ಬ್ರಾಹ್ಮಣ ಕುವರನಿಗೆ ಕಾಶಿ ವಧು!
ಮಂಗಳೂರು: ಬ್ರಾಹ್ಮಣ ಸಮುದಾಯದಲ್ಲಿ ಕನ್ಯಾಮಣಿಗಳ ಕೊರತೆ ನೀಗುವ ಸಂಘಟಿತ ಯತ್ನ ಯಶಸ್ಸು ದೊರಕುವ ಹಂತ ತಲುಪಿದೆ.
ಉತ್ತರ ಪ್ರದೇಶದ ಪವಿತ್ರ ಕ್ಷೇತ್ರ ಕಾಶಿ ವಧು-ಕರಾವಳಿಯ ವರರ ಸಮ್ಮಿಲನಕ್ಕೆ ವೇದಿಕೆ ಸಜ್ಜಾಗಿದೆ. ನಿರೀಕ್ಷೆಯಂತೆ ನಡೆದರೆ ಮಾರ್ಚ್ ಪ್ರಥಮ ವಾರದಲ್ಲಿ ಕಾಸರಗೋಡಿನ (ಕೇರಳ) ಪೆರಡಾಲದಲ್ಲಿ ಮೂವರು ಬ್ರಾಹ್ಮಣ ಯುವಕರಿಗೆ ಸಾಮೂಹಿಕ ವಿವಾಹ ನೆರವೇರಲಿದ್ದು, ಕರಾವಳಿಯ ಈ ಹೊಸ ಪ್ರಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಂತಾಗುತ್ತದೆ.
ಸುಳ್ಯದ ಕಶ್ಯಪ ವಿವಾಹ ವೇದಿಕೆ ಈ ವಿವಾಹದ ನೇತೃತ್ವ ವಹಿಸಿಕೊಂಡಿದೆ. ಹವ್ಯಕ, ಕರ್ಹಾಡ, ಶಿವಳ್ಳಿ, ಸ್ಥಾನಿಕ, ಕೋಟ ಹೀಗೆ ವಿವಿಧ ಬ್ರಾಹ್ಮಣ ಸಮಾಜದ ಯುವಕರಿಗೆ ಉತ್ತರ ಭಾರತದಲ್ಲಿರುವ ಬ್ರಾಹ್ಮಣ ಯುವತಿಯರನ್ನು ಹುಡುಕಿ ಮಾಂಗಲ್ಯ ಧಾರಣೆ ಮಾಡಿಸುವುದು ವೇದಿಕೆಯ ಹೊಸ ಪ್ರಯತ್ನ. ಈ ಪ್ರಯತ್ನ ಕಳೆದ ಆಗಸ್ಟ್ನಲ್ಲಿ ಆರಂಭಗೊಂಡಿದ್ದು, ಈಗ ಅಂತಿಮಘಟ್ಟ ತಲಪುತ್ತಿದೆ.
ಯುವಕರೇ ಖರ್ಚು ಭರಿಸ್ತಾರೆ: ಕಾಶಿ ವಧುವಿನ ಲಗ್ನದ ಎಲ್ಲ ಖರ್ಚು ಭರಿಸುವುದು ಇಲ್ಲಿನ ವರರು. ಈಗಾಗಲೇ ಕಾಶಿಗೆ ಹೋಗಿ ಬಂದಿದ್ದು, ವಧುವನ್ನು ಆಯ್ಕೆ ಮಾಡಿದ್ದಾರೆ. ವಧುವಿನ ತಂದೆ, ತಾಯಿ, ಕುಟುಂಬದ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲಿನವರೂ ಬಂದು ಹೋಗಿದ್ದಾರೆ. ತಮ್ಮ ಊರಿನ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಆಗಿದೆ. ಹಾಗಾಗಿ ಉಭಯ ಕಡೆ ಪರಸ್ಪರ ಮದುವೆಯ ಪ್ರಸ್ತಾಪ ಮುಗಿದಿದೆ. ಇನ್ನೇನಿದ್ದರೂ ಗಟ್ಟಿಮೇಳ ಮಾತ್ರ ಬಾಕಿ.
ಅಲ್ಲಿ ವರದಕ್ಷಿಣೆ ಜಾಸ್ತಿ: ಕಾಶಿಯಲ್ಲಿರುವುದು ಬಡ ಬ್ರಾಹ್ಮಣ ಕುಟುಂಬಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟು ಜೀವನ ಸಾಗಿಸುತ್ತಿವೆ. ಬ್ರಾಹ್ಮಣ ಮಹಿಳೆಯರದ್ದೂ ಸಾಂಪ್ರದಾಯಿಕ ಬದುಕು. ಹೊರಪ್ರಪಂಚದ ಅರಿವು ಕಮ್ಮಿ. ಕಾಶಿ ಸುತ್ತಮುತ್ತ ಭಾರಿ ವರದಕ್ಷಿಣೆ. ಹಾಗಾಗಿ ಕನ್ಯಾದಾನ ಮಾಡುವುದು ಹೆತ್ತವರಿಗೆ ಸುಲಭವಲ್ಲ. ಈ ವಿಚಾರ ತಿಳಿದ ಕಶ್ಯಪ ವಿವಾಹ ವೇದಿಕೆ ಅಲ್ಲಿನ ಕುಟುಂಬಗಳನ್ನು ಸಂಪರ್ಕಿಸಿ ದಕ್ಷಿಣೋತ್ತರ ಸಂಪರ್ಕ ಸೇತುಬಂಧಕ್ಕೆ ಮುಂದಾಗಿದೆ.
ಇವರು ಕಾಲೇಜು ಕನ್ಯೆಯರು: ಮಾರ್ಚ್ನಲ್ಲಿ ಹಳ್ಳಿ ಕೃಷಿಕರ ಕೈಹಿಡಿಯಲು ಮುಂದೆ ಬಂದವರು ಮೂವರು ಕಾಲೇಜು ಕನ್ಯೆಯರು. ಕಾಶಿಯಿಂದ 22 ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮೂವರ ಮನೆಗಳೂ ಹತ್ತಿರ ಹತ್ತಿರವೇ ಇರುವ ಕಾರಣ ಒಟ್ಟಿಗೆ ಮದುವೆಯಾಗಲು ನಿರ್ಧರಿಸಿದ್ದಾರೆ. ಇವರನ್ನು ವರಿಸುವವರಲ್ಲಿ ಒಬ್ಬ ಬದಿಯಡ್ಕದ ಕೃಷಿಕ, ಇನ್ನೊಬ್ಬ ಕೃಷಿ ಸಂಶೋಧಕ, ವಾಣಿನಗರ (ಇಬ್ಬರೂ ಕಾಸರಗೋಡು ಜಿಲ್ಲೆ) ನಿವಾಸಿ, ಮತ್ತೊಬ್ಬರು ಅಡ್ಯನಡ್ಕ (ದ.ಕ.ಜಿಲ್ಲೆ)ದ ಕೃಷಿಕ ಹಾಗೂ ಪುರೋಹಿತ. ಇವರೇ ಸ್ವತಃ ಖರ್ಚು ಭರಿಸಿ ಕಾಶಿ ವಧುಗಳನ್ನು ವಿವಾಹವಾಗುತ್ತಿದ್ದಾರೆ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

