ಹೆದ್ದಾರಿಯಲ್ಲಿ ಕಾರು-ಲಾರಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು
ಪಡುಬಿದ್ರಿ: ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಅರ್ಧಕ್ಕೆ ನಿಂತಿರುವ ರಾ.ಹೆ. 66ರ ಕಾಮಗಾರಿ ಶುಕ್ರವಾರ ಬೆಳಗ್ಗೆ ಎರಡು ಜೀವಗಳನ್ನು ತೆಂಕಎರ್ಮಾಳು ಸಮೀಪ ಬಲಿ ತೆಗೆದುಕೊಂಡಿದೆ.
ಇಲ್ಲಿನ ತೆಂಕಎರ್ಮಾಳು ಗ್ರಾಮದ ದೈವಸ್ಥಾನವೊಂದರ ಎದುರು ರಾ.ಹೆ. 66ರಲ್ಲಿ ಇನ್ನೋವ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಕೇರಳ ರಾಜ್ಯದ ಕೊಟ್ಟಾಯಂನವರಾದ ಜಾಯ್ ಸೆಬೆಸ್ಟಿನ್ (53) ಮತ್ತು ಅವರ ತಾಯಿ ಏಲಿಕುಟ್ಟಿ ಸೆಬೆಸ್ಟಿನ್ (80) ಮೃತರು. ತಂದೆ ದೇವಸಿಯಾ ಸೆಬಸ್ಟಿನ್ (85) ತೀವ್ರವಾಗಿ ಗಾಯಗೊಂಡು ಆಸ್ಪತೆಗೆ ದಾಖಲಾಗಿದ್ದಾರೆ.
ಜಾಯ್ ಪ್ರಸ್ತುತ ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ಕಾವಳಕಟ್ಟೆಯಲ್ಲಿ ಕಳೆದ 2 ವರ್ಷಗಳಿಂದ ಹೆಂಡತಿ ಹಾಗೂ ನಾಲ್ವರು ಪುತ್ರಿಯರೊಂದಿಗೆ ವಾಸಿಸುತ್ತಿದ್ದಾರೆ. 2 ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟುರಾದ ಕೊಟ್ಟಾಯಂನಲ್ಲಿರುವ ತಂದೆ ತಾಯಿಯನ್ನು ಕರೆತರಲು ಇನ್ನೋವಾ ಕಾರಿನಲ್ಲಿ ತೆರಳಿದ್ದು, ಗುರುವಾರ ಸಂಜೆ ಹೊರಟು ಕಾವಳಕಟ್ಟೆಗೆ ಬರುತ್ತಿದ್ದರು.
ಅಪಘಾತ ಹೇಗೆ ನಡೆಯಿತು?: ಶುಕ್ರವಾರ ಮುಂಜಾನೆ 7 ಗಂಟೆಗೆ ಅವರ ಕಾರು ತೆಂಕ ಎರ್ಮಾಳು ಗ್ರಾಮದ ನಾರಾಳ್ತಾಯ ದೈವಸ್ಥಾನದ ಎದುರಿನ ತಿರುವಿನಲ್ಲಿ ವಾಹನವೊಂದನ್ನು ಹಿಂದಿಕ್ಕಿ ಮುನ್ನುಗ್ಗುವಾಗ ಮುಂಭಾಗದಿಂದ (ಉಡುಪಿಯಿಂದ ಮಂಗಳೂರಿಗೆ) ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ವಾಹನವನ್ನು ಹಿಂದಿಕ್ಕಿ ಚಾಲನೆ ಮಾಡುತ್ತಿದ್ದುದರಿಂದ ಸಹಜವಾಗಿಯೇ ಕಾರು ವೇಗದಲ್ಲಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಒದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ನಂತರ ಸ್ಥಳೀಯರು ಹರಸಾಹಸಪಟ್ಟು ಕಾರಿನೊಳಗಿದ್ದ ಗಾಯಗೊಂಡವರನ್ನು ಕಾರಿನಿಂದ ಹೊರ ತೆಗೆದಿದ್ದಾರೆ. ಆದರೆ ಅದಾಗಲೇ ಇಬ್ಬರು ಕೊನೆಯುಸಿರೆಳೆದಿದ್ದರು. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಪೂರ್ಣ ಕಾಮಗಾರಿಗೆ ಇನ್ನೆಷ್ಟು ಬಲಿ ಬೇಕು?
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅಪೂರ್ಣವಾಗಿದ್ದು, ಇಲ್ಲಿನ ನಾರಾಳ್ತಾಯ ದೈವಸ್ಥಾನದ ಎದುರಿನಲ್ಲಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಹೊರರಾಜ್ಯದಿಂದ ಬರುವ ವಾಹನಗಳ ಚಾಲಕರು ಏಕಮುಖ ಸಂಚಾರವೆಂದು ತಪ್ಪು ಕಲ್ಪನೆಯಲ್ಲಿ ಮುನ್ನುಗ್ಗುವಾಗ ಇಲ್ಲಿನ ಪ್ರತಿನಿತ್ಯವೂ ಅಪಘಾತಗಳು ಸಂಭವಿಸುತ್ತದೆ. ಕಳೆದ ತಿಂಗಳು ಇದೇ ಸ್ಥಳದಲ್ಲಿ ಕೇರಳ ಮೂಲದ ಪ್ರಯಾಣಿಕರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಜನರ ಮನಸ್ಸಿನಿಂದ ಅಳಿಯುವ ಮೊದಲೇ ಈ ಅಪಘಾತ ಸಂಭವಿದೆ. ಕಾಕತಾಳೀಯವೆಂದರೆ ಎರಡೂ ಅಪಘಾತದಲ್ಲಿ ಸತ್ತವರು ಮಾತ್ರ ಕೇರಳ ರಾಜ್ಯದವರು. ಕಾಮಗಾರಿ ತಕ್ಷಣ ಪೂರ್ಣಗೊಳಿಸದಿದ್ದರೆ ಮುಂದೆ ಇನ್ನಷ್ಟು ಅಪಘಾತಗಳು ಸಾವು ನೋವುಗಳ ಸಂಭವಿಸುವ ಸಾಧ್ಯತೆಗಳಿವೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಿಲ್ಲ, ಆಡಳಿತ - ವಿರೋಧ ಪಕ್ಷಗಳ ಪರಸ್ಪರ ದೋಷಾರೋಪಣೆ ಮಾಡುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ ಹೊರತು ಜನಸಾಮಾನ್ಯರ ಗೋಳು ಕೇಳುವವರಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

