ದಕ್ಷಿಣ ಕನ್ನಡ

ರಕ್ಷಿತಾರಣ್ಯ ಅಂಚಿನ ಕುಟುಂಬಗಳಿಗಿಲ್ಲ ರಕ್ಷಣೆ!

Published On :

ಸುಬ್ರಹ್ಮಣ್ಯ: ರಕ್ಷಿತಾರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಬಡ ಕೃಷಿಕ ಕುಟುಂಬಗಳು ನಕ್ಸಲರ ಭಯದಲ್ಲಿ ದಿನ ಕಳೆಯುತ್ತಿದ್ದರೆ ಮತ್ತೊಂದೆಡೆ ಹಗಲು ರಾತ್ರಿ ಎನ್ನದೆ ಆನೆಗಳು ಕೃಷಿಕರು ಬೆಳೆದ ಕಂಗು ಬಾಳೆ ನಾಶ ಮಾಡುವುದರಿಂದ ಕಂಗಲಾಗಿದ್ದಾರೆ.
 ಪುಳಿಕುಕ್ಕು ಎಂಬಲ್ಲಿ ಕಾಡಾನೆಗೆ ಬಲಿಯಾದ ಘಟನೆ ಹಸಿಯಾಗಿರುವಾಗಲೆ ಹರಿಹರ ಸಮೀಪದ ಹೊಸೋಳಿ ಎಂಬಲ್ಲಿ ಮತ್ತೊಬ್ಬ ಕೃಷಿಕನನ್ನು ಆನೆ ಬಲಿತೆಗೆದುಕೊಂಡಿದೆ. ಇದೀಗ ಸುಬ್ರಹ್ಮಣ್ಯ- ಐನೆಕಿದು, ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮಿಗ್ರ, ಕಲ್ಮಕಾರು, ದೇವಚಳ್ಳ, ಕರಂಗಲ್ಲು ಮುಂತಾದ ಪ್ರದೇಶಗಳಲ್ಲಿನ ಜನ ಪ್ರಾಣ ಭೀತಿಯಿಂದ ಬದುಕು ಸಾಗಿಸಬೇಕಾಗಿದೆ.
 ಹಲವಾರು ವರುಷಗಳಿಂದ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದ ಈ ಪರಿಸರದ ಜನತೆ ಕಳೆದ ಕೆಲವು ಸಮಯಗಳಿಂದ ನಾನಾ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಸರ್ಕಾರದ ವಿವಿಧ ಅವೈಜ್ಞಾನಿಕ ಯೋಜನೆಗಳಾದ ಆನೆ ಕಾರಿಡಾರ್, ಪುಷ್ಪಗಿರಿ ವನ್ಯಧಾಮ, ಯುನೆಸ್ಕೋ, ವಿದ್ಯುತ್ ಘಟಕಗಳು ಇತ್ಯಾದಿ ಯೋಜನೆಗಳು ಜಾರಿಯಾದಲ್ಲಿ ಕೃಷಿ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಭೀತಿಗೆ ಜನತೆ ಒಳಗಾಗಿದ್ದಾರೆ.
 ಈ ನಡುವೆ ಇದೀಗ ಕಾಡಾನೆಗಳ ಹಾವಳಿಯಿಂದ ಕೃಷಿಕರು ಮತ್ತಷ್ಟು ಕಂಗೆಟ್ಟಿದ್ದಾರೆ. ಜನತೆ ಮನೆಯಿಂದ ಹೊರಗೆ ಬರಲು ಹೆದರುವಂತಾಗಿದೆ. ರಾತ್ರಿ ವೇಳೆ ಕೃಷಿ ಭೂಮಿ, ತೋಟಗಳಿಗೆ ನುಗ್ಗುವ ಕಾಡಾನೆ ಹಗಲು ಮನುಷ್ಯರಿಗೆ ಉಪಟಳ ನೀಡುತ್ತಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲು, ಜನರು ಆಚೀಚೆ ಹೋಗಲು ಭಯಪಡುವಂತಾಗಿದೆ.
 ಕೂಡಲೇ ಅರಣ್ಯ ಇಲಾಖೆ ಕಾಡಾನೆ ದಾಳಿಯ ಸಮಸ್ಯೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನಷ್ಟು ಬೆಳೆ, ತೋಟ ನಾಶವಾಗುವುದರೊಂದಿಗೆ ಜೀವಗಳೂ ಬಲಿಯಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.
ಒಂಟಿ ಸಲಗ ಮಾತ್ರವಲ್ಲದೆ ತುಂಬಾ ಆನೆಗಳಿವೆ. ಏಕೆಂದರೆ ಕಜ್ಜೋಡಿ ಹೊಸೋಳಿ, ಗುಂಡಿಹಿತ್ಲು, ಕಟ್ಟ, ಕೊಲ್ಲಮೊಗ್ರದ ಅಡ್ನೂರು ಮಜಲು ಹೀಗೆ ನಾಲ್ಕು ಕಡೆಗಳಲ್ಲಿ ಆನೆ ದಾಳಿ ಮಾಡಿದೆ ಎನ್ನುತ್ತಾರೆ ಪೂವಪ್ಪ ಎರ್ದಡ್ಕ, ವೆಂಕಪ್ಪ ಕಜ್ಜೋಡಿ, ಮೋಹನ್‌ದಾಸ್ ಮಲುಬಾಗಿಲು.
- ಬಾಲಕೃಷ್ಣ ಭೀಮಗುಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.