ಮುಂದುವರಿದ ಮಳೆ, ಕೃತಕ ನೆರೆ
ಮಂಗಳೂರು: ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದೆ. ಶನಿವಾರ ರಾತ್ರಿ ತುಂತುರು ಹನಿದ ಮಳೆ ಮುಂಜಾನೆ ಮೋಡದ ವಾತಾವರಣದಲ್ಲಿ ಎಡೆಬಿಡದೆ ಸುರಿದಿದೆ.
ಬೆಳಗ್ಗೆ 8 ಗಂಟೆಯಿಂದ ಒಂದು ಗಂಟೆ ಕಾಲ ನಿರಂತರ ಬಂದ ಮಳೆಯಿಂದ ಹಳ್ಳಕೊಳ್ಳಗಳಲ್ಲಿ ನೀರು ಓತಪ್ರೋತವಾಗಿ ಹರಿಯಿತು. ಬೆಳಗ್ಗಿನ ಮಳೆಯ ಮುನ್ಸೂಚನೆ ಇದ್ದರೂ ಛತ್ರಿ ಇಲ್ಲದ ಮಂದಿ ವರ್ಷಧಾರೆಯಿಂದ ಪರದಾಡಬೇಕಾಯಿತು. ನಂತರ ಕೆಲ ಹೊತ್ತು ಮಳೆ ಜಿನುಗುತ್ತಲೇ ಇತ್ತು.
ಧಾರಾಕಾರ ಮಳೆಯಿಂದ ನಗರದ ಮೊಗವೀರಪಟ್ಣ, ಕೊಡಿಯಾಲಬೈಲ್ಗಳಲ್ಲಿ ಚರಂಡಿ ಭರ್ತಿಯಾಗಿ ಮಳೆನೀರು ರಸ್ತೆಯಲ್ಲೇ ಹರಿದಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಇದೇ ರೀತಿ ದೇರೆಬೈಲ್, ಜೆಪ್ಪಿನಮೊಗರು ಪ್ರದೇಶಗಳಲ್ಲಿ ಕೊಳಚೆ ನೀರು ರಸ್ತೆಗೆ ಬಂದು ಕೃತಕ ನೆರೆ ಸೃಷ್ಟಿಯಾಯಿತು.
ಭಾನುವಾರ ಮಧ್ಯಾಹ್ನ ವೇಳೆಗೆ ಪ್ರಖರ ಬಿಸಿಲನ ವಾತಾವರಣ ಹಾಗೂ ತುಸು ಸೆಕೆ ಕಂಡುಬಂದರೂ ಸಂಜೆ ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆ ಸುರಿದಿದೆ.
ಪುತ್ತೂರು ವರದಿ: ಪುತ್ತೂರು ತಾಲೂಕಿನಾದ್ಯಂತ ಶನಿವಾರ ರಾತ್ರಿ ಮಳೆಯಾಗಿದ್ದು, ಭಾನುವಾರ ಬೆಳಗ್ಗಿನ ವೇಳೆಯೂ ಮಳೆ ಸುರಿದಿದೆ. ಸಂಜೆತನಕ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಪುತ್ತೂರು ಪೇಟೆ ಸೇರಿದಂತೆ ವಿವಿಧೆಡೆ ಮಳೆ ಸುರಿದಿದೆ. ಈಶ್ವರಮಂಗಲ, ಸುಳ್ಯಪದವು, ಕಾವು, ಕೌಡಿಚ್ಚಾರು, ಕೊಳ್ತಿಗೆ, ಮಾಡಾವು ಕಡೆಗಳಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು, ಭಾನುವಾರ ಬೆಳಗ್ಗೆಯೂ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿಯೂ ಭಾನುವಾರ ಹಗಲು ಕೆಲವೆಡೆ ಸಾಧಾರಣ ಮಳೆಯಾಗಿದೆ.
ಬಂಟ್ವಾಳ: ತುಂತುರು ಮಳೆ: ಬಂಟ್ವಾಳ ತಾಲೂಕಿನಾದ್ಯಂತ ಶನಿವಾರ ರಾತ್ರಿಯಿಂದ ತುಂತುರು ಮಳೆ ಬಿದ್ದಿದೆ. ವಿಟ್ಲ, ಕನ್ಯಾನ, ಬಿ.ಸಿ. ರೋಡು, ಅನಚಿತಾಡಿ, ಮಾಣಿ, ಕಲ್ಲಡ್ಕ, ಸಂಗಬೆಟ್ಟು ಪ್ರದೇಶ ಸೇರಿದಂತೆ ವಿವಿಧೆಡೆ ಸುರಿದ ಅಕಾಲಿಕ ಮಳೆ ಕೃಷಿಕರ ಆತಂಕಕ್ಕೆ ಕಾರಣವಾಯಿತು. ಕೆಲವೆಡೆ ಅಂಗಳದಲ್ಲಿ ಹರಡಿದ್ದ ಅಡಕೆ, ಬತ್ತದ ರಾಶಿ ಮಳೆಯಿಂದ ಹಾನಿಗೊಳಗಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

