ದಕ್ಷಿಣ ಕನ್ನಡ

ಕೊರಗರಿಗೆ ಐಟಿಡಿಪಿಯಿಂದ ಕಾರು, ಆಟೋ

Published On :

ಮಂಗಳೂರು: ಮೂಲನಿವಾಸಿ ಜನಾಂಗದವರ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಇದೇ ಮೊದಲ ಬಾರಿಗೆ ಕೊರಗರು ಮತ್ತು ಜೇನು ಕುರುಬರಿಗೆ ಟೂರಿಸ್ಟ್ ಕಾರು ಮತ್ತು ಆಟೋರಿಕ್ಷಾ ಖರೀದಿಸುವ ಅವಕಾಶ ಬಂದಿದೆ. ಈ ಮೂಲಕ ಇವರಿಗೆ ಸ್ವಂತವಾಗಿ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಲಿದೆ.
 ಕೇಂದ್ರ ಸರ್ಕಾರ 2010-11ನೇ ಸಾಲಿನಲ್ಲಿ ಈ ಯೋಜನೆಯನ್ನು ಘೋಷಿಸಿದ್ದು, ಈಗಷ್ಟೇ ಅನುಷ್ಟಾನಕ್ಕೆ ಬರುತ್ತಿದೆ. 2011-12ನೇ ಸಾಲಿನ ಯೋಜನೆ ಇನ್ನಷ್ಟೇ ಜಾರಿಗೆ ಬರಬೇಕು. ತೀರಾ ಹಿಂದುಳಿದ ಈ ಮಂದಿಗೆ ನಿಗದಿತ ಸಮಯದ ಬದಲು ವಿಳಂಬವಾಗಿ ಯೋಜನೆ ತಲುಪುತ್ತಿದೆ.
2012 ಫೆಬ್ರವರಿಯಲ್ಲಿ ಯೋಜನೆಯನ್ನು ಅನುಷ್ಟಾನಕ್ಕೆ ತರುವಂತೆ ಜಿಲ್ಲೆಗಳ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ(ಐಟಿಡಿಪಿ)ಇಲಾಖೆಗೆ ಸರ್ಕಾರ ಸುತ್ತೋಲೆ ಕಳುಹಿಸಿತ್ತು. ಈ ಯೋಜನೆಗೆ ಮಂಜೂರಾತಿ ನೀಡಿದ್ದು ಜುಲೈನಲ್ಲಿ. ನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಫಲಾನುಭವಿ ಆಯ್ಕೆ ಮಾಡುವಾಗ ಜನವರಿ ಪ್ರಥಮ ವಾರ ಮುಗಿದಿದೆ!
ಜಿಲ್ಲೆಯಲ್ಲಿ ಕೊರಗರಿಗೆ ಮಾತ್ರ: ದ.ಕ.ಜಿಲ್ಲೆಯಲ್ಲಿ ಕೊರಗರು ಮತ್ತು ಮಲೆಕುಡಿಯರು ಈ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಆದರೆ ಈ ಯೋಜನೆ ನಿಯಮ ಪ್ರಕಾರ ಕೊರಗರಿಗೆ ಮಾತ್ರ ಅವಕಾಶ. 1,206 ಕೊರಗ ಕುಟುಂಬ ಪೈಕಿ ಯೋಜನೆಯ ಫಲಾನುಭವಿಗಳು 22 ಮಂದಿ.
ಜಿಲ್ಲೆಯ ಐದು ತಾಲೂಕುಗಳಲ್ಲಿ ಫಲಾನುಭವಿಗಳು ಇದ್ದು, 9 ಮಂದಿಗೆ ಪ್ರವಾಸಿ ಕಾರು ಹಾಗೂ 13 ಮಂದಿ ಆಟೋರಿಕ್ಷಾ ಪಡೆಯಲಿದ್ದಾರೆ. ಶೇ.75 ಮೊತ್ತವನ್ನು ಇಲಾಖೆ ಹಾಗೂ ಶೇ.25 ಮೊತ್ತವನ್ನು ಫಲಾನುಭವಿ ಭರಿಸಬೇಕು.
 1999ರಿಂದ 2004ರ ವರೆಗೆ ಅಂಬೇಡ್ಕರ್ ನಿಗಮ, ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ವಾಹನ ಖರೀದಿಸಿದ ಕೊರಗರಿಗೆ ಅವಕಾಶವಿಲ್ಲ. ಆದರೆ ಅದಕ್ಕೂ ಮೊದಲು ವಾಹನ ಖರೀದಿಸಿ, ಈಗ ವಾಹನ ಶಿಥಿಲಗೊಂಡು, ಸಾಲ ಪೂರ್ತಿ ಮರುಪಾವತಿಸಿದ ಬಗ್ಗೆ ದೃಢಪತ್ರ ಸಲ್ಲಿಸಿದವರಿಗೆ ಮತ್ತೆ ವಾಹನ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಈಗಷ್ಟೇ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದರಿಂದ ಇನ್ನು ಅವರಿಗಿಷ್ಟವಾದ ಮಾರುತಿ, ಇಂಡಿಕಾ ಇತ್ಯಾದಿ ಯಾವುದೇ ಕಂಪನಿಗಳ ಕಾರು ಖರೀದಿಸಬಹುದು.
ಕೊಟೇಶನ್ ಸಿಕ್ಕಿದ ಮೇಲೆ ಸರ್ಕಾರಕ್ಕೆ ಕಳುಹಿಸಿ ಮಂಜೂರಾತಿ ಪಡೆಯಬೇಕು. ಬಳಿಕವೇ ವಾಹನ ಫಲಾನುಭವಿಗಳ ಕೈಸೇರಲಿದೆ. ಫಲಾನುಭವಿಗಳ ಚಾಲನಾ ಪರವಾನಗಿಯನ್ನು ಪರಿಶೀಲಿಸಿಯೇ ಆಯ್ಕೆ ಮಾಡಲಾಗಿದೆ. ಈ ಯೋಜನೆ ಸಿಗಬೇಕಾದರೆ ಪರವಾನಗಿ ಜತೆ ಬ್ರಾಡ್ಜ್ ನಂಬರು ಕೂಡ ಹೊಂದಿರಬೇಕು ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.