ದಕ್ಷಿಣ ಕನ್ನಡ

ಕೊಂಕಣಿ ಲಿಪಿ ವಿವಾದ ಬದಿಗಿಡಿ

Published On :

ಮಂಗಳೂರು: ಕೊಂಕಣಿಗೆ ದೇವನಾಗರಿ, ಕನ್ನಡ ಲಿಪಿ ಅಳವಡಿಸುವ ಬಗ್ಗೆ ಜಗಳ ಮಾಡಬೇಡಿ, ಲಿಪಿ ಇದ್ದರೆ ಮಾತ್ರ ಸಾಹಿತ್ಯ ಹುಟ್ಟುತ್ತದೆ ಎನ್ನುವುದು ಸುಳ್ಳು, ಇಂಗ್ಲಿಷ್‌ಗೆ ಲಿಪಿ ಇಲ್ಲ ಆದರೂ ಉನ್ನತ ಸಾಹಿತ್ಯ ಹೊರಬಂದಿದೆ ಎಂದು ಮಣಿಪಾಲ ವಿವಿ ವಿಶ್ರಾಂತ ಕುಲಪತಿ ಡಾ. ಬಿ.ಎಂ. ಹೆಗ್ಡೆ ಹೇಳಿದರು.
 ಮಹಾನಗರಪಾಲಿಕೆ ಕಟ್ಟಡದ ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ ಶುಕ್ರವಾರ 'ತುಳು ಭಾಷಿಗರ ಕೊಂಕಣಿ ಅಭಿಮಾನ್‌' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಗ್ಡೆ, ಭಾರತೀಯ ಭಾಷೆಗಳ ಲಕ್ಷಾಂತರ ಶಬ್ದಗಳು ಇಂಗ್ಲಿಷ್ ನಿಘಂಟು ಸೇರಿದೆ ಎಂದರು.
 ಪ್ರೀತಿ ವ್ಯಕ್ತಪಡಿಸಲು ಭಾಷೆ ಹುಟ್ಟಿದೆ, ಭಾಷೆ ಮಡಿವಂತಿಕೆ ಬಿಡಬೇಕು. ಮನುಷ್ಯರು ಪರಸ್ಪರ ಜಗಳ ಮಾಡುವುದು ಬಿಟ್ಟು ಎಲ್ಲ ಭಾಷೆ, ಧರ್ಮ, ವರ್ಗದವರು ಒಟ್ಟಾಗಿ ಬಾಳಬೇಕು. ಇಲ್ಲಿನ ಮಣ್ಣು, ಗಾಳಿ, ಉಷ್ಣತೆಯ ವಾತಾವರಣಕ್ಕೆ ಹೊಂದಿಕೊಂಡು ನಾವಿದ್ದೇವೆ. ವಿದೇಶದ ವ್ಯಾಯಾಮ, ಆಚಾರ, ವಿಚಾರ ಆಹಾರ ಪದ್ಧತಿಗಳು ನಮಗೆ ಹೊಂದಿಕೆಯಾಗುವುದಿಲ್ಲ ಎಂದರು.ಕೊಂಕಣಿ ಆಹಾರ ವೈವಿಧ್ಯ ಬಗ್ಗೆ ಸಂಶೋಧನೆ ಆಗಬೇಕು. ಈ ಬಗ್ಗೆ ಸಾಕ್ಷ್ಯಚಿತ್ರ ಮಾಡಿದರೆ ಅದರಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಸಂಶೋಧನೆ ನಡೆಸಿ ಪುಸ್ತಕ ಬರೆಯುತ್ತೇನೆ. ಆಹಾರ ಆರೋಗ್ಯ ಕುರಿತ ನಾನು ಇಂಗ್ಲಿಷ್‌ನಲ್ಲಿ ಬರೆದ ಕೃತಿಯನ್ನು ಭಾಷಾಂತರಿಸಿದರೆ ಉಚಿತವಾಗಿ ಹಂಚುತ್ತೇನೆ ಎಂದು ಭರವಸೆ ನೀಡಿದರು.
 ತುಳು ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ತುಳು ಭಾಷಿಗನಾದರೂ ಕೊಂಕಣಿಯಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದರು. ನಾನು ಕಲಿತ ಮೊದಲ ಶಾಲೆ, ಪಡೆದ ಮೊದಲ ಸಂಬಳ, ಮೊದಲ ಗುರು ಎಲ್ಲರೂ ಕೊಂಕಣಿಗರೇ, ಊರಲ್ಲಿ ಪರವೂರಲ್ಲಿ ತುಳು ಸಿನಿಮಾ ಪ್ರದರ್ಶನಕ್ಕೆ ಕೊಂಕಣಿರೇ ಮುಂದೆ ಬಂದು ಸಹಕಾರ ನೀಡಿದರು ಎಂದರು.
 ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನ ಮಾತನಾಡಿದರು. ಲತಿಕಾ ಶೆಣೈ ಪ್ರಾರ್ಥಿಸಿದರು. ರಾಯ್ ಕ್ಯಾಸ್ಟಲಿನೊ ಸ್ವಾಗತಿಸಿದರು. ರಿಜಿಸ್ಟ್ರಾರ್ ದೇವದಾಸ್ ಪೈ ಇದ್ದರು. ಅಕಾಡೆಮಿ ಸದಸ್ಯ ಓಂ ಗಣೇಶ್ ನಿರೂಪಿಸಿದರು. ಅಶೋಕ್ ಶೇಟ್ ವಂದಿಸಿದರು. ಎಡನೀರು ಮಠ ಶ್ರೀಕೇಶವಾನಂದ ಭಾರತಿ ಸ್ವಾಮೀಜಿ ಕೊಂಕಣಿ ಭಾವಗೀತೆ ಗಾಯನ ನಡೆಸಿದರು. ಡಾ.ಬಿ.ಎಂ. ಹೆಗ್ಡೆ, ವಿಜಯಕುಮಾರ್ ಕೊಡಿಯಾಲಬೈಲು ಮಾತೃಭಾಷೆ ತುಳು ಆಗಿದ್ದರೂ  ಕೊಂಕಣಿಯಲ್ಲಿಯೇ ನಿರರ್ಗಳವಾಗಿ ಮಾತನಾಡಿದ್ದು ವಿಶೇಷ. ಎಡನೀರು ಸ್ವಾಮೀಜಿಯವರೂ ಕೊಂಕಣಿ ಭಾವಗೀತೆ ಹಾಡುವ ಮೂಲಕ ಕೊಂಕಣೇತರರು ಕೊಂಕಣಿ ಭಾಷೆಯಲ್ಲಿ ಕಾರ್ಯಕ್ರಮ ನಡೆಸಿದ ವೈಶಿಷ್ಟ್ಯ ದಾಖಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.