ದಕ್ಷಿಣ ಕನ್ನಡ

ಸವಾರ ಸಾವು (ಸುದ್ದಿ ಸಂಕ್ಷೇಪ)

Published On :

ಮಂಗಳೂರು: ಪಣಂಬೂರಿನ ಎಂಸಿಎಫ್ ಬಳಿ ಟಾಟಾ ಸುಮೋ ಡಿಕ್ಕಿಯಾಗಿ ಬೈಕ್ ಸವಾರ ಕದ್ರಿಯ ಸೋಜಾ ಕಾಟೇಜ್ ನಿವಾಸಿ ಸಂತೋಷ್ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ. ಈ ಕುರಿತು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚಿತ ಶವ
ಮಂಗಳೂರು: ನಗರದ ಬದ್ರಿಯಾ ಜಂಕ್ಷನ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾದ ಬಗ್ಗೆ ಶುಕ್ರವಾರ ವರದಿಯಾಗಿದೆ. ಶವದ ಕಿಸೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಚೀಟಿ ದೊರೆತಿದ್ದು, ಅದರಲ್ಲಿ ನಾಗೇಶ್(36) ಎಂದು ಬರೆಯಲಾಗಿದೆ. ಅಸೌಖ್ಯದಿಂದ ಈತ ಮೃತಪಟ್ಟಿರಬಹುದು ಎಂದು ಅಶ್ರಫ್ ಎಂಬವರು ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.

ಆಭರಣ ಕಳವು
ಮಂಗಳೂರು: ನಗರದ ಗಾಂಧಿನಗರ ಬಳಿ ಪಾದಚಾರಿಯಾಗಿ ಸಾಗುತ್ತಿದ್ದ ಮಾಲೆಮಾರ್ ನಿವಾಸಿ ಲಲಿತ(73)ಎಂಬಾಕೆಯ ಕುತ್ತಿಗೆಯಿಂದ ಅಪರಿಚಿತರಿಬ್ಬರು ಚಿನ್ನದ ಸರ ಎಗರಿಸಿದ ಘಟನೆ ಶುಕ್ರವಾರ ಹಾಡುಹಗಲೇ ಸಂಭವಿಸಿದೆ. ಮನೆಗೆಲಸ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದಾಗ ಅಪರಿಚಿತರಿಬ್ಬರು ಬೆದರಿಸಿ ಚಿನ್ನ ಕಸಿದು ಪರಾರಿಯಾಗಿದ್ದಾರೆ. ಸುಮಾರು ಒಂದೂವರೆ ಪವನ್ ಚಿನ್ನದ ಸರದ ಮೌಲ್ಯವಾಗಿದ್ದು, ಬರ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.

ಕಾರು ಡಿಕ್ಕಿ; ಬೈಕ್ ಸವಾರ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಉದನೆ ಎಂಬಲ್ಲಿ ಬೈಕ್ ಮತ್ತು ಮಾರುತಿ ಓಮ್ನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ  ಮುಕುಂದನ್ (42) ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಶಿಬಾಜೆ ಗ್ರಾಮ ನಿವಾಸಿಯಾಗಿರುವ ಮುಕುಂದನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ; ರಿಕ್ಷಾ ಚಾಲಕ ಗಂಭೀರ
ಉಪ್ಪಿನಂಗಡಿ: ಕಡಬ ಪೇಟೆಯಲ್ಲಿ ರಿಕ್ಷಾ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ರಜಾಕ್ (50) ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ರಜಾಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿಕ್ಷಾ ಪಲ್ಟಿ: ಬಾಲಕ ಸಾವು
ಬೆಳ್ತಂಗಡಿ: ರಿಕ್ಷಾ ಪಲ್ಟಿಯಾಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಮದ್ದಡ್ಕ ಸಮೀಪದ ಕಿನ್ನಿಗೋಳಿ ಎಂಬಲ್ಲಿ ಶುಕ್ರವಾರ ನಡೆದಿದೆ. ಮುಂಡಾಜೆ ಚೆನ್ನಿಗುಡ್ಡೆ ಮನೆಯ ಇಬ್ರಾಹಿಂ ಎಂಬವರ ಪುತ್ರ ಮಹಮ್ಮದ್ ರಶೀದ್ (13) ಮೃತ ಬಾಲಕ. ಆತ ತನ್ನ ಮನೆಯವರೊಂದಿಗೆ ರಿಕ್ಷಾದಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಕಿನ್ನಿಗೋಳಿಯಲ್ಲಿ ರಿಕ್ಷಾ ಪಲ್ಟಿಯಾಯಿತು. ಬಾಲಕ ರಿಕ್ಷಾದಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಶೀದ್ ಮುಂಡಾಜೆ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಜೆ ನಿವಾಸಿ ಶ್ರೀಧರ (28) ಶುಕ್ರವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಅಮಲು ಪದಾರ್ಥ ಸೇವನೆ ಚಟ ಹೊಂದಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಹೊಟ್ಟೆಗಿಲ್ಲದೆ ವೃದ್ಧೆ ಸಾವು: ತಡವಾಗಿ ಬೆಳಕಿಗೆ
ಮಲ್ಪೆ:  ಕೆಮ್ಮಣ್ಣು ಗ್ರಾಮದಲ್ಲಿ ಅನೇಕ ದಿನ ಹೊಟ್ಟೆಗಿಲ್ಲದೆ ಮುಂಬೈಯ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಸುಶೀಲಾ ಬಾಬು ರಾವ್ ಕೆ.(65) ಮೃತರು. ಈಕೆ ಸುಮಾರು 1 ವಾರದಿಂದೀಚೆಗೆ ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದರು. ಸ್ಥಳೀಯರು ಆಕೆಯನ್ನು ಗಮನಿಸಿದ್ದರೂ ವಿಚಾರಿಸುವ ಗೋಜಿಗೆ ಹೋಗಿರಲಿಲ್ಲ. ರಾತ್ರಿ ಇಲ್ಲಿನ ರಸ್ತೆಯ ಅಡಿಯಲ್ಲಿ (ಮಳೆಗಾಲದಲ್ಲಿ ನೀರು ಹರಿಯುವ) ಮೋರಿಯಲ್ಲಿ ಮಲಗುತ್ತಿದ್ದರು. ಶುಕ್ರವಾರ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದಾಗ ಸ್ಥಳೀಯರು ಹುಡುಕಾಡಿದಾಗ ಮೋರಿಯಲ್ಲಿ ಈ ಮಹಿಳೆಯ ಶವ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಕೊಳೆತು ಒಣಗುವ ಸ್ಥಿತಿಗೆ ಬಂದಿದ್ದು, ಆಕೆ ಮೃತಪಟ್ಟು 5 - 6 ದಿನಗಳಾಗಿರಬೇಕು ಎಂದು ಶಂಕಿಸಲಾಗಿದೆ. ವೃದ್ಧಾಪ್ಯ, ಅನಾರೋಗ್ಯ ಮತ್ತು ಹಸಿವೆ ಎಲ್ಲವೂ ಒಟ್ಟಾಗಿ ಆಕೆ ಮೃತಪಟ್ಟಿರಬೇಕು ಎಂದು ಭಾವಿಸಲಾಗಿದೆ. ಆಕೆಯ ಬ್ಯಾಗಿನಲ್ಲಿ ಮತದಾರರ ಚೀಟಿಯಿತ್ತು. ಅದರಂತೆ ಆಕೆಯ ಹೆಸರು ಪತ್ತೆಯಾಗಿದೆ. ಅಲ್ಲದೆ ಅದರಲ್ಲಿ ಮುಂಬೈಯ ಜೋಗೇಶ್ವರಿಯ ವಿನಾಯಕ ದೇವಾಲಯದ ಬಳಿಯ ನಿವಾಸಿ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.