ಹರಿಹರ ಪಲ್ಲತ್ತಡ್ಕ: ಕಾಡಾನೆ ದಾಳಿಗೆ ಕೃಷಿಕ ಬಲಿ
ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕ ಸಮೀಪದ ದೇವಚಳ್ಳ ಗ್ರಾಮದ ಹೊಸೋಳಿ ಎಂಬಲ್ಲಿ ಅಡಕೆ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗೆ ಕೃಷಿಕ ರಾಮಭಟ್ (49) ಬುಧವಾರ ಬಲಿಯಾಗಿದ್ದಾರೆ.
ಕಟ್ಟ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಮಧ್ಯಾಹ್ನ ಪೂಜೆ ಮುಗಿಸಿ ಬಂದ ರಾಮ ಭಟ್ ರಾತ್ರಿ 7.15ಕ್ಕೆ ತೋಟದಲ್ಲಿ ಸ್ಲಿಂಕ್ಲರ್ನಿಂದ ನೀರು ಬಿಡಲು ಹೋದಾಗ ಕಾಡಾನೆಯೊಂದು ಅವರ ಹೊಟ್ಟೆಗೆ ಕಾಲಿನಿಂದ ತುಳಿದಿದ್ದು, ದೂರದವರೆಗೆ ಹೊರಳಾಡಿಸಿಕೊಂಡು ಹೋಗಿದೆ.
ತೋಟಕ್ಕೆ ಹೋದ ರಾಮ ಭಟ್ 9 ಗಂಟೆಯಾದ್ರು ಬರಲಿಲ್ಲವೆಂದು ಪತ್ನಿ ವಾಣಿಶ್ರೀ ತೋಟದಲ್ಲಿ ಹುಡುಕಾಟ ನಡೆಸಿದಾಗ ಮನೆಯಿಂದ 100 ಮೀ. ದೂರದಲ್ಲಿ ಬಿದ್ದಿದ್ದರು. ಪಕ್ಕದ ಮನೆಯವರೊಂದಿಗೆ ಸೇರಿ ಭಟ್ಟರನ್ನು ಮನೆಗೆ ಹೊತ್ತು ತರಲಾಯಿತು. ಆದರೆ, ಅದಾಗಲೇ ಅವರು ಮೃತಪಟ್ಟಿದ್ದರು. ನಡುಗಲ್ಲು- ಹರಿಹರಪಲ್ಲತ್ತಡ್ಕ ಮುಖ್ಯ ರಸ್ತೆಯಿಂದ ಎರ್ದಡ್ಕ ಮಣ್ಣಿನ ರಸ್ತೆಯಲ್ಲಿ ಸುಮಾರು 3 ಕಿ.ಮೀ. ದೂರ ದಟ್ಟವಾದ ಕಾಡಿನ ಮಧ್ಯೆ ಇವರ ಮನೆಯಿದೆ. ಇವರು ಸುಮಾರು 20 ವರ್ಷಗಳಿಂದ ಇಲ್ಲಿ ಕೃಷಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಇವರ ಮನೆಯಲ್ಲಿ 75 ವರ್ಷದ ತಾಯಿ ಸರಸ್ವತಿಯಮ್ಮ ಹಾಗೂ ಪತ್ನಿ ವಾಣಿಶ್ರೀ ಹಾಗೂ ಮಗಳು ಚೈತ್ರಾ (7ನೇ ತರಗತಿ), ಮಗ ದೇವಿಪ್ರಸಾದ್ (6ನೇ ತರಗತಿ) ಮಾತ್ರ ಇರುವುದು.
ಕಾಡಾನೆ ಆಗಾಗ ಈ ಪರಿಸರದಲ್ಲಿ ತೋಟಕ್ಕೆ ನುಗ್ಗಿ ಕೃಷಿ ಹಾಳು ಮಾಡುತ್ತಿತ್ತು. ಆದರೆ, ಯಾರಿಗೂ ತೊಂದರೆ ಮಾಡುತ್ತಿರಲಿಲ್ಲ. ಬುಧವಾರ ಸಂಜೆ 6.45ಕ್ಕೆ ಪಕ್ಕದ ಕುಂಟಿಕಾನ ಜನಾರ್ದನ ಗೌಡ ಎಂಬವರ ಕೃಷಿ ತೋಟಕ್ಕೆ ಬಂದಿತ್ತು. ಸುಮಾರು 15 ಫೀಟು ದೂರದಲ್ಲಿದ್ದ ಅವರು ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಬಳಿಕ ಆನೆ ಓಡಿಸಲು ಸುಡುಮದ್ದು ಸಿಡಿಸಿದಾಗ ಆನೆ ಹೆದರಿ ಚಂದ್ರಶೇಖರ ಎಂಬವರ ತೋಟಕ್ಕೆ ಓಡಿಹೋಗಿದೆ. ಅಲ್ಲಿಯೂ ಸುಡುಮದ್ದು ಸಿಡಿಸಿದಾಗ ಅಲ್ಲಿಂದ ಕಾಲ್ಕಿತ್ತ ಆನೆ ರಾಮಭಟ್ಟರ ತೋಟಕ್ಕೆ ಬಂದಿತ್ತು. ಆದರೆ, ಆನೆ ತೋಟಕ್ಕೆ ಬಂದ ವಿಷಯ ತಿಳಿಯದ ಭಟ್ಟರು ಕಾಡಾನೆಗೆ ಬಲಿಯಾಗಿದ್ದಾರೆ.
ಸಂಕಷ್ಟದಲ್ಲಿ ಕುಟುಂಬ: ಕೃಷಿಕ ರಾಮಭಟ್ಟರು ಶ್ರಮ ಜೀವಿಯಾಗಿದ್ದು, ಬಡ ಕೃಷಿಕರಾದ ಇವರು ಮನೆಯ ಆಧಾರ ಸ್ತಂಭ. ಇವರ ಸಾವಿನಿಂದ ಕುಟುಂಬ ಸಂಕಷ್ಟಕ್ಕೊಳಗಾಗಿದೆ. ಸುಳ್ಯ ಸಹಾಯಕ ಸಂರಕ್ಷಣಾಧಿಕಾರಿ ಡಾ. ದಿನೇಶ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಆನೆ ದಾಳಿಯಿಂದ ಅಡಕೆ ಹಾಗೂ ಬಾಳೆ ನಾಶವಾಗಿದ್ದಲ್ಲದೆ ಪಕ್ಕದಲ್ಲೇ ಭಟ್ಟರ ಚಪ್ಪಲಿ ಕಂಡು ಬಂದಿದ್ದು, ಇಲಾಖೆಯಿಂದ ಮನೆಯವರಿಗೆ ರು. 5 ಲಕ್ಷ ನೀಡುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಠಾಣಾಧಿಕಾರಿ ವೆಂಕಟ್ರಮಣ ಗೌಡ ಕೇಸು ದಾಖಲಿಸಿದ್ದು, ವೈಧ್ಯಾಧಿಕಾರಿ ಡಾ. ಯದುರಾಜ್ ವೈದ್ಯಕೀಯ ತಪಾಸಣೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

