ದಕ್ಷಿಣ ಕನ್ನಡ

ಲಕ್ಷ ಸ್ವಯಂ ಸೇವಕರ ವಿರಾಟ್ ದರ್ಶನ

Published On :

ಬಜ್ಪೆ, ಕೆಂಜಾರು (ಮಂಗಳೂರು): ಆಕಾಶದಲ್ಲಿ ಕೆಂಧೂಳು, ಇನ್ನೂ ಮರೆಯಾಗದ ಸೂರ್ಯರಶ್ಮಿ... ಇತ್ತ ಮೈದಾನದಲ್ಲಿ ಕಣ್ಣಿಗೂ ನಿಲುಕದ ಮಾರುದ್ದದ ಗಣವೇಷಧಾರಿ ಸ್ವಯಂಸೇವಕರ ಸಾಲು...ಸಾಲು.... ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮಂಗಳೂರು ವಿಭಾಗ ಭಾನುವಾರ ಲಕ್ಷ ಸಂಖ್ಯೆಯ ಗಣವೇಷಧಾರಿ ಸ್ವಯಂಸೇವಕರ ವಿರಾಟ್ ದರ್ಶನ ಮಾಡಿಸಿದ ರೀತಿ.
ಬಜ್ಪೆ ಸಮೀಪದ ಕೆಂಜಾರಿನ 65 ಎಕರೆ ವಿಶಾಲ ಪ್ರದೇಶದಲ್ಲಿ ಸಂಪತಗೊಂಡ ಸಮಾವೇಶದಲ್ಲಿ ಬೈಂದೂರಿನಿಂದ ಕುಶಾಲನಗರ ವರೆಗಿನ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ 1152 ಗ್ರಾಮಗಳ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಹೊಸ ಇತಿಹಾಸ ದಾಖಲಿಸಿದರು.
ಗಣವೇಷಧಾರಿಗಳು: ಮಧ್ಯಾಹ್ನ 2.30ಕ್ಕೆ ಲಾರಿ, ಬಸ್ಸು ಸೇರಿದಂತೆ ವಿವಿಧ ವಾಹನಗಳಲ್ಲಿ ಬೂಡ್ಸ್, ಕಪ್ಪುಟೋಪಿ, ಅರ್ಧ ಮಡಚಿದ ತೋಳಿನ ಬಿಳಿ ಅಂಗಿ, ಖಾಕಿ ಚಡ್ಡಿ ಧರಿಸಿದ ಗಣವೇಷದಲ್ಲಿ ಆಗಮಿಸಿದ ಸ್ವಯಂಸೇವಕರು ಮೈದಾನದಲ್ಲಿ ತಮಗೆ ನಿಗದಿಗೊಳಿಸಿದ ಸ್ಥಾನದಲ್ಲಿ ಶಿಸ್ತುಬದ್ಧವಾಗಿ ನಿಂತುಕೊಂಡರು. 12 ವರ್ಷದ ಮಕ್ಕಳಿಂದ ತೊಡಗಿ 60 ವರ್ಷದ ವರೆಗಿನ ವಯೋವಾನದವರು ಗಣವೇಷದಲ್ಲಿ ಪಾಲ್ಗೊಂಡಿದ್ದರು.
ಮೈದಾನದಲ್ಲಿ 87 ಸಾವಿರ ಮಂದಿಗೆ ಕುಳಿತುಕೊಳ್ಳಲು ಜಾಗ ಗುರುತು ಮಾಡಲಾಗಿದ್ದು, 20 ಸಾವಿರ ಕುರ್ಚಿ ಹಾಕಲಾಗಿತ್ತು. ಇಷ್ಟಾದರೂ ಜಾಗದ ಕೊರತೆ ಕಾಣಿಸಿದ್ದು, ಪ್ರಧಾನ ಭಾಷಣ ಪ್ರಾರಂಭವಾದ ಬಳಿಕವೂ ಗಣವೇಷಧಾರಿಗಳು ಆಗಮಿಸುತ್ತಲೇ ಇದ್ದು, ಬಹಳಷ್ಟು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಬೇಕಾಯಿತು.
ವಿಭಾಗದಲ್ಲಿ ಇದು ಪ್ರಥಮ: ಮಂಗಳೂರಿನಲ್ಲಿ ಆರ್‌ಎಸ್‌ಎಸ್ ಮಹಾಸಾಂಘಿಕ್ ನಡೆಯುತ್ತಿರುವುದು ಇದು ಪ್ರಥಮ. ಲಕ್ಷ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಳ್ಳುತ್ತಿರುವುದೂ ಪ್ರಥಮವಾಗಿದ್ದು, ಆರ್‌ಎಸ್‌ಎಸ್ ಇತಿಹಾಸಕ್ಕೆ ಹೊಸ ಭಾಷ್ಯ ಬರೆದಿದೆ. 1983ರಲ್ಲಿ ನಡೆದ ವಿಭಾಗ ತರುಣ ಸಮಾವೇಶದಲ್ಲಿ 10 ಸಾವಿರ, 1992ರ ವಿಭಾಗ ತರುಣ ಸಮಾವೇಶದಲ್ಲಿ 31 ಸಾವಿರ, 1995ರಲ್ಲಿ ನಡೆದ ಸಾಮರಸ್ಯ ಸಂಗಮದಲ್ಲಿ 43,500 ಸಾವಿರ ಗಣವೇಷಧಾರಿಗಳು ಭಾಗವಹಿಸಿದ್ದರು. ಈಗ 18 ವರ್ಷ ಬಳಿಕ ನಡೆದ ದಾಖಲೆಯ ಸಮಾವೇಶ ಇದು.
ನಕ್ಸಲ್ ಪ್ರದೇಶ ಪ್ರವೇಶಿಸಿದ ಆರ್‌ಎಸ್‌ಎಸ್: ಈ ಸಾಂಘಿಕ್‌ನಲ್ಲಿ ಪಶ್ಚಿಮ ಘಟ್ಟ ತಪ್ಪಲಿನ ನಕ್ಸಲ್ ಬಾಧಿತ ಪ್ರದೇಶಗಳ ಜನತೆ ಗಣವೇಷದಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ಈ ಮಂದಿಯನ್ನು ಮತ್ತೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವುದು ಆರ್‌ಎಸ್‌ಎಸ್ ಉದ್ದೇಶ. ನಕ್ಸಲ್ ಬಾಧಿತ ಪ್ರದೇಶಗಳಾದ ಸುಬ್ರಹ್ಮಣ್ಯ, ಶಿಶಿಲ, ಶಿಬಾಜೆ, ನೆರಿಯಾ, ಮಿತ್ತಬಾಗಿಲು, ಹಳ್ಳಿಹೊಳೆ, ಕಾರ್ಕಳ, ಕುಂದಾಪುರ ಕಾಡಂಚಿನ ಸುಮಾರು 60 ಗ್ರಾಮಗಳಿಂದ ವನವಾಸಿಗಳು, ಆದಿವಾಸಿಗಳು, ಮಲೆಕುಡಿಯರು ಗಣವೇಷದಲ್ಲಿ ಸಾಂಘಿಕ್‌ಗೆ ಆಗಮಿಸಿದ್ದುದು ವಿಶೇಷವಾಗಿತ್ತು. ಆರ್‌ಎಸ್‌ಎಸ್ ಭದ್ರ ತಳವೂರಿದ ಸುಳ್ಯ, ಪುತ್ತೂರು, ಕಾಸರಗೋಡು, ಮಂಜೇಶ್ವರವಲ್ಲದೆ, ಬೆಳ್ತಂಗಡಿ, ಕಾರ್ಕಳ, ಮೂಡುಬಿದಿರೆ, ಬೈಂದೂರು, ಕುಂದಾಪುರದ ಎಲ್ಲ ಉಪವಸತಿಗಳ(ಬೂತ್)ಪ್ರತಿ ಮನೆಗಳಿಂದ ಗಣವೇಷಧಾರಿಗಳಾಗಿ ಆಗಮಿಸಿದ್ದರು.
ಮಾಜಿ ಸಿಎಂ ಡೀವಿ, ಗೋವಾ ಸ್ಪೀಕರ್: ಈ ಸಾಂಘಿಕ್‌ನಲ್ಲಿ ಗಣವೇಷದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್, ಸಚಿವರಾದ ಸಿ.ಟಿ.ರವಿ, ಅಪ್ಪಚ್ಚು ರಂಜನ್, ಸಂಸದ ನಳಿನ್ ಕುಮಾರ್, ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಶಾಸಕ ಕೃಷ್ಣ ಪಾಲೇಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ, ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಗೋವಾ ಸ್ಪೀಕರ್ ರಾಜೇಂದ್ರ ಅರಳೀಕರ್ ಕೂಡ ಸಮಾವೇಶಕ್ಕೆ ಆಗಮಿಸಿದ್ದು ಗಮನಾರ್ಹವಾಗಿತ್ತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.