ದಕ್ಷಿಣ ಕನ್ನಡ

ಆರ್‌ಎಸ್‌ಎಸ್ ಸಾಂಘಿಕ ಸಮಾವೇಶ ನಾಳೆ: ಲಕ್ಷ ಗಣವೇಷಧಾರಿಗಳ ನಿರೀಕ್ಷೆ

Published On :

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಫೆ.3ರಂದು ಬಜಪೆ ವಿಮಾನ ನಿಲ್ದಾಣ ಸಮೀಪದ ಕೆಂಜಾರಿನಲ್ಲಿ ಗಣವೇಷಧಾರಿಗಳ ಸಾಂಘಿಕ ಸಮಾವೇಶ ಆಯೋಜಿಸಿದೆ. ಸಮಾವೇಶಕ್ಕೆ ಲಕ್ಷಕ್ಕೂ ಮಿಕ್ಕಿ ಗಣವೇಷಧಾರಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ವಿಭಾಗ ಕಾರ್ಯವಾಹ ಪ್ರಕಾಶ್ ಪಿ.ಎಸ್. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ನಗರದಲ್ಲಿ ವಿಶಾಲ ಮೈದಾನ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕೆಂಜಾರಿನ 65 ಎಕರೆ ಪ್ರದೇಶ ಸಮತಟ್ಟು ಮಾಡಿ, ಬೃಹತ್ ವೇದಿಕೆ ಸಿದ್ಧಗೊಂಡಿದೆ. 10 ಸಾವಿರ ಕಾರ್ಯಕರ್ತರು ಸ್ವಯಂಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್‌ಜೀ ಭಾಗವತ್ ಆಗಮಿಸಿ ಸಂಘಟಿತ ಹಿಂದೂ ಸಮಾಜ ಆಶೋತ್ತರದ ಸಂದೇಶ ಸಾರಲಿದ್ದಾರೆ.  ವೇದಿಕೆಯಲ್ಲಿ ಸರಕಾರ್ಯವಾಹ ಸುರೇಶ್ ಜೋಶಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಮೈಸೂರಿನ ಮ.ವೆಂಕಟರಾಮು, ಮಂಗಳೂರು ವಿಭಾಗ ಸಂಚಾಲರ ಡಾ.ವಾಮನ ಶೆಣೈ ಆಸೀನರಾಗಲಿದ್ದಾರೆ. ಪಕ್ಕದ ವೇದಿಕೆಗಳಲ್ಲಿ ಸಂಘದ ಹಿರಿಯ ಕಾರ್ಯಕರ್ತರು ಆಸೀನರಾಗುವರು. ಮೈದಾನದ ಇಕ್ಕೆಲಗಳಲ್ಲಿ 20 ಸಾವಿರ ಆಸನ ವ್ಯವಸ್ಥೆ ಮಾಡಲಾಗುವುದು. ಬೈಂದೂರಿನ ತುದಿಯಿಂದ ಕುಶಾಲನಗರ ವರೆಗೆ ಮಂಗಳೂರು ವಿಭಾಗದಲ್ಲಿ 1152 ಗ್ರಾಮಗಳಿವೆ. ಎಲ್ಲ ಗ್ರಾಮಗಳಿಂದ ಸಾವಿರಾರು ಸ್ವಯಂ ಸೇವಕರು ಮಂಗಳೂರಿಗೆ ಬರಲಿದ್ದಾರೆ.
 9 ಕಡೆ ಭೋಜನ ಕೇಂದ್ರ ತೆರೆಯಲಾಗಿದೆ. 6 ಕಡೆ ವಾಹನ ನಿಲುಗಡೆ ಮಾಡಲಾಗಿದೆ. ಪ್ರತಿ ತಾಲೂಕಿಂದ ಬರುವವರಿಗೆ ಯಾವ ಮಾರ್ಗದಲ್ಲಿ ಬರಬೇಕು ಎಂದು ಸೂಚನೆ ನೀಡಲಾಗಿದೆ. ಸ್ವಾಮಿ ವಿವೇಕಾನಂದರ ನಡೆ, ನುಡಿ ಎಲ್ಲವೂ ಆರ್‌ಎಸ್‌ಎಸ್‌ಗೆ ಆದರ್ಶ, 150 ಜನ್ಮವರ್ಷಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ. 2 ವರ್ಷದ ಹಿಂದೆಯೇ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ಎಲ್ಲ ಗ್ರಾಮಗಳಿಂದ ಹಿಂದು ಸಮಾಜದ ಜಾತಿ, ವರ್ಗ ಭೇದ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಹಿಂದೂ ತತ್ವದಲ್ಲಿ ನಂಬಿಕೆ ಇರಿಸಿದ ಯಾವ ಧರ್ಮದವರೂ ಪಾಲ್ಗೊಳ್ಳಬಹುದಾಗಿದೆ ಎಂದರು.
ಬ್ಯಾನರ್ ಇಲ್ಲ: ಯಾವುದೇ ಬ್ಯಾನರ್, ಕರಪತ್ರ, ಪೋಸ್ಟರ್, ಬಂಟಿಂಗ್ಸ್ ಮುದ್ರಣ ಸಾಮಾಗ್ರಿಗಳನ್ನು ಬಳಸದೆ ನೇರವಾಗಿ ಮನೆಗೆ ತೆರಳಿ ಮನಕ್ಕೆ ಸಂದೇಶ ಒಯ್ದು ಸಾಂಘಿಕ್ ಕಾರ್ಯಕ್ರಮ ರೂಪುಗೊಳ್ಳುತ್ತಿದೆ. ಘೋಷ್ ಪ್ರದರ್ಶನ, ಶಾರೀರಿಕ ಪ್ರದರ್ಶನ, ಸ್ವಯಂಸೇವಕರಿಂದ ಸಾಂಘಿಕ್ ಗೀತೆ ಬಳಿಕ ಸರಸಂಘಚಾಲಕರು ಮಾತನಾಡುವರು ಎಂದರು.
 ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಕಾರ್ಯಕ್ರಮಗಳಿಗೆ ಸ್ವಯಪ್ರೇರಿತರಾಗಿ ಪ್ರಾಯೋಜಕರು ಮುಂದೆ ಬರುತ್ತಿದ್ದಾರೆ. ಪ್ರಾಯೋಜಕತ್ವ ಹೊರತು ಪಡಿಸಿ 40 ಲಕ್ಷ ವೆಚ್ಚವಾಗಲಿದೆ. 8ನೇ ತರಗತಿ ಮೇಲ್ಪಟ್ಟವರನ್ನು ಮಾತ್ರ ಆಗಮಿಸಲು ಸೂಚಿಸಲಾಗಿದೆ ಎಂದರು.   ಸುದ್ದಿಗೋಷ್ಠಿಯಲ್ಲಿ ವಿಭಾಗ ಸಂಘಚಾಲಕ ವಾಮನ ಶೆಣೈ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.