ದಕ್ಷಿಣ ಕನ್ನಡ

ಧರ್ಮಸ್ಥಳ ಜನಕಲ್ಯಾಣ ಕಾರ್ಯಕ್ರಮ ತಿರುಪತಿಯಲ್ಲೂ ಅನುಷ್ಠಾನ: ಆದಿಕೇಶವಲು

Published On :

ಬೆಳ್ತಂಗಡಿ: ಶ್ರೀ ಕ್ಷೇತ್ರ ಕೈಗೊಂಡಿರುವ ಜನಕಲ್ಯಾಣ ಕಾರ್ಯಕ್ರಮಗಳು ದೇಶಕ್ಕೆ ಮಾದರಿ. ಇಲ್ಲಿನ ಚಟುವಟಿಕೆಗಳ ಸ್ಪೂರ್ತಿಯಿಂದ ತಿರುಪತಿಯಲ್ಲಿಯೂ ಕೆಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ. ಆದಿಕೇಶವಲು ಹೇಳಿದರು.
 ಅವರು ಧರ್ಮಸ್ಥಳ ದೇವಳದ ಮಂಜೂಷಾ ವಸ್ತು ಸಂಗ್ರಾಹಲಯದ ಬಳಿ ಹರಕೆ ಮುಡಿಯನ್ನು ಸಲ್ಲಿಸಲು ಅನುಕೂಲವಾಗುವಂತೆ ನೂತನವಾಗಿ ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಿರುವ ಶ್ರೀ ಮುಡಿ ಭವನ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
 ಇಲ್ಲಿನ ಅನ್ನದಾನದ ಪರಂಪರೆಯನ್ನು ಗಮನಿಸಿ 1982ರಲ್ಲಿ ತಿರುಪತಿಯಲ್ಲೂ ಅನ್ನಪ್ರಸಾದವನ್ನು ಪ್ರಾರಂಭಿಸಲಾಯಿತು. ಈಗ ತಿರುಪತಿಯಲ್ಲಿ ಅನ್ನದಾನದ ವ್ಯವಸ್ಥೆಗೆ 3 ಸಾವಿರ 17 ಕೋಟಿ ರುಪಾಯಿ ಠೇವಣಿ ಸಂಗ್ರಹವಾಗಿದ್ದು, ಅದರ ಬಡ್ಡಿಯಿಂದ ನಿರಾಂತಕವಾಗಿ ಅನ್ನದಾನದ ಸೇವೆ ನಡೆಯುತ್ತಿದೆ. ದಿನಂಪ್ರತಿ ಸುಮಾರು 50,000 ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಅದರಂತೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಬಡಜನರ ಆರೋಗ್ಯದ ದೃಷ್ಟಿಯಿಂದ ಪ್ರಾಣದಾನ ಟ್ರಸ್ಟ್ ಅನ್ನು 1990ರಲ್ಲಿ ಸ್ಥಾಪಿಸಿ ಧರ್ಮಸ್ಥಳದಂತೆ ಆರೋಗ್ಯದ ಅಭಯವನ್ನು ನೀಡಲಾಗುತ್ತಿದೆ. ಈ ಯೋಜನೆಗೆ 3000 ಕೋಟಿ ಸಂಗ್ರಹವಾಗಿದೆ ಎಂದರು. ಇದೀಗ ಇಲ್ಲಿನ ಶ್ರೀ ಮುಡಿ ಭವನ ನೋಡಿ ಅದರ ಸ್ಪೂರ್ತಿಯಿಂದ ತಿರುಪತಿಯಲ್ಲೂ ಇದೇ ರೀತಿ ಮಾಡುವ ಇಚ್ಚೆಯನ್ನು ಹೊಂದಿದ್ದು ಈ ಬಗ್ಗೆ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ,  ಇನ್ನು ಮುಂದೆ ಹರಕೆ ಮುಡಿ ಅರ್ಪಿಸುವವರು ಗಂಟೆಗಟ್ಟಲೆ ಸರತಿ ಸಾಲು ನಿಲ್ಲಬೇಕಾಗಿಲ್ಲ. ಭವನ 20000 ಚದರ ಅಡಿ ವಿಸ್ತಾರದಲ್ಲಿ 70 ವಿಭಾಗ ಮಾಡಲಾಗಿದ್ದು 65 ಕ್ಷೌರಿಕರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಸುಮಾರು 4,400 ಮಂದಿಗೆ ಅನುಕೂಲಕರವಾಗಿ ಹರಕೆ ಮುಡಿ ಒಪ್ಪಿಸಿಕೊಳ್ಳಬಹುದಾಗಿದೆ. ಸಿಸಿ ಟಿವಿಯನ್ನೂ ಅಳವಡಿಸಲಾಗಿದೆ. ಮುಡಿ ಒಪ್ಪಿಸುವವರ ಕುಟುಂಬಿಕರು ಜತೆಗಿದ್ದಲ್ಲಿ ಅವರು ಉಳಿದುಕೊಳ್ಳಲೂ ಸೂಕ್ತ ವ್ಯವಸ್ಥೆ ಇದೆ ಎಂದ ಅವರು ತಿರುಪತಿಯಲ್ಲಿನ ಕ್ಯೂ ಕಾಂಪ್ಲೆಕ್ಸ್‌ನಿಂದ ಸ್ಪೂರ್ತಿಗೊಂಡು ಇನ್ನೆರಡು ವರ್ಷದಲ್ಲಿ ಕ್ಯೂ ಕಾಂಪ್ಲೆಕ್ಸನ್ನು ಪೂರ್ತಿಗೊಳಿಸಲಾಗುವುದು ಎಂದರು.
 ಸಂಸದ ನಳಿನ್ ಕುಮಾರ್ ಕಟೀಲು, ಸತ್ಯಪ್ರಭ ಆದಿಕೇಶವಲು, ಸುರೇಂದ್ರ ಕುಮಾರ್, ಸುಪ್ರಿಯಾ ಹಷೇಂದ್ರ ಕುಮಾರ್ ಇದ್ದರು. ಭವನ ನಿರ್ಮಾಣದಲ್ಲಿ ಪಾಲ್ಗೊಂಡ ಗೋಪಾಲ್ ಮೆನನ್, ಸೀತಾರಾಮ, ಸುಧಾಕರ ಹೆಗ್ಡೆ, ತಂಗಚ್ಚನ್, ಕಟ್ಟಡ ಮೇಲ್ವಿಚಾರಕ ಸಾಂತಪ್ಪ ಅವರನ್ನು ಸನ್ಮಾನಿಸಲಾಯಿತು. ಡಿ. ಹಷೇಂದ್ರ ಕುಮಾರ್ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಶ್ರೀನಿವಾಸ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.