ದಕ್ಷಿಣ ಕನ್ನಡ

ಕಾಂಗ್ರೆಸ್‌ನ ಒಗ್ಗಟ್ಟೆಂಬ ಒಗಟು!

Published On :

ಮಂಗಳೂರು: ಚುನಾವಣೆಗೆ ನಾವೆಲ್ಲ ಒಗ್ಗಟ್ಟಾಗಿ, ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿಯೇ ವೇದಿಕೆಯಲ್ಲಿದ್ದ ಮಾಜಿ ಮೇಯರ್ ಕೂಗಾಡಿ ಭಿನ್ನಮತ ಪ್ರದರ್ಶಿಸಿ ಕಾಂಗ್ರೆಸ್ ಒಗ್ಗಟ್ಟಿನ ಒಗಟು ಬಿಡಿಸಿದರು!
 ಚುನಾವಣೆಗೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಬಗ್ಗೆ ಜನಾರ್ದನ ಪೂಜಾರಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಮಾಜಿ ಮೇಯರ್ ಅಶ್ರಫ್ ತೋಳೇರಿಸಿ ಕೂಗಾಡಿ ರಾದ್ಧಾಂತ ಸೃಷ್ಟಿಸಿದರು. ಆಕ್ರೋಶಿತ ಅಶ್ರಫ್ ಅವರನ್ನು ಶಾಸಕ ಯು.ಟಿ. ಖಾದರ್ ಹೊರಗೆ ಕರೆದೊಯ್ದರೂ ರಸ್ತೆಯಲ್ಲಿ ಅಶ್ರಫ್ ಮತ್ತು ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಮೊಯ್ದಿನ್ ಬಾವ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
 ನಿವೃತ್ತ ಅಧಿಕಾರಿ ಜೆ.ಆರ್. ಲೋಬೊ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿಯೂ ಕ್ಷುಲ್ಲಕ ಕಾರಣಕ್ಕೆ ಮಾಜಿ ಮೇಯರ್ ಆಶ್ರಫ್ ಎಐಸಿಸಿ ಸದಸ್ಯ ಪಿ.ವಿ. ಮೋಹನ್ ಮೇಲೆ ಕೈ ಮಾಡಿದ್ದರು. ಆಗ ಕಾಂಗ್ರೆಸ್ ಕಚೇರಿ ರಣಾಂಗಣವಾಗಿತ್ತು.
 ಈಗ ಅದೇ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಶ್ರಫ್ ಬುಧವಾರ ಮತ್ತೆ ಗಲಾಟೆ ಮಾಡಿ ಸ್ಥಳದಲ್ಲಿದ್ದ ಜನಾರ್ದನ ಪೂಜಾರಿ, ಅಲ್ಪಸಂಖ್ಯಾತ ಆಯೋಗ ಮಾಜಿ ಅಧ್ಯಕ್ಷ ಕೆ.ಎಂ.ಎಸ್. ಮಸೂದ್, ರಮಾನಾಥ ರೈ ಮತ್ತು ಕಾಂಗ್ರೆಸ್ ನಾಯಕರಿಗೆ ಮುಜುಗರ ತಂದರು.
ಆದದಿಷ್ಟು: ಜನಾರ್ದನ ಪೂಜಾರಿ ಅವರನ್ನು ಜಿಲ್ಲೆಗೆ ಉಸ್ತುವಾರಿಯಾಗಿ ಕಾಂಗ್ರೆಸ್ ಅಧ್ಯಕ್ಷರು ಘೋಷಿಸಿದ್ದ ಬಗ್ಗೆ ಆಶ್ರಫ್‌ಗೆ ಆಕ್ರೋಶ ಹೊಟ್ಟೆಯಲ್ಲಿತ್ತು. ಪೂಜಾರಿ ಸುದ್ದಿಗೋಷ್ಠಿಗೆ ಇತ್ತೀಚಿನ 2 ವರ್ಷಗಳಲ್ಲಿ ಆಗಮಿಸದ ಅಶ್ರಫ್ ಬುಧವಾರ ಮಾತ್ರ ಬೇಗನೆ ಬಂದು ಮುಖಂಡರ ಸಾಲಿನಲ್ಲಿ ಒಂದು ಸೀಟು ಕಾದಿರಿಸಿದ್ದರು.
 ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸ್ಪರ್ಧೆಗೆ ಟಿಕೆಟ್ ನೀಡುವ ಚುನಾವಣೆ ಸಮಿತಿ ವಿವರ ನೀಡುತ್ತಿದ್ದಂತೆ ತನ್ನ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿ ಎದ್ದು ನಿಂತು ಕೂಗಾಡತೊಡಗಿದರು.
'ನಾನು ಮುಸ್ಲಿಂ ಎಂಬ ಕಾರಣಕ್ಕೆ ನನ್ನನ್ನು ಕಡೆಗಣಿಸುತ್ತೀರಾ, ನಾನು ಮೇಯರ್ ಆಗಿ ಕೆಲಸ ಮಾಡಿ ತೋರಿಸಿದ್ದೇನೆ, ಸಮಿತಿಯಲ್ಲಿ ಪೂಜಾರಿ ಅವರು ತಮಗೆ ಬೇಕಾದ ಅನನುಭವಿಗಳನ್ನು ಸೇರಿಸಿದ್ದಾರೆ' ಎಂದು ಭುಸುಗುಡತೊಡಗಿದರು. ಈ ನಾಟಕೀಯ ಬೆಳವಣಿಗೆಯನ್ನು ನೋಡುತ್ತ ಅಶ್ರಫ್‌ರ ಒಡನಾಡಿ ಐವನ್ ಡಿಸೋಜ ಎದ್ದು ನಿಂತರೂ ತಡೆಯುವ ಗೋಜಿಗೆ ಹೋಗಿಲ್ಲ. ಶಾಸಕ ಯು.ಟಿ. ಖಾದರ್, ಅಶ್ರಫ್ ಬಳಿಗೆ ಹೋಗಿ ಸಮಾಧಾನಿಸುವ ಪ್ರಯತ್ನ ಮಾಡಿದರು.
 ಹೊರಗೆ ಹೋದರೂ ಅಶ್ರಫ್ ಸದ್ದು, ಸುದ್ದಿಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ಸ್ಪಷ್ಟವಾಗಿ ಕೇಳುತ್ತಿತ್ತು. ಕೊನಗೆ ಪೂಜಾರಿಯವರು ಬಾಗಿಲು ಹಾಕುವಂತೆ ಸೂಚಿಸಿದರು. ಆದರೆ ಕಾಂಗ್ರೆಸ್‌ನಲ್ಲಿ ತೆರೆದ ಭಿನ್ನಮತದ ಬಾಗಿಲು ಮುಚ್ಚಲು ಸಾಧ್ಯವಾಗಲಿಲ್ಲ.
ಕೈ ಕೈ ಮಿಲಾಯಿಸಿದರು: ಉತ್ತರ ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮತ್ತು ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಮೊಯ್ದಿನ್ ಬಾವ ಹೊರಗಡೆ ಬಂದು ಗಲಾಟೆ ಮಾಡುತ್ತಿದ್ದ ಆಶ್ರಫ್ ಮತ್ತು ಬೆಂಬಲಿಗರಿಗೆ ಕಿವಿಮಾತು ಹೇಳುವ ಪ್ರಯತ್ನ ಮಾಡಿದರು. 'ಹೆಚ್ಚು ಕಡಿಮೆ ಆಗಿರಬಹುದು, ಇದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ, ಮಾಧ್ಯಮ ಮುಂದೆ ಇದೆಲ್ಲ ಬೇಡಾ' ಎಂದು ಅಶ್ರಫ್ ಬಳಿ ಹೇಳುತ್ತಿದ್ದಂತೆಯೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅಶ್ರಫ್ ಬೆಂಬಲಿಗರು ಬಾವರಿಗೆ, 'ಪೂಜಾರಿ ಚೇಲಾ' ಇನ್ನಿತರ ಅವ್ಯಾಚ್ಯ ಪದಗಳಿಂದ ನಿಂದಿಸಿದರು. ಅಶ್ರಫ್ ಬಾವ ಬೆಂಬಲಿಗರ ಆಟೋಟೋಪ ಹೆಚ್ಚಾದ ಹಿನ್ನೆಲೆಯಲ್ಲಿ ಬಾವ ಕಾರನ್ನೇರಿ ಅಲ್ಲಿಂದದ ಜಾಗ ಖಾಲಿ ಮಾಡಬೇಕಾಯಿತು.  
ಸಂಜೆ ಶಮನ: ಸಂಜೆ ವೇಳೆಗೆ ಕಾಂಗ್ರೆಸ್ ಕಚೇರಿಯಲ್ಲಿ ಆಶ್ರಫ್‌ನನ್ನು ಕುಳ್ಳಿರಿಸಿಕೊಂಡು ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೆ.ಎಂ.ಎಸ್.ಮಸೂದ್, ಐವನ್ ಡಿಸೋಜ, ಯು.ಟಿ. ಖಾದರ್, ಮೊಯ್ದಿನ್ ಬಾವ ಸುದ್ದಿಗೋಷ್ಠಿ ನಡೆಸಿ, 'ನಾವೆಲ್ಲ ಒಗ್ಗಟ್ಟಾಗಿದ್ದೇವೆ' ಎಂದು ಪ್ರದರ್ಶನ ನಡೆಸಿದರು. ಚುನಾವಣೆ ಸಮಿತಿಯಲ್ಲಿ 29 ಮಂದಿಯಲ್ಲಿ 8 ಮಂದಿ ಮುಸ್ಲಿಂ, 5 ಮಂದಿ ಕ್ರೈಸ್ತ, 2 ಮಂದಿ ಜೈನ ಸಮುದಾಯದವರಿಗೆ ನೀಡಿದ್ದು ಅರ್ಧಕ್ಕಿಂತಲೂ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ ಎಂದು ಸ್ಪಷ್ಟ ಪಡಿಸಿದರು. ಎಲ್ಲಿಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಜಿಲ್ಲಾ ಚುನಾವಣೆ ಸಮಿತಿಯಲ್ಲಿ ಸೇರ್ಪಡೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ತಪ್ಪು ಅಭಿಪ್ರಾಯ: ಪೂಜಾರಿ: ಬ್ಲಾಕ್ ಮಟ್ಟದಲ್ಲಿ ಅಲ್ಲಿನ ಅಧ್ಯಕ್ಷರೇ ಚುನಾವಣೆ ಹೆಸರು ಆಯ್ಕೆ ಮಾಡುವುದರಿಂದ ಜಿಲ್ಲಾ ಸಮಿತಿಯಲ್ಲಿ ಮತ್ತೆ ಹೆಸರು ಹಾಕುವ ಅಗತ್ಯ ಇಲ್ಲ. ಹೀಗಾಗಿ ಯಾವುದೇ ಬ್ಲಾಕ್ ಅಧ್ಯಕ್ಷರ ಹೆಸರು ಹಾಕಿಲ್ಲ, ವಿಜಯಕುಮಾರ್ ಶೆಟ್ಟಿ ಬ್ಲಾಕ್ ಅಧ್ಯಕ್ಷರಾಗಿದ್ದರೂ ಕೂಡಾ ಮಾಜಿ ಶಾಸಕರ ನೆಲೆಯಲ್ಲಿ ಹಾಕಲಾಗಿದೆ ಎಂದು ಜನಾರ್ದನ ಪೂಜಾರಿ ಸ್ಪಷ್ಟನೆ ನೀಡಿದರು. ಬಹಿರಂಗವಾಗಿ ಕೂಗಾಡಿದ ಪ್ರಕರಣವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೂಜಾರಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.