ಮಾದಕ ವ್ಯಸನ ಜಾಗೃತಿ ಆಂದೋಲನ
ಬಂಟ್ವಾಳ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿ ಸಮೂಹವನ್ನು ಜಾಗೃತಗೊಳಿಸುವ ಪ್ರಹರಿ-2013 ಎನ್ನುವ ವಿನೂತನ ಆಂದೋಲನಕ್ಕೆ ಮುನ್ನುಡಿ ಬರೆದಿದೆ.
ಕಳೆದ ಕೆಲದಿನಗಳ ಹಿಂದೆ ಮಂಗಳೂರಿನಲ್ಲಿ ವಿದ್ಯಾರ್ಥಿನಿಯೋರ್ವಳು ಮಾದಕ ವಸ್ತುಗಳ ಸೇವನೆಗೆ ಬಲಿಯಾದ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಇಲ್ಲಿನ ವಿದ್ಯಾರ್ಥಿ ಸಮೂಹವನ್ನು ಈ ಮಾದಕ ವಿಷವರ್ತುಲದಿಂದ ರಕ್ಷಿಸುವ ಹಾಗೂ ಅದರ ಬಗ್ಗೆ ಜಾಗೃತಗೊಳಿಸುವ ಕಾರ್ಯಕ್ಕೆ ಪಣತೊಟ್ಟಿದೆ.
ಜೆಸಿಐ ಬಂಟ್ವಾಳ ಪ್ರಾಯೋಜಕತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಚೈತನ್ಯ ಫೌಂಡೇಶನ್ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
23ರವರೆಗೆ ವಿವಿಧ ಕಾರ್ಯಕ್ರಮ: ಸೋಮವಾರ ಅಧಿಕೃತವಾಗಿ ಚಾಲನೆಗೊಂಡ ಈ ಕಾರ್ಯಕ್ರಮ ಫೆ.23ರವರೆಗೆ ನಡೆಯಲಿದೆ. ವಾರದುದ್ದಕ್ಕೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮದ್ಯವ್ಯಸನ ಹಾಗೂ ಅದರಿಂದ ಸಂರಕ್ಷಣೆ, ಧೂಮಪಾನ ವ್ಯಸನ ಹಾಗೂ ಅದರಿಂದ ಸಂರಕ್ಷಣೆ, ಮಕ್ಕಳ ಸಾಗಾಟ ಹಾಗೂ ಅದರಿಂದ ಸಂರಕ್ಷಣೆ, ಬಾಲಾಪರಾಧ ಹಾಗೂ ಅದರಿಂದ ಸಂರಕ್ಷಣೆ ಮೊದಲಾದ ಮಾಹಿತಿ ಕಾರ್ಯಕ್ರಮಗಳು ವಿವಿಧ ಶಾಲೆಗಳಲ್ಲಿ ನಡೆಯಲಿವೆ.
ಫೆ.23ರಂದು ಸಮರೋಪ ಸಮಾರಂಭ ನಡೆಯಲಿದ್ದು, ಸುಮಾರು 1200ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು, ವಿವಿಧ ಇಲಾಖೆ ಮುಖ್ಯಸ್ಥರು, ಸ್ವಯಂ ಸೇವಾ ಸಂಸ್ಥೆಗಳು, ಸ್ವಸಹಾಯ ಗುಂಪಿನ ಸದಸ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಸಾಮೂಹಿಕ ಬದ್ಧತಾ ಪ್ರಮಾಣ ವಚನ ಸ್ವೀಕಾರವೂ ನಡೆಯಲಿದೆ.
ಉದ್ಘಾಟನೆ: ತುಂಬೆ ಬಿ.ಎ. ವಿದ್ಯಾಸಂಸ್ಥೆಯಲ್ಲಿ ಸೋಮವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಹಾರಿ-2013 ಎನ್ನುವ ಸಮಗ್ರ ಮಾಹಿತಿಯುಳ್ಳ ಬೃಹತ್ ಕರಪತ್ರವನ್ನು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ ಬಿಡುಗಡೆಗೊಳಿಸುವ ಮೂಲಕ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸುಧಾಕರ್, ಜೆಸಿಐ ಬಂಟ್ವಾಳದ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಮಾತನಾಡಿದರು. ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಮಾಣಿ ಗ್ರಾ.ಪಂ. ಅಧ್ಯಕ್ಷೆ ರಮಣಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಬಿ.ಎ. ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರರಾವ್ ನಿರೂಪಿಸಿದರು. ಜೆಸಿಐ ಬಂಟ್ವಾಳ ಪ್ರಾಯೋಜಕತ್ವದ ಮಾಹಿತಿ ಕರಪತ್ರವನ್ನು ತಾಲೂಕಿನ 381 ಶಾಲೆಗಳಿಗೆ ಈ ಸಂದರ್ಭ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

