ನೀತಿ ಸಂಹಿತೆ ಹೊಣೆ ಸೆಕ್ಟರ್ ಅಧಿಕಾರಿಗಳಿಗೆ: ಅಕ್ರಮ ತಡೆಗೆ ತಂಡ ರಚನೆ
ಮಂಗಳೂರು: ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸದಾಚಾರ ಸಂಹಿತೆ ನಿರ್ವಹಣೆ ಹೊಣೆಯನ್ನು ಸೆಕ್ಟರ್ ಅಧಿಕಾರಿಗಳಿಗೆ ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಎನ್. ಪ್ರಕಾಶ್ ನೇತೃತ್ವದಲ್ಲಿ ಬುಧವಾರ ಪೊಲೀಸ್, ಅಬಕಾರಿ ಮತ್ತು ಸೆಕ್ಟರ್ ಅಧಿಕಾರಿಗಳ ಸಭೆ ನಡೆಯಿತು. ಮಾ.7ರಂದು ನಡೆಯಲಿರುವ ಚುನಾವಣೆ ಪ್ರಕ್ರಿಯೆ ನಿರ್ವಹಣೆ ಮತ್ತು ನೀತಿ ಸಂಹಿತೆ ಪಾಲಿಸಲು ಸೆಕ್ಟರ್ ಅಧಿಕಾರಿಗಳುನ್ನು ನೇಮಿಸಿ ಅವರಿಗೆ ವಲಯ ದಂಡಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಅಧಿಕಾರ ವನ್ನು ಜಿಲ್ಲಾಧಿಕಾರಿಗಳು ನೀಡಿದರು.
ಸೆಕ್ಟರ್ ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಚುನಾವಣೆ ಅಕ್ರಮಗಳ ದೂರು ಪರಿಶೀಲಿಸಲು ಹಾಗೂ ಅಕ್ರಮ ತಡೆಯಲು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಡೀಸಿ ಸೂಚಿಸಿದರು.
ಫೆ.15ರಿಂದ ಮಾ.11ರವರೆಗೆ ಚುನಾವಣೆ ಆಯೋಗ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸದಾಚಾರ ಸಂಹಿತೆ ಜಾರಿಯಲ್ಲಿರಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 32 ಸೆಕ್ಟರ್ ಅಧಿಕಾರಿಗಳು, ಮೂಡುಬಿದರೆಯಲ್ಲಿ ಇಬ್ಬರು, ಉಳ್ಳಾಲದಲ್ಲಿ ಮೂವರು, ಬಂಟ್ವಾಳದಲ್ಲಿ ಮೂವರು, ಪುತ್ತೂರಿಗೆ ನಾಲ್ವರು, ಬೆಳ್ತಂಗಡಿಗೆ ಒಬ್ಬರು, ಸುಳ್ಯಕ್ಕೆ ಇಬ್ಬರು ಸೇರಿದಂತೆ 47 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಚುನಾವಣೆ ಪ್ರಚಾರದ ವೆಚ್ಚ ನಿಗಾ ವಹಿಸಬೇಕು. ಚುನಾವಣೆ ಪೂರ್ವ ಜವಾಬ್ದಾರಿ, ಚುನಾವಣೆ ದಿನಾಂಕ ಕರ್ತವ್ಯ, ಚುನಾವಣೆ ಬಳಿಕದ ಜವಾಬ್ದಾರಿ ವಿಂಗಡಿಸಿ, ಹೆಚ್ಚಿನ ಹೊಣೆ ವಹಿಸಲಾಗಿದೆ. ಸಮಸ್ಯೆಗಳಿದ್ದರೆ ಆರ್ಒ ಗಮನಕ್ಕೆ ತರಬೇಕು. ದೂರುಗಳು ನೇರವಾಗಿ ನನ್ನ ಬಳಿ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಒಳಗೊಂಡಂತೆ ಒಟ್ಟು 5 ಮಂದಿ ಜತೆಗಿರಲು ಅವಕಾಶ. ನಾಮಪತ್ರ ಸಲ್ಲಿಸುವ ಸ್ಥಳದಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ವಾರ್ಡ್, ಮತಗಟ್ಟೆ ವಿವರ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ 60 ವಾರ್ಡ್ಗಳಿದ್ದು 379 ಮತಗಟ್ಟೆ ನಿಗದಿ ಪಡಿಸಲಾಗಿದೆ. ಒಟ್ಟು 31,2579 ಮತದಾರರಿದ್ದು, 153226 ಪುರುಷರು, 159353 ಮಹಿಳೆಯರು. ಮೂಡುಬಿದರೆಯಲ್ಲಿ 23 ವಾರ್ಡ್ಗಳಿದ್ದು, 23 ಮತಗಟ್ಟೆಗಳಿವೆ. ಒಟ್ಟು 19458 ಮತದಾರರಿದ್ದು, 9624 ಪುರುಷರು ಮತ್ತು 9834 ಮಹಿಳೆಯರು. ಉಳ್ಳಾಲ ಪುರಸಭೆಯಲ್ಲಿ 27 ವಾರ್ಡ್ಗಳಿದ್ದು, 35 ಮತಗಟ್ಟೆಗಳಿವೆ. 34513 ಮತದಾರರಿದ್ದು, 16820 ಪುರುಷರು. 17693 ಮಹಿಳಾ ಮತದಾರರು. ಬಂಟ್ವಾಳ ಪುರಸಭೆಯಲ್ಲಿ 23 ವಾರ್ಡ್ಗಳಿದ್ದು 31 ಮತಗಟ್ಟೆಗಳಿವೆ. 18282 ಪುರುಷರು, 18584 ಮಹಿಳೆಯರು.
ಪುತ್ತೂರು ಪುರಸಭೆಯಲ್ಲಿ 27 ವಾರ್ಡ್ಗಳು, 42 ಮತಗಟ್ಟೆಗಳು. 16,437 ಪುರುಷರು, 16290 ಮಹಿಳೆಯರು. ಬೆಳ್ತಂಗಡಿಯಲ್ಲಿ 11 ವಾರ್ಡಗಳು, 11 ಮತಗಟ್ಟೆಗಳು 2522 ಪುರುಷರು, 2618 ಮಹಿಳೆಯರು. ಸುಳ್ಯದಲ್ಲಿ 18 ವಾರ್ಡ್ಗಳು, 18 ಮತಗಟ್ಟೆಗಳು, 5699 ಪುರುಷರು, 5570 ಮಹಿಳೆಯರು.
ಶೇ.20 ಮಾರಾಟ ಹೆಚ್ಚಳವಾದರೆ ತನಿಖೆ
ಅಬಕಾರಿ ಇಲಾಖೆ ಹೊಣೆ ಗುರುತರವಾಗಿದ್ದು, ಚುನಾವಣೆ ಸಮಯದಲ್ಲಿ ಇಲಾಖೆ ಲೈಸೆನ್ಸ್ ಪಡೆಯದೆ ಕಾರ್ಯಾಚರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮಾರಾಟದಲ್ಲಿ ಶೇ.20 ಹೆಚ್ಚಳ ಕಂಡು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ, ಮಾರಾಟ ಅವಧಿ ವಿಸ್ತರಣೆಯಾದರೆ ಅಬಕಾರಿ ಅಧಿಕಾರಿಗಳು ಉತ್ತರಿಸಬೇಕಿದೆ. ಹೀಗಾಗಿ ಅಬಕಾರಿ ಇಲಾಖೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಚೆಕ್ ಪೋಸ್ಟ್ ಬಲಪಡಿಸಿ, ಅಕ್ರಮ ಮದ್ಯ ಮಾರಾಟಕ್ಕೆಅವಕಾಶ ನೀಡಬೇಡಿ ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಸಭೆಯಲ್ಲಿ ಎಸ್ಪಿ ಅಭಿಷೇಕ್ ಗೋಯಲ್, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಕೆ.ಎ. ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಡಿಸಿಪಿ ಮುತ್ತುರಾಯ, ಪುತ್ತೂರು ಎಸಿ ಪ್ರಸನ್ನ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

