ದಕ್ಷಿಣ ಕನ್ನಡ

ಬಂಡವಾಳಶಾಹಿ ಮುಖಗಳ ಬಯಲು ಮಾಡಿದ ಕಟ್ಟಿಮನಿ: ಡಾ. ವೆಂಕಟಗಿರಿ

Published On :

ಮಂಗಳೂರು: ಕಾಂತಾವರ ಕನ್ನಡ ಸಂಘ ಹಾಗೂ ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಮರು ಓದು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಬಳ್ಳಾರಿಯ ಡಾ. ವೆಂಕಟಗಿರಿ ದಳವಾಯಿ ಅವರು ಬಸವರಾಜ ಕಟ್ಟಿಮನಿಯವರ 'ಜ್ವಾಲಾಮುಖಿಯ ಮೇಲೆ' ಕಾದಂಬರಿ ಕುರಿತು ಮಾತನಾಡಿದರು.
ಬಸವರಾಜ ಕಟ್ಟಿಮನಿಯವರು ತಮ್ಮ 'ಜ್ವಾಲಾಮುಖಿಯ ಮೇಲೆ' ಕಾದಂಬರಿಯಲ್ಲಿ ನವೋದಯ ಮತ್ತು ಪ್ರಗತಿಶೀಲರ ನಡುವಿನ ತಿಕ್ಕಾಟ ಹಾಗೂ ಬೇರೆಬೇರೆ ಆಯಾಮಗಳಲ್ಲಿ ಬಂಡವಾಳಶಾಹಿಗಳ ಮುಖಗಳನ್ನು ಬಯಲು ಮಾಡಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯಾ ನಂತರ ಪ್ರಗತಿಶೀಲವೆನಿಸಿಕೊಂಡಿದ್ದ ಕಾಂಗ್ರೆಸ್ ಆಡಳಿತದ ಬಗ್ಗೆ ಎಲ್ಲರಿಗೂ ಬಹಳಷ್ಟು ನಿರೀಕ್ಷೆಗಳಿದ್ದದ್ದು ಸಹಜವಾಗಿತ್ತು. ಆದರೆ, 1951ರಲ್ಲಿ ರಚನೆಗೊಂಡ ಬಸವರಾಜ ಕಟ್ಟಿಮನಿಯವರ 'ಜ್ವಾಲಾಮುಖಿಯ ಮೇಲೆ' ಕಾದಂಬರಿಯಲ್ಲಿ ನೆಹರೂ ಸರ್ಕಾರವನ್ನು ನೇರವಾಗಿ ಅಲ್ಲಗಳೆದಿರುವುದೇ ಅಲ್ಲದೇ ನಾಲ್ಕು ವರ್ಷಗಳಲ್ಲಿಯೇ ನಮಗೆ ಭ್ರಮನಿರಸನವಾಯಿತು ಎಂಬುದನ್ನು ವಿವರಿಸಿದ್ದಾರೆ ಎಂದು ದಳವಾಯಿ ತಿಳಿಸಿದರು.
ಮೂಲತಃ ಪತ್ರಕರ್ತರಾಗಿದ್ದ ಕಟ್ಟಿಮನಿಯವರು ನೇರ ಹಾಗೂ ನಿಷ್ಠುರ ಸ್ವಭಾವದವರಾದರೂ ಸಮಾಜದಲ್ಲಾಗುತ್ತಿರುವ ಬಡವರ ಶೋಷಣೆ, ಜಾತಿ, ಸಂಘರ್ಷ, ಸ್ತ್ರೀ ಅಸಮಾನತೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರಿಂದಲೇ ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಆ ಕಾಲಘಟ್ಟದಲ್ಲಿ ಯಾವ ಕಾದಂಬರಿಗಳು ಬರದಿದ್ದಾಗ ಕಟ್ಟಿಮನಿಯವರು ಗಾಂಧೀಜಿ, ಬಸವಣ್ಣ, ಕುವೆಂಪು ಅವರ ಸಿದ್ಧಾಂತಗಳನ್ನೆಲ್ಲ ಸೇರಿಸಿ 'ಜ್ವಾಲಾಮುಖಿಯ ಮೇಲೆ' ಕಾದಂಬರಿಯನ್ನು ರಚಿಸಿದ್ದು, ಇದು ಅವರ ಬದುಕಿನ ಏರಿಳಿತಗಳನ್ನು ಸಾಂಕೇತಿಸುತ್ತದೆ. ಮಾತ್ರವಲ್ಲದೆ ಕನ್ನಡದಲ್ಲಿ ಪ್ರಗತಿಶೀಲರಲ್ಲಿ ಬಂದಂತಹ ಒಂದು ಮುಖ್ಯ ಕಾದಂಬರಿಯೂ ಆಗಿದೆ ಎಂದು ಹೇಳಿದರು. ವೆಂಕಟಗಿರಿ ದಳವಾಯಿ ಅವರನ್ನು ಸನ್ಮಾನಿಸಲಾಯಿತು. ಪ್ರಾಯೋಜಕ ಸಿ.ಕೆ. ಪಡಿವಾಳ್ ಇದ್ದರು. ಬೇಲಾಡಿ ರಾಮಚಂದ್ರ ಆಚಾರ್ಯ  ನಿರ್ವಹಿಸಿದರು. ಮಂಜುನಾಥ ಶೆಟ್ಟಿ ಸ್ವಾಗತಿಸಿ, ಸದಾನಂದ ನಾರಾವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.