ದಕ್ಷಿಣ ಕನ್ನಡ

ಬೈಕ್ ಮುಖಾಮುಖಿ; ಓರ್ವ ಸಾವು (ಸುದ್ದಿ ಸಂಕ್ಷೇಪ)

Published On :

ವಿಟ್ಲ: ಕನ್ಯಾನದ ಗೋಳಿಕಟ್ಟೆ ಎಂಬಲ್ಲಿ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಹೊಡೆದು ನಾರಾಯಣ ಆಚಾರ್ಯ ಅವರ ಪುತ್ರ ದಿವಾಕರ ಆಚಾರ್ಯ(45) ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ದಾಮೋದರ ಆಚಾರ್ಯರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಂಡಿತ್ತಡ್ಕ ಕಡೆಯಿಂದ ಕನ್ಯಾನ ಕಡೆಗೆ ಅತಿ ವೇಗದಿಂದ ಬಂದ ದಾಮೋದರ ಆಚಾರ್ಯರ ಬೈಕ್, ಕನ್ಯಾನ ಕಡೆಯಿಂದ ಬಂಡಿತ್ತಡ್ಕ ಕಡೆಗೆ ಹೋಗುತ್ತಿದ್ದ ದಿವಾಕರ ಆಚಾರ್ಯ ಬೈಕ್‌ಗೆ ಗೋಳಿಕಟ್ಟೆ ಎಂಬಲ್ಲಿ ಡಿಕ್ಕಿ ಹೊಡೆಯಿತು. ಪರಿಣಾಮ ದಿವಾಕರ ಆಚಾರ್ಯರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ  ಅಸುನೀಗಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿ ಆಕಸ್ಮಿಕ; ದಾಸ್ತಾನು ಕಟ್ಟಡ ಭಸ್ಮ
ವಿಟ್ಲ: ಆಕಸ್ಮಿಕವಾಗಿ ಕೃಷಿ ದಾಸ್ತಾನು ಕಟ್ಟಡಕ್ಕೆ ಬೆಂಕಿ ತಗುಲಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದ ಘಟನೆ ಕೇಪು ಗ್ರಾಮದ ಮೈರ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಮೈರ ನಿವಾಸಿ ಶಂಕರ ಮೂಲ್ಯ ಮನೆಗೆ ಹೊಂದಿಕೊಂಡಿರುವ ಕೃಷಿ ದಾಸ್ತಾನು ಕಟ್ಟಡಕ್ಕೆ ಗುರುವಾರ ರಾತ್ರಿ ಬೆಂಕಿ ತಗುಲಿದ್ದು, ಬೆಂಕಿ  ವೇಗವಾಗಿ ಹೊತ್ತಿಕೊಂಡಿದ್ದರಿಂದ  ಕಟ್ಟಡ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿಯ ಕೆನ್ನಾಲಿಗೆ ಕಟ್ಟಡದ ದಾಸ್ತಾನು ಕೋಣೆಯೊಳಗಡೆ  ಶೇಖರಿಸಿ ಇರಿಸಲಾಗಿದ್ದ ಕೃಷಿ ಉತ್ಪನ್ನಗಳಾದ ಅಡಕೆ ಮೂಟೆಗಳು, ತೆಂಗಿನ ಕಾಯಿಗಳು, ಕಾಳುಮೆಣಸು ಸುಟ್ಟುಹೋಗಿವೆ.  ಮನೆಗೆ ಹೊಂದಿಕೊಂಡಿರುವ ಕಟ್ಟಡಕ್ಕೆ ಬಿದ್ದ ಬೆಂಕಿಯ ಕೆನ್ನಾಲಿಗೆಯಿಂದ ಮನೆಗೆ ಯಾವುದೇ ಹಾನಿಯಾಗದಂತೆ ಸ್ಥಳಕ್ಕೆ ದಾವಿಸಿ ಬಂದ ಸ್ಥಳೀಯರು ಶ್ರಮಪಟ್ಟು ಮುಂಜಾಗ್ರತೆ ವಹಿಸಿದರು.  ಮಾಹಿತಿ ಪಡೆದ ವಿಟ್ಲ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ, ಕಟ್ಟಡದ ಮಾಡು, ಕೃಷಿ ಸಲಕರಣೆಗಳು ಹಾಗೂ ಉತ್ಪನ್ನಗಳು ಸೇರಿ ಸುಮಾರು ರು. 15 ಲಕ್ಷ ನಷ್ಟ ಸಂಭವಿಸಿದೆ.

ದಾಯಾದಿ ಹಲ್ಲೆ; ಗಾಯಾಳು ಆಸ್ಪತ್ರೆಗೆ
ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ದಾಯಾದಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಕಂಬಳಬೆಟ್ಟು ನೆಕ್ಕರೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಕಂಬಳಬೆಟ್ಟು ಸಮೀಪದ ದಾಸರಬೆಟ್ಟು ನಿವಾಸಿ ಮಹಮ್ಮದ್ ಅವರ ಪುತ್ರ ಅಬೂಬಕ್ಕರ್ ಎಂಬವರೇ ಹಲ್ಲೆಗೊಳಗಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬೂಬಕ್ಕರ್ ಅವರು ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕಂಬಳಬೆಟ್ಟು ಮಸೀದಿಯಲ್ಲಿ ನಮಾಜ್ ಮುಗಿಸಿಕೊಂಡು ಮನೆಯತ್ತ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ಅವರ ಚಿಕ್ಕಪ್ಪನ ಮಕ್ಕಳಾದ ದಾಸರಬೆಟ್ಟಿನ ಅಬ್ದುಲ್ ಲತೀಫ್ ಹಾಗೂ ಅಬ್ದುಲ್ ಹಮೀದ್ ಎಂಬವರು ಅಬೂಬಕ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಗಾಯಾಳು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಟ್ರ್ಯಾಕ್ ಮೆನ್‌ಗೆ ಹಲ್ಲೆ- ಆರೋಪ
ಪುತ್ತೂರು: ರೇಲ್ವೆ ಟ್ರ್ಯಾಕ್‌ಮೆನ್ ಒಬ್ಬರಿಗೆ ರೇಲ್ವೆ ಇಲಾಖೆಯ ಸೀನಿಯರ್ ಎಂಜಿನಿಯರೊಬ್ಬರು ಹಲ್ಲೆ ನಡೆಸಿದ ಘಟನೆ ಬುಧವಾರ ಪುತ್ತೂರಿನಲ್ಲಿ ನಡೆದಿದೆ. ಕಬಕ ಪುತ್ತೂರು ರೈಲು ನಿಲ್ದಾಣದ ನೇರಳಕಟ್ಟೆ ವ್ಯಾಪ್ತಿಯ ಟ್ರ್ಯಾಕ್‌ಮೆನ್ ಆಗಿರುವ ರಾಜಸ್ಥಾನದ ನಿವಾಸಿ  ದಿನೇಶ್ (28) ಹಲ್ಲೆಗೊಳಗಾಗಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಾನು ಕಳೆದ ಕೆಲವು ದಿನ ರಜೆಯಲ್ಲಿದ್ದು, ಬುಧವಾರ ಕೆಲಸಕ್ಕೆ ಹಾಜರಾಗಲು ವೈದ್ಯಕೀಯ ಪತ್ರದೊಂದಿಗೆ ಕಬಕ ಪುತ್ತೂರು ರೇಲ್ವೆಯ ಸೀನಿಯರ್ ಎಂಜಿನಿಯರ್ ಮಂಜುನಾಥ್ ಅವರಲ್ಲಿಗೆ ಹೋದಾಗ ಅವರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದಿನೇಶ್ ಆರೋಪಿಸಿದ್ದಾರೆ.

ಅಪಹರಣ ಆರೋಪಿಗಳಿಗೆ ಜಾಮೀನು
ಪುತ್ತೂರು: ವರ್ಷದ ಹಿಂದೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಒಳತ್ತಡ್ಕ ಎಂಬಲ್ಲಿ ನಡೆದಿದ್ದ ಅಪ್ರಾಪ್ತ ಹುಡುಗಿಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದೆ.  ಕಳೆದ 2012ರ ಫೆ. 22 ರಂದು ಪುತ್ತೂರು ತಾಲೂಕಿನ ಆರ್ಯಾಪು  ಗ್ರಾಮದ ಒಳತ್ತಡ್ಕ ನಿವಾಸಿ ಸುಲೈಮಾನ್ ಅವರ ಪುತ್ರಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಸುಲೈಮಾನ್ ಅವರ ಸಂಬಂಧಿ ಹುಸೈನ್ ಎಂಬಾತ ಆಕೆಯನ್ನು  ಪುಸಲಾಯಿಸಿ ಅಪಹರಿಸಿ ಬೆಳ್ತಂಗಡಿಯ ಇಬ್ರಾಹಿಂ ಎಂಬವರ ಮನೆಯಲ್ಲಿ ಕೂಡಿ ಹಾಕಿ ಅನ್ನ ನೀರು ಕೊಡದೆ ಹಿಂಸಿಸಿದ್ದು ಮಾತ್ರವಲ್ಲದೆ ರಫೀಕ್ ಮತ್ತು ಮಹಮ್ಮದಾಲಿ ಆಕೆಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿಗಳಾದ ಹುಸೈನ್, ರಫೀಕ್, ಮಹಮ್ಮದಾಲಿ ಎಂಬುವರ ಮೇಲೆ ಪ್ರಕರಣ  ದಾಖಲಿಸಿಕೊಂಡಿದ್ದರು. ಆದರೆ, ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಆರೋಪಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಗಳ ಪರವಾಗಿ ವಕೀಲ ನೂರುದ್ಧೀನ್ ಸಾಲ್ಮರ ವಾದಿಸಿದ್ದರು.

ಮಹಿಳೆ ನಾಪತ್ತೆ: ದೂರು
ಮಂಗಳೂರು: ನಗರದ ಪಂಜಿವ ೊಗರು ರಮೇಶ್ ಎಂಬವರ ಪತ್ನಿ ಮರಿಯಾ(25)ಫೆ.13ರಿಂದ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಮರಿಯಾ ತನ್ನ ತಂದೆ ಎರಿಕ್ ಜತೆ ಹೋದವರು ಕಾಣೆಯಾಗಿದ್ದಾರೆ ಎಂದು ಪತಿ ರಮೇಶ್ ಕಾವೂರು ಪೊಲೀಸರಿಗೆ ದೂರಿದ್ದಾರೆ.


ಇಂದು ಹಾಸ್ಟೆಲ್ ದಿನಾಚರಣೆ
ಮೂಲ್ಕಿ: ಮೂಲ್ಕಿಯ ವಿಜಯ ಕಾಲೇಜಿನ ಹಾಸ್ಟೆಲ್
ದಿನಾಚರಣೆ 16ರ ಸಂಜೆ ಕಾಲೇಜ್ ಸಭಾಂಗಣದಲ್ಲಿ ಜರುಗಲಿದೆ. ಕಾಲೇಜಿನ ಪದವಿಪೂರ್ವ ವಿಭಾಗದ ಶಿಕ್ಷಕ-ಹೆತ್ತವರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವ,ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಪಮೀದಾ ಬೇಗಂ ಭಾಗವಹಿಸಲಿದ್ದು ಪ್ರಾಚಾರ್ಯ ಕೆ.ಆರ್.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
 
ಇಂದು 'ಸಾಮರಸ್ಯ-2013'
ಮಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸೊಸೈಟಿ ವತಿಯಿಂದ ಫೆ. 16 ಮತ್ತು 17 ರಂದು ಬಲ್ಮಠದ ಕಾಸೆಸ್ ಮೈದಾನದಲ್ಲಿ 'ಸಾಮರಸ್ಯ-2013 ಶಾಂತಿಗಾಗಿ ಕಲೋತ್ಸವ ಮತ್ತು ಆಹಾರೋತ್ಸವ' ಕಾರ್ಯಕ್ರಮ ನಡೆಯಲಿದೆ. ಕಲೋತ್ಸವವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿನಯ್ ಹೆಗ್ಡೆ ಉದ್ಘಾಟಿಸುವರು. ಅತಿಥಿಗಳಾಗಿ ದಿಲ್ಲಿಯ ಇಂಟರ್ ಫೈತ್ ಕೋಅಲಿಷನ್ ಫಾರ್ ಫೀಸ್ ಕಾರ್ಯದರ್ಶಿ ಡಾ. ಪಾಕಿಯಂ ಸ್ಯಾಮುವೇಲ್, ಕೆಟಿಸಿ ಪ್ರಾಂಶುಪಾಲ ಡಾ. ಹನಿ ಕಬ್ರಾಲ್ ಪಾಲ್ಗೊಳ್ಳುವರು ಎಂದು ಸೊಸೈಟಿ ಖಜಾಂಚಿ ಡಾ.ಡಿ.ಆರ್. ಸದಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
17 ರಂದು ನಡೆಯುವ ಆಹಾರೋತ್ಸವದಲ್ಲಿ  ನೂರಾರು ಬಗೆಯ ಸಾಂಪ್ರದಾಯಿಕ ತಿಂಡಿ, ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದರು.

ಇಂದಿನಿಂದ ವಿಂಶತಿ ರಂಗ ಸಂಭ್ರಮ
ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ವತಿಯಿಂದ ಕರ್ನಾಟಕ ನಾಟಕ ಆಕಾಡೆಮಿ ಸಹಯೋಗದಲ್ಲಿ ಕುಸುಮಸಾರಂಗ ರಂಗ ಘಟಕದ ವಿಂಶತಿ ರಂಗ ಸಂಭ್ರಮ-2013 ಕಾರ್ಯಕ್ರಮ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನಲ್ಲಿ ಫೆ.16ರಿಂದ 18ರತನಕ ನಡೆಯಲಿದೆ. ಶನಿವಾರ ಸಂಜೆ ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಎಸ್. ಅಂಗಾರ, ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಕಾಲೇಜಿನ ಸಂಚಾಲಕ ಕೃಷ್ಣ ಪ್ರಸಾದ್ ಮಡ್ತಿಲ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಂಜೆ 7ಕ್ಕೆ ಜನರ್ ಥಿಯೇಟರ್ ಗ್ರೂಫ್ ಮಂಗಳೂರು ಪ್ರಸ್ತುತಪಡಿಸುವ 'ಕಾವ್ಯ ಕಥಾರಂಗ' ನಂತರ ವಿದ್ಯಾಸಾಗರ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ವತಿಯಿಂದ 'ಮಾರೀಷಾ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಭಾನುವಾರ ರಂಗಾಯಣ ಮೈಸೂರು ಪ್ರಸ್ತುತಿಯಲ್ಲಿ 'ಪುಗಳೇಂದಿ ಪ್ರಹಸನ' ನಾಟಕ ನಡೆಯಲಿದೆ.

ಇಂದು ವಾಲಿಬಾಲ್ ಪಂದ್ಯ
ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ದಿ.ಎಂ.ಎಸ್. ದೇವರಾಜ್ ಸ್ಮಾರಕ ವಾಲಿಬಾಲ್ ಪಂದ್ಯಾವಳಿ ದತ್ತಿ ಸಮಿತಿಯ ಜಂಟಿ ಆಶ್ರಯದಲ್ಲಿ ಫೆ.16ರಂದು ಶನಿವಾರ ಸುಳ್ಯ ತಾಲೂಕು ಮಟ್ಟದ 23ನೇ ವರ್ಷದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಲಿರುವುದು.

ಇಂದು ರಾಷ್ಟ್ರೀಯ ಕಾರ್ಯಾಗಾರ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ರಾಷ್ಟ್ರೀಯ ಮಾನವಿಕ ವಿಭಾಗದ ಆಶ್ರಯದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ರಾಷ್ಟ್ರ ಮಟ್ಟದ ಕಾರ್ಯಾಗಾರ 'ಮಾನವ ಹಕ್ಕುಗಳ ಸಾಕ್ಷರತೆ' ಶನಿವಾರ ನೆರವೇರಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್ ಕಾಮತ್ ತಿಳಿಸಿದ್ದಾರೆ.

ನಂದಿನಿ ಹಾಲಿನ ದರ 1 ಇಳಿಕೆ
ಮಂಗಳೂರು: ನಂದಿನಿ ಹಾಲಿನ ದರ ಫೆ. 14 ರಂದು ಏರಿಕೆಯಾಗಿದ್ದ ದರದಲ್ಲಿ ಪ್ರತಿ ಲೀಟರಿಗೆ 1 ಕಡಿತಗೊಳಿಸಲಾಗಿದೆ. ಅಧಿಕೃತ ಮಾರಾಟಗಾರರು ಸಂಸ್ಥೆ ಪ್ರಕಟಿಸಿದ ದರವನ್ನು ಹೊರತುಪಡಿಸಿ ಹೆಚ್ಚು ದರ ಮಾರಾಟ ಮಾಡಿದಲ್ಲಿ ಡೀಲರ್‌ಶಿಪ್ ರದ್ದುಗೊಳಿಸಲಾಗುತ್ತದೆ ಎಂದು ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ರವಿರಾಜ್ ಕೊಡವೂರು ಹೇಳಿದ್ದಾರೆ. ನಂದಿನಿ ಟೋನ್ಡ್ ಹಾಲು 500 ಲೀ- 14, 1ಲೀ-28, ನಂದಿನಿ ಹೋಮೋಜಿನೈಸ್ಡ್ ಹಸುವಿನ ಹಾಲು 500 ಲೀ- 15.50, 6ಲೀ- 186, ನಂದಿನಿ ಶುಭಂ ಹಾಲು 500 ಲೀ- 17, ನಂದಿನಿ ಸಮೃದ್ಧಿ ಹಾಲು 500ಲೀ- 18, ಮೊಸರು 200ಗ್ರಾಂ- 8.50, ಮೊಸರು 400ಲೀ- 15.50, ಮೊಸರು 6ಕೆಜಿ(ಜಂಬೋ)- 204, ಸಿಹಿ ಲಸ್ಸಿ 200 ಲೀ- 9.

ಇಂದಿನಿಂದ ನಾಮಪತ್ರ ಸಲ್ಲಿಕೆ
ಸುಳ್ಯ: ಮಾ.7 ರಂದು ಸುಳ್ಯ ನಗರ ಪಂಚಾಯಿತಿ  ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಫೆ.16 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಫೆ.23 ಕೊನೆಯ ದಿನಾಂಕ ಫೆ.25 ರಂದು ನಾಮಪತ್ರ ಪರಿಶೀಲನೆ. ನಾಮಪತ್ರ ಹಿಂತೆಗೆಯಲು ಫೆ.27 ಕೊನೆ ದಿನಾಂಕ, ಮಾ.7 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಮಾ.11 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಈ ಬಾರಿ ಮತ ಯಂತ್ರದ ಮೂಲಕ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚುನಾವಣಾಧಿಕಾರಿ, ಉಪತಹಸೀಲ್ದಾರರು ಉಪಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇಂದು ಡಿಸಿಎಂ ಜಿಲ್ಲೆಗೆ
ಮಂಗಳೂರು: ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶನಿವಾರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅಪರಾಹ್ನ  2.45ಕ್ಕೆ ವಿಮಾನ ನಿಲ್ದಾಣ ರಸ್ತೆ, ಕಾರ್ಪೊರೇಶನ್ ಮುಖ್ಯ ರಸ್ತೆ, ಮಿನಿ ವಿಧಾನಸೌಧ, ಇತರೆ ಅಭಿವೃದ್ಧಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5ಕ್ಕೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ವಿವಿಧ ಸಮಾರಂಭದಲ್ಲಿ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.