ಅಂತರಂಗದ ಜಗತ್ತೂ ಪ್ರಮುಖ: ಭುವನೇಶ್ವರಿ ಹೆಗಡೆ
ಪುತ್ತೂರು: ಸಮಾಜದಲ್ಲಿ ಪ್ರಮುಖವಾಗಿ ಬಾಹ್ಯ ಹಾಗೂ ಅಂತರಂಗದ ಜಗತ್ತು ಪ್ರಮುಖವಾಗಿದ್ದು, ಬಾಹ್ಯ ಜಗತ್ತು ವ್ಯಾಪಾರಿ ಅಂಶವನ್ನು ತೋರಿಸುತ್ತದೆ. ಆದರೆ ಅಂತರಂಗದ ಜಗತ್ತಿನಿಂದ ಮಾತ್ರ ಭಾವನಾತ್ಮಕ ಎಳೆಗಳನ್ನು ನಮ್ಮ ಬದುಕಿನಲ್ಲಿ ಕಾಣಲು ಮತ್ತು ತಲ್ಲಣ ರಹಿತ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಖ್ಯಾತ ನಗೆಲೇಖಕಿ, ಮಂಗಳೂರು ವಿ.ವಿ. ಕಾಲೇಜಿನ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಹೇಳಿದ್ದಾರೆ.
ಪುತ್ತೂರಿನ ಅನುರಾಗ ವಠಾರದ ನಟರಾಜ ಏಣಗಿ ವೇದಿಕೆಯಲ್ಲಿನ ಕುರಿಯ ವಿಠಲಶಾಸ್ತ್ರಿ ಸಭಾಭವನದಲ್ಲಿ ನಡೆಯುತ್ತಿರುವ ಸಾಹಿತ್ಯ ಕಲಾ ಕುಶಲೋಪರಿ- ಸಂಸ್ಕೃತಿ ಸಲ್ಲಾಪ ಕಾರ್ಯಕ್ರಮದಲ್ಲಿ ಭಾನುವಾರ ಪುತ್ತೂರಿನ ಗೌರಿ ಮಾಧವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಉಗ್ರಾಣ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಪ್ರಸ್ತುತ ಪುರುಸೊತ್ತಿಲ್ಲದ ಸೋಮಾರಿಗಳ ಸಂಖ್ಯೆ ಹೆಚ್ಚಾಗಿದೆ. ಸಾಹಿತ್ಯ, ಓದು ಇತ್ಯಾದಿ ಬಗ್ಗೆ ಮನಸ್ಸು ಸೆಳೆಯುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕತೆ ಎಂಬುದು ಕೆಲವರ ಕೈಯೊಳಗೆ ಸಿಲುಕಿ ಸಮಸ್ಯೆ ಸುಳಿಯಲ್ಲಿದೆ ಎಂದು ಹೆಗಡೆ ವಿಷಾದಿಸಿದರು.
ಪ್ರಶಸ್ತಿ ಪ್ರದಾನ: ಪ್ರಸ್ತುತ ವರ್ಷದ ಉಗ್ರಾಣ ಪ್ರಶಸ್ತಿಯನ್ನು ಸಾಹಿತಿ ಕೆ.ಟಿ. ಗಟ್ಟಿ ಹಾಗೂ ಡಾ. ಜಯಪ್ರಕಾಶ್ ಮಾವಿನಕುಳಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಕೆ.ಟಿ. ಗಟ್ಟಿ ಮಾತನಾಡಿ, ಈ ಹಿಂದೆಲ್ಲಾ ಪತ್ರಿಕೆಗಳಲ್ಲಿ ವಿಮರ್ಶೆಯ ಲೇಖನಗಳು ಪ್ರಕಟವಾಗುತ್ತಿತ್ತು. ಆದರೆ ಇದೀಗ ಇಂತಹ ಲೇಖನಗಳು ಮರೆಯಾಗಿದ್ದು, ಜಾಗತೀಕರಣದ ಪರಿಣಾಮವಾಗಿ ಎಲ್ಲವೂ ಮಾಸಿ ಹೋಗುವಂತಾಗಿದೆ ಎಂದರು.
ಡಾ. ಜಯಪ್ರಕಾಶ್ ಮಾವಿನಕುಳಿ ಮಾತನಾಡಿ, ಪ್ರಸ್ತುತ ಪ್ರಶಸ್ತಿ ಹುಡುಕಿಕೊಂಡು ಹೋಗುವ ಸಂಪ್ರದಾಯ ಬೆಳೆಯುತ್ತಿದೆ. ವಿಮರ್ಶೆ ಮಾಡಿ ಪ್ರಶಸ್ತಿ ನೀಡುವ ಪ್ರಶಸ್ತಿಗಳು ಹೆಚ್ಚು ಮೌಲ್ಯಯುತವಾಗಿರುತ್ತದೆ ಎಂದರು.
ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಕಜೆ ಅಭಿನಂದನಾ ಮಾತುಗಳನ್ನಾಡಿದರು. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್, ಕಾರ್ಯದರ್ಶಿ ಡಾ.ಎಚ್.ಜಿ. ಶ್ರೀಧರ್ ಇದ್ದರು.
ಗೌರಿ ಮಾಧವ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕ ರಮಾನಂದ ನಾಯಕ್ ಸ್ವಾಗತಿಸಿದರು. ಪುರುಷೋತ್ತಮ ನಿಡ್ವಣ್ಣಾಯ ವಂದಿಸಿದರು. ಹರಿಣಾಕ್ಷಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

