಞಾನಿಕವಾಗಿ ಗೊಬ್ಬರ ಬಳಕೆಗೆ ಉಪಯೋಗಿಸಲು ಜಿಲ್ಲಾ ಪಂಚಾಯ್ತಿ ತೀರ್ಮಾನಿಸಿದೆ. ಉಪಯೋಗಿಸಿ ಬಿಸಾಡಿದ ತೆಂಗಿನಕಾಯಿ ಚಿಪ್ಪನ್ನು ಬಳಕೆ ಮಾಡಿ ಗುಣಮಟ್ಟದ ಗೊಬ್ಬರ ಮಾಡಿದರೆ ಅದು ಸ್ಥಳೀಯರ ಬಳಕೆಗೆ ಸಾಧ್ಯ. ಕೆಲವು ಗ್ರಾಮ ಪಂಚಾಯ್ತಿಗಳ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಮಾಡಿದ ಬಳಿಕ ಯಶಸ್ವಿಯಾದರೆ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

