ದಕ್ಷಿಣ ಕನ್ನಡ

ಸಮ್ಮೇಳನಕ್ಕೆ ಹರಿದು ಬಂದ ಸಾಹಿತ್ಯ ಪ್ರೇಮಿಗಳು; ಮುಖ್ಯಮಂತ್ರಿ ಚಂದ್ರು ಸಹಿತ ಗಣ್ಯರಿಗೆ ಸಂಭ್ರಮ...

Published On :

ಉಪ್ಪಿನಂಗಡಿ: ದ.ಕ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯಾಸಕ್ತ ವಿದ್ಯಾರ್ಥಿ ಸಮೂಹ ಮತ್ತು ಸಾಹಿತ್ಯಪ್ರೇಮಿಗಳಿಂದ ಕಿಕ್ಕಿರಿದು ತುಂಬಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಹಿತ ಗಣ್ಯರನೇಕರನ್ನು ಸಂತಸಗೊಳಿಸಿತು.
ಇದು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಕ್ಕಿಂತಲೂ ಹೆಚ್ಚಿನ ಮೆರಗು ಪಡೆದಿದೆ. ಶಿಸ್ತುಬದ್ದ ಸಭಾಸದರು, ತುಂಬಿದ ಸಭಾಂಗಣ, ಸುವ್ಯವಸ್ಥಿತ ಆದರೋಪಚಾರಗಳು, ವೇದಿಕೆಯತ್ತ ಆಸಕ್ತಿಭರಿತ ಸಭಾಸದರ ಆಸಕ್ತಿಭರಿತ ಕಿವಿಗಳು ಸಮ್ಮೇಳನವನ್ನು ಸಾರ್ಥಕ್ಯಗೊಳಿಸುವಂತಿದೆ ಎಂದು ಮುಖ್ಯಮಂತ್ರಿ ಚಂದ್ರು ಪ್ರಶಂಸೆಯ ಮಾತನಾಡಿದರು.
ಇಂಗ್ಲಿಷ್ ಭಾಷಾ ವ್ಯಾಮೋಹ ಯಾಕೆಂದು ಪ್ರಶ್ನಿಸಿದ ಮುಖ್ಯಮಂತ್ರಿ ಚಂದ್ರುರವರು ವ್ಯಕ್ತಿಯ ಸಾವಿಗೆ ಕನ್ನಡದಲ್ಲಿರುವಷ್ಟು ಪದಗಳನ್ನು ಆಂಗ್ಲಭಾಷೆಯಿಂದ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿ ನಿರ್ಗಳವಾಗಿ ಗ್ರಾಮ್ಯ ಶೈಲಿಯ ಸಾವಿನ ಪರ್ಯಾಯ ಪದಗಳನ್ನು ವಿವರಿಸಿದರು. ಅಂತೆಯೇ ಬೈಯುವ ಕಲೆಯೂ ಆಂಗ್ಲ ಭಾಷೆಗಿಂತ ಕನ್ನಡದಲ್ಲಿರುವ ಅಗಾಧತೆಯನ್ನು ವಿವರಿಸಿದಾಗ ಸಭೆಯಲ್ಲಿ ಭಾರಿ ಕರತಾಡನ ಕೇಳಿಬಂತು. ಕರಾವಳಿ ಕರ್ನಾಟಕದಲ್ಲಿ ಭಾಷೆಯ ಬಗ್ಗೆ ಉದ್ರೇಕಕಾರಿಯಾಗಿ ಯಾರೂ ಮಾತನಾಡುವುದಿಲ್ಲ. ಇಲ್ಲಿ ಸಹೋದರ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತಿರುವುದರಿಂದ ಭಾಷಾ ಸಂಸ್ಕೃತಿ ವಿಕಾಸಗೊಂಡಿದೆ. ಇಲ್ಲಿನ ಸಾಂಸ್ಕೃತಿಕ ಕ್ಷೇತ್ರಗಳು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿ ಶ್ರೀಮಂತಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಶಿಸ್ತುಬದ್ಧತೆ ಎದ್ದುಕಾಣುತ್ತಿತ್ತು. ಉಪ್ಪಿನಂಗಡಿ ಭಾಗದಿಂದ ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಶ್ರೀಮತಿ ಲಕ್ಷ್ಮೀ ವಿ ರೈ, ನಟ್ಟಿಬೈಲು ವೆಂಕಪ್ಪ ರೈ, ಶ್ರೀಧರ ನಾಯಕ್, ಪುಂಡಲೀಕ ನಾಯಕ್, ಹಸನ್ ಹಕೀಂ ಹಾಜಿ ಈ ಐವರು ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವಂತೆ ಅವರ ಹೆಸರಿನ ಐದು ದ್ವಾರಗಳನ್ನು ರಚಿಸಿ ಸಾಹಿತ್ಯಾಸಕ್ತರ ಸ್ವಾಗತಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ನಾಗರಿಕ ಕಂಗ್ವೆ ವಿಶ್ವನಾಥ ಶೆಟ್ಟಿ ಮೆರವಣಿಗೆಯ ಮುಂಚೂಣಿಯಲ್ಲಿ ಕನ್ನಡದ್ವಜವನ್ನು ಹಿಡಿದು ಲವಲವಿಕೆಯಿಂದ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆಯನ್ನು ಮುನ್ನಡೆಸಿದ್ದು ಗಮನಾರ್ಹವಾಗಿತ್ತು. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಶುಚಿ ರುಚಿಯಾದ ಭೋಜನ, ಸಾಯಂಕಾಲದ ಪಾನೀಯ, ಸಮ್ಮೇಳನಾದ್ಯಂತ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಕರುಣಾಕರ ಸುವರ್ಣ ನೇತೃತ್ವದಲ್ಲಿ ಲೋಪರಹಿತವಾಗಿ ನಿರ್ವಹಿಸಲ್ಪಟ್ಟಿದ್ದು ಶ್ಲಾಘನೀಯವಾಗಿತ್ತು. ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಹಾಡಿದ ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ ಮನ ಸೆಳೆಯುವಂತಿತ್ತು. ಪುಸ್ತಕ ಮಳಿಗೆ, ಕರಕುಶಲ ಮಳಿಗೆ, ವಸ್ತುಪ್ರದರ್ಶನ ಮಳಿಗೆ ಮೊದಲಾದವು ಜನಾಕರ್ಷಣೆಯನ್ನು ಪಡೆದವು. ಸಮಯಪಾಲನೆ, ವೇದಿಕೆ ನಿರ್ವಹಣೆ ಅಚ್ಚುಕಟ್ಟಾಗಿ ನಡೆದಿತ್ತು. ಭಾರೀ ಸಂಖ್ಯೆ ಸಾಹಿತ್ಯಾಸಕ್ತರು ಬಂದು ಹೋಗುತ್ತಿದ್ದುದ್ದು ಯಶಸ್ಸಿಗೆ ಕನ್ನಡಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.