ಕನಕ ಗಾಯನ ಕಾರ್ಯಕ್ರಮ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಜ. 17 ರಂದು ರೊಸಾರಿಯೋ ಸಭಾಂಗಣದಲ್ಲಿ 'ಅಧ್ಯಯನ ಪೀಠದ 10ನೇ ವರ್ಷ ಸಂಭ್ರಮ' ನಡೆಯಲಿದೆ. ಈ ಪ್ರಯುಕ್ತ 'ಸಾಂಪ್ರಾದಾಯಿಕ ಪಾಲ್ಗೊಳ್ಳುವಿಕೆ' ಎಂಬ ಗಾಯನ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ವ್ಯಾಪ್ತಿಯ ಪದವಿಪೂರ್ವ ಹಾಗೂ ಪದವಿಮಟ್ಟದ ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತ ವರ್ಗ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕರು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಹಾಗೂ ಸಾಂಪ್ರಾದಾಯಿಕ ಭಜನೆ, ಜಾನಪದ ಶೈಲಿಗಳಲ್ಲದೆ, ಆಧುನಿಕ ಸಂಗೀತ ಸಾಧನಗಳನ್ನು ಬಳಸಿ ಹೊಸ ರಾಗಗಳಲ್ಲಿ ಕನಕದಾಸರ ಕೀರ್ತನೆ ಹಾಡಬಹುದು. ಈಗಾಗಲೇ ಚಾಲ್ತಿಯಲ್ಲಿಲ್ಲದ ಕೀರ್ತನೆಗಳಿಗೆ ಹೊಸದಾಗಿ ರಾಗ ಸಂಯೋಜಿಸಿ ಪ್ರಾಯೋಗಿಕವಾಗಿ ಹಾಡುವ ಸೃಜನಶೀಲತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ ತಲಾ 3 ಅಭ್ಯರ್ಥಿಗಳಿಗೆ ರು. 3 ಸಾವಿರ ನಗದು, ಪುರಸ್ಕಾರ, ಕನಕ ಸ್ಮರಣಿಕೆ ಗೌರವಿಸಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 0824-2284360.
ಶಿಕ್ಷಕರ ಹತ್ತು ಬೇಡಿಕೆ ಈಡೇರಿಕೆಗೆ ಮನವಿ
ಬಂಟ್ವಾಳ: ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಹತ್ತು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಸಲ್ಲಿಸಲಾಗಿದೆ.
ಬೇಡಿಕೆಗಳು: ಶಿಕ್ಷಕ ವೃತ್ತಿಯಲ್ಲಿರುವ ಪತಿ- ಪತ್ನಿ ವರ್ಗಾವಣೆಗೆ ಹೆಚ್ಚಿನ ಶೇಕಡವಾರು ಅವಕಾಶ ನೀಡಬೇಕು. ವಿಭಾಗದ ಹೊರಗೆ ವರ್ಗಾವಣೆ ಬಯಸುವ ಶಿಕ್ಷಕರಿಗೆ ವರ್ಗಾವಣೆ ಸಂದರ್ಭಕ್ಕೆ 5 ವರ್ಷ ಕಾರ್ಯ ನಿರ್ವಹಿಸಬೇಕು ಎಂಬ ನಿಯಮಕ್ಕೆ ತಿದ್ದುಪಡಿ ತರಬೇಕು, 2008ರ ನಂತರ ನೇಮಕಗೊಂಡ ಪ್ರೌಢಶಾಲೆ ಶಿಕ್ಷಕರಿಗೆ ವಿಶೇಷ ಭತ್ಯೆ ರು. 400 ಕೂಡಲೆ ಒದಗಿಸಬೇಕು, 1994ರಲ್ಲಿ ನೇಮಕವಾದ ಪ್ರೌಢಶಾಲೆ ಸಹಶಿಕ್ಷಕರ ವೇತನ ತಾರತಮ್ಯ ನಿವಾರಿಸಬೇಕು, ಬಿಸಿಯೂಟ ನಿರ್ವಹಣೆ ಜವಾಬ್ದಾರಿಯನ್ನು ಶಿಕ್ಷಕರಿಗೆ ಹೊರೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಪ್ರೌಢ ಶಾಲೆಯಲ್ಲಿ ಖಾಲಿಯಾದ ಮುಖ್ಯ ಶಿಕ್ಷಕರ ಹುದ್ದೆಗೆ ಸಹಶಿಕ್ಷಕರನ್ನು ಬಡ್ತಿ ನೀಡಿ ನೇಮಕ ಮಾಡಬೇಕು, ಅನುದಾನ ರಹಿತ ಶಾಲೆ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಬೇಕು, 5 ಮತ್ತು 6ನೇ ವೇತನ ಆಯೋಗದಲ್ಲಿ ಪ್ರೌಢ ಶಾಲೆ ಶಿಕ್ಷಕರಿಗೆ ವೇತನ ತಾರತಮ್ಯ ಆಗಿದ್ದು ಅದನ್ನು ಸರಿಪಡಿಸಬೇಕು, ಎನ್ಪಿಎಸ್ ವ್ಯವಸ್ಥೆ ಖಾಸಗಿ ಅನುದಾನಿತ ಶಾಲಾ ಶಿಕ್ಷಕರಿಗೂ ಅನ್ವಯ ಆಗಬೇಕು. 2008ರ ಬಳಿಕ ನಿಲುಗಡೆಯಾದ ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆಗಳ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಶಿಕ್ಷಕರನ್ನು ಅದೇ ವರ್ಷದ ವರ್ಗಾವಣೆಯಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಲವಂತದಿಂದ ಕಲೆ ಒಲಿಯುವುದಿಲ್ಲ: ಈಶ್ವರಯ್ಯ
ಉಡುಪಿ: ಕಲೆ ಒಲಿದು ಬರಬೇಕೆ ವಿನಃ ಬಲವಂತದಿಂದಲ್ಲ. ಹಾಗಾಗಿ ಮಕ್ಕಳಿಗೆ ಸಂಗೀತ, ನೃತ್ಯಭ್ಯಾಸವನ್ನು ಒತ್ತಾಯಪೂರ್ವಕವಾಗಿ ಕಲಿಸುವ ಪ್ರಯತ್ನವನ್ನು ಮಾಡಬೇಡಿ ಎಂದು ಕಲಾ ವಿಮರ್ಶಕ ಈಶ್ವರಯ್ಯ ಕರೆ ನೀಡಿದರು. ಅವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಭಾನುವಾರ ಅಂಬಲಪಾಡಿಯ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರುಗಿದ ಭರತಮುನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪಾರಂಪರಿಕ ಮೌಲ್ಯವನ್ನು ಹೊಂದಿದ ಭರತನಾಟ್ಯ, ಸಂಗೀತದಂತಹ ಇನ್ನಿತ್ತರ ಕಲಾಪ್ರಕಾರಗಳಿಂದ ಹೃದಯ ಸಂಸ್ಕಾರ ಬೆಳೆಯಲು ಸಾಧ್ಯ. ಪರಂಪರೆಯ ಹೆಜ್ಜೆಯಲ್ಲಿ ನಡೆದುಬಂದರೆ ಕಲೆಗಳು ಹಾಗೂ ಕಲಾವಿದರು ಬೆಳೆಯುತ್ತಾರೆ. ಇದು ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ. ಕಲೆಯನ್ನು ಪ್ರೀತಿಸುವುದನ್ನು ಕಲಿತರೆ ಜೀವನವಿಡೀ ಸಂತೋಷದಾಯಕವಾಗಿರುತ್ತದೆ ಎಂದರು. ಅಂಬಲಪಾಡಿ ಜರ್ನಾಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನೀ.ಬಿ. ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ನೃತ್ಯ ಗುರುಗಳಾದ ವಿದುಷಿ ನಂದಿನಿ ಈಶ್ವರ್ ಮೈಸೂರು, ಹಿರಿಯ ನೃತ್ಯ ಕಲಾವಿದೆ ಪ್ರತಿಭಾ ಸಾಮಗ, ಪರಿಷತ್ತಿನ ಅಧ್ಯಕ್ಷ ಕಮಲಾಕ್ಷ ಆಚಾರ್ಯ ಇದ್ದರು. ಹಿರಿಯ ನೃತ್ಯ ಕಲಾವಿದೆ, ನೃತ್ಯ ಗುರು ಪ್ರತಿಭಾ ಸಾಮಗ ಅವರನ್ನು ಸನ್ಮಾನಿಸಲಾಯಿತು. 'ನೃತ್ಯ ಕಲಾವಿದರು' ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸರ್ಕಾರಿ ಆಸ್ಪತ್ರೆಗಳ ಶೀಘ್ರ ನವೀಕರಣ: ಸಚಿವ ಖಾದರ್
ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಶೀಘ್ರದಲ್ಲಿ ನವೀಕರಣ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಎಸ್ಆರ್ಎಸ್ ಗ್ಲೋಬಲ್ ಇಂಡಸ್ಟ್ರಿ ಸೊಲ್ಯೂಶನ್ ವತಿಯಿಂದ ಟಿ.ಎಂ.ಪೈ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಹೆಲ್ತ್ಕೇರ್ ಇಕ್ಯೂಪ್ಮೆಂಟ್ ಎಕ್ಸ್ಪೊ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ವ್ಯವಸ್ಥೆಯಿಂದಾಗಿ ವೈದ್ಯಕೀಯ ಉಪಕರಣಗಳಲ್ಲಿ ಬದಲಾವಣೆಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇವುಗಳನ್ನು ರೂಪಿಸಲು ತೀರ್ಮಾನಿಸಿದ್ದು, ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದರು.
ಎಕ್ಸ್ಪೊದಲ್ಲಿ ರಿಮೋಟ್ ಕಂಟ್ರೋಲ್ನಲ್ಲಿ ನಿಯಂತ್ರಿಸುವ ಆಪರೇಷನ್ ಥಿಯೇಟರ್ ಬೆಡ್ ಹಾಗೂ ಸಾಮಾನ್ಯ ಬೆಡ್ಗಳು, ಅಲ್ಲದೆ ಆಪರೇಶನ್ ಸಂದರ್ಭ ಹಾಕುವ ಎಲ್ಇಡಿ ಬೆಳಕು ವ್ಯವಸ್ಥೆ, ಉಪಯೋಗಿಸಿ ಬಿಸಾಡುವಂಥ ಮಾದರಿಯ ರೋಗಿಗಳ ಉಡುಪು, ಬೆಡ್ಶೀಟ್, ದಿಂಬು ಕವರ್, ಕೈಗೆ ಚುಚ್ಚಿದ ಸೂಚಿಗಳನ್ನು ಸಿರಿಂಜಿನಿಂದ ಬೇರ್ಪಡಿಸುವ ಯಂತ್ರ ಸೇರಿದಂತೆ ಒಟ್ಟು 58 ಮಳಿಗೆಗಳಿದ್ದವು.
ಮಂಗಳೂರಿನಲ್ಲಿ ವೈದ್ಯಕೀಯ ಉಪಕರಣಗಳ ಎಕ್ಸ್ಪೊ ನಡೆಯುತ್ತಿರುವುದು ಪ್ರಥಮ ಬಾರಿ. ಇದರಿಂದ ವೈದ್ಯಕೀಯ ವ್ಯವಸ್ಥೆಯಲ್ಲಿ ಬಳಸಬಹುದಾದ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬಹುದು. ಆದರೆ ಇದಕ್ಕೆ ವೈದ್ಯರ ಸ್ಪಂದನೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಇಂಥ ಉಪಕರಣಗಳನ್ನು ತಯಾರಿಸುವ ಕಂಪನಿಗಳೇ ಇಲ್ಲ. ವುಗಳೆಲ್ಲಾ ದೇಶದ ಕೇರಳ, ಹೈದರಬಾದ್, ಮುಂಬೈನಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳಾಗಿವೆ ಎಂದು ಎಕ್ಸ್ಪೊ ಸಂಚಾಲಕ ಆರ್. ರಾಜೇಶ್ ಹೇಳಿದರು.
ಆಹಾರ, ತಿಂಡಿ ಮಾರಾಟ ನೋಂದಣಿ ಕಡ್ಡಾಯ
ಮಂಗಳೂರು: ಸಾರ್ವಜನಿಕರಿಂದ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿಗೆ ಬಂದಿದ್ದು, ಈ ಕಾಯ್ದೆಯಂತೆ ಆಹಾರ ವಸ್ತುಗಳ ತಯಾರಕರು, ಸಂಸ್ಕರಣೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟದಲ್ಲಿ ನಿರತರಾಗಿರುವವರು ನೋಂದಣಿ ಪರವಾನಗಿ ಪಡೆದಿರಬೇಕು. ಇಲ್ಲವಾದಲ್ಲಿ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ. ಇದರ ಉಲ್ಲಂಘನೆಯು 6 ತಿಂಗಳವರೆಗೆ ಸೆರೆವಾಸ ಮತ್ತು ರು. 5 ಲಕ್ಷದವರೆಗೆ ದಂಡ ಹಾಗೂ 6 ತಿಂಗಳ ಸೆರೆವಾಸ ವಿಧಿಸಲಾಗುತ್ತದೆ.
2014 ಫೆಬ್ರವರಿ 4 ರ ನಂತರ ಪರವಾನಗಿ ರಹಿತ ಆಹಾರ ವಸ್ತುಗಳ ವ್ಯವಹಾರವು ಕಾನೂನು ಹಾಗೂ ನಿಯಮ ಬಾಹಿರವಾಗಿರುತ್ತದೆ. ಎಲ್ಲಾ ಆಹಾರ ವಹಿವಾಟುದಾರರು ದಿನಾಂಕ ಫೆ. 4 ರೊಳಗೆ ಕಡ್ಡಾಯವಾಗಿ ಆಹಾರ ಪರವಾನಿಗೆ ನೋಂದಣಿಯನ್ನು ಮಾಡಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರ ಪಾಸ್ ನವೀಕರಣಕ್ಕೆ ಸೂಚನೆ
ಮಂಗಳೂರು: ಕೆಎಸ್ಆರ್ಟಿಸಿ ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ವಿತರಿಸುವ ಬಸ್ ಪಾಸನ್ನು ಜ. 1 ರಂದು ನವೀಕರಿಸಲಾಗುತ್ತದೆ. ವಿಕಲಚೇತನರ ರಿಯಾಯಿತಿ ಬಸ್ ಪಾಸನ್ನು ಫಲಾನುಭಾವಿಗಳು ಬಂದ ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2013ರಂದು ವಿತರಿಸಿದ ಪಾಸನ್ನು 2014 ಫೆ. 28ರವೆರೆಗ ಮಾನ್ಯತೆ ನೀಡಲಾಗುತ್ತದೆ. ಮಂಗಳೂರು, ಮೂಡೂಬಿದಿರೆ, ಕಾರ್ಕಳ, ಉಡುಪಿ, ಕುಂದಾಪುರ ವ್ಯಾಪ್ತಿಯ ವಿಕಲಚೇತನರು, ರಿಯಾಯಿತಿ ದರದ ಪಾಸನ್ನು ನವೀಕರಣ ಮಾಡಿಕೊಳ್ಳಲು ಮಂಗಳೂರು ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು. ಹೊಸ ವಿಕಲಚೇತನ ಬಸ್ಪಾಸನ್ನು ಪಡೆದುಕೊಳ್ಳುವವರು ಅರ್ಜಿಯೊಂದಿಗೆ ರು. 660 ಹಾಗೂ 3 ಪಾಸ್ಪೋರ್ಟ್ ಭಾವಚಿತ್ರ ಸಲ್ಲಿಸಬೇಕು. ವಿಕಲಚೇತನರು ಸರ್ಕಾರಿ ನೌಕರರಾಗಿದ್ದರೆ ರಿಯಾಯಿತಿ ದರ ಪಾಸು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಪಡಿತತರ; ಸೂಚನೆ
ಮಂಗಳೂರು: ಮಂಗಳೂರು ಅನೌಪಚಾರಿಕ ಪಡಿತರ ಪ್ರದೇಶದಲ್ಲಿರುವ ಪಡಿತರ ಚೀಟಿ ಫೋಟೋ ಬಯೋ ಸೇವಾ ಕೇಂದ್ರಗಳನ್ನು ಡಿ. 16 ರಿಂದ ನಿಲ್ಲಿಸಲಾಗಿದೆ. ಪಡಿತರ ಚೀಟಿದಾರರು ಮಂಗಳೂರು ಮಹಾನಗರ ಪಾಲಿಕೆ, ಕದ್ರಿ, ಲೈಟ್ಹೌಸ್ ಹಿಲ್, ಸುರತ್ಕಲ್ ಮೂಡ ಕಟ್ಟಡದಲ್ಲಿರುವ ಮಂಗಳೂರು ಒನ್ ಕೇಂದ್ರದಲ್ಲಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಸರಸ್ವತಿ ಸಹಕಾರಿ ಸಂಸ್ಥೆ ದಶಮಾನೋತ್ಸವ
ಸುಳ್ಯ: ಅತ್ಯಂತ ಸರಳವಾಗಿ ಆರ್ಥಿಕ ಸೌಲಭ್ಯವನ್ನು ಒದಗಿಸುವ ಸಹಕಾರಿ ಕ್ಷೇತ್ರದಿಂದಿಂದ ಕೃಷಿಕರಿಗೆ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಲು ಸಾಧ್ಯವಾಗಿದೆ. ಈ ಸಹಕಾರಿ ಸೌಹಾರ್ದತೆಯು ಸಮಾಜಕ್ಕೆ ಇನ್ನಷ್ಟು ಬೆಳಕನ್ನು ನೀಡಲಿ ಎಂದು ವಿಧಾನ ಸಭೆ ಮಾಜಿ ಸ್ಪೀಕರ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ಅವರು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಶನಿವಾರ ನಡೆದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸುಳ್ಯ ಶಾಖೆಯ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ವಿನಯಕುಮಾರ್ ಕಂದಡ್ಕ ಸ್ವಾಗತಿಸಿದರು. ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಪ್ರಸ್ತಾವನೆಗೈದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

