ವಿಶ್ವದಲ್ಲಿ ಹಿಂದುತ್ವದ ಪ್ರಭೆ ಹರಡಿದ ವಿವೇಕಾನಂದರು: ಕುಂಬಳೆ ಸುಂದರ್ರಾವ್
ಉಪ್ಪಿನಂಗಡಿ: ವಿವೇಕಾನಂದರು ಕೇವಲ ಓರ್ವ ಸನ್ಯಾಸಿಯಾಗಿರಲಿಲ್ಲ. ಅವರೊಬ್ಬ ಕ್ರಾಂತಿಕಾರಿಯಾಗಿದ್ದರು. ಈ ದೇಶವನ್ನು ಆವರಿಸಿದ್ದ ದಾರಿದ್ರ್ಯದ ನಿರ್ಮೂಲನಕ್ಕಾಗಿ ಅವರು ಶ್ರಮಿಸಿದ್ದರು. ಅವರೊಬ್ಬ ವಿಶ್ವದಲ್ಲಿ ಹಿಂದುತ್ವದ ಪ್ರಭೆಯನ್ನು ಹರಡಲು ದೇವರು ಕಳುಹಿಸಿದ ಮಹಾನ್ ಚೇತನ ಎಂದು ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಸುಂದರ್ ರಾವ್ ವರ್ಣಿಸಿದರು.
ಅವರು ಶನಿವಾರದಂದು ಉಪ್ಪಿನಂಗಡಿಯ ದಿ. ತಾಳ್ತಜೆ ಕೃಷ್ಣ ಭಟ್ ವೇದಿಕೆಯಲ್ಲಿ ನಡೆದ ದ.ಕ ಜಿಲ್ಲಾ 18 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಅತ್ಯದ್ಬುತವಾದ ಆಧ್ಯಾತ್ಮಿಕ ಸಂಪತ್ತನ್ನು ಹೊಂದಿದ್ದರೂ ಕಾಡುತ್ತಿದ್ದ ದಾರಿದ್ರ್ಯದ ಹಿನ್ನೆಲೆಯಲ್ಲಿ ಇಡೀ ದೇಶ ಬಸವಳಿದು, ಪರಕೀಯರ ದಾಸ್ಯಕ್ಕೆ ತುತ್ತಾದಾಗ ದೇಶದ ಸಂಕಷ್ಟವನ್ನು ಕಂಡು ಮರುಗಿದವರು ಸ್ವಾಮಿ ವಿವೇಕಾನಂದರು. ಸಮಾಜದಲ್ಲಿ ಹಾಸುಹೊಕ್ಕಿರುವ ಅನಿಷ್ಟ ಪದ್ಧತಿಗಳ ಬಗ್ಗೆ ಮೌನವಹಿಸದೆ, ಗಟ್ಟಿ ಧ್ವನಿಯಲ್ಲಿ ಅದರ ವಿರುದ್ಧ ಗುಡುಗಿದ ಇವರು ದರಿದ್ರ ದೇವೋ ಭವ ಎಂಬ ಘೋಷಣೆಯೊಂದಿಗೆ ಈ ದೇಶದ ಸತ್ ಸಂಪ್ರಾಯದಾಯಕ್ಕೆ ಹೊಸ ಹೊಣೆಗಾರಿಕೆಯನ್ನು ನೀಡಿದರು.
ಅಮೆರಿಕದ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಸಂಕಷ್ಟಗಳ ಸರಮಾಲೆಯೊಂದಿಗೆ ಭಾಗವಹಿಸಿದಾಗಲೂ ಮಾಡಿದ ಮೂರು ನಿಮಿಷಗಳ ಭಾಷಣದಿಂದ ಇಡೀ ವಿಶ್ವವೇ ಭಾರತವನ್ನು ಬೆರಗು ಗಣ್ಣಿನಿಂದ ನೋಡುವಂತಾಯಿತು. ಭಾರತೀಯವಾದ ಹಿಂದೂ ಸಂಸ್ಕಾರ ಸಂಸ್ಕೃತಿಗಳ ಬಗ್ಗೆ ವಿದೇಶಿಯರು ಆಸಕ್ತಿ ತಾಳುವಂತೆ ಮಾಡಿತ್ತು ಎಂದು ವಿವರಿಸಿದರು. ಅವರ ರಾಷ್ಟ್ರಭಕ್ತಿ ಬೆರೆತ ಸಂದೇಶಗಳನ್ನು ಅನುಷ್ಠಾನಿಸುವತ್ತ ನಮ್ಮ ಕರ್ತವ್ಯ ಅಡಿಗಿದೆ ಎಂದು ಅವರು ಕರೆ ನೀಡಿದರು. ವಿವೇಕಾನಂದರ ಕುರಿತಾದ ಗೀತೆಯನ್ನು ಧನ್ಯ ಪದ್ಯಾಣ ಸುಶ್ರಾವ್ಯವಾಗಿ ಹಾಡಿದರು.
ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ರಾಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷ ತೊಟ್ಟು, ವೇದಿಕೆಯಲ್ಲಿ ಆಸೀನರಾಗಿದುದ್ದು ಸಮಾರಂಭಕ್ಕೆ ವಿಶೇಷ ಶೋಭೆಯನ್ನು ಮೂಡಿಸಿತ್ತು. ವೇದಿಕೆಯಲ್ಲಿ ಸಮ್ಮೇಳಾನಾಧ್ಯಕ್ಷ ಡಾ. ಶಿಮಂತೂರು ಎನ್. ನಾರಾಯಣ ಶೆಟ್ಟಿ , ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರೆ. ಪ್ರಶಾಂತ್ ಮಾಡ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುಡ್ಡಪ್ಪ ಬಲ್ಯ ನಿರೂಪಿಸಿದರು. ವತ್ಸಲಾ ರಾಜ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

