ಕೊಳಚೆಯಲ್ಲಿ ಬದುಕುತ್ತಿದ್ದ ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆ
ಪುತ್ತೂರು: ಮೈಮೇಲೆ ಕೊಳೆ ಮೆತ್ತಿಕೊಂಡು ಕಸ ಮತ್ತು ಕೊಳಚೆ ತ್ಯಾಜ್ಯ ರಾಶಿ ನಡುವೆ ಕಳೆದ ಸುಮಾರು 2 ತಿಂಗಳಿನಿಂದ ಬದುಕುತ್ತಿದ್ದ ಮಧ್ಯಪ್ರದೇಶ ಮೂಲದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಪುತ್ತೂರಿನ ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ಮತ್ತಿತರರು ಸೋಮವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪುತ್ತೂರು ಪೇಟೆ ಹೊರ ವಲಯದ ಹಾರಾಡಿ ಬಳಿ ಕೊಳಚೆಯಲ್ಲಿ ಜೀವಿಸುತ್ತಿದ್ದ ಮಧ್ಯ ಪ್ರದೇಶದ ಪಾಟ್ನಾ ನಿವಾಸಿ ಎನ್ನಲಾದ ಲೀಲಾವತಿ ಎಂಬಾಕೆ ಕಳೆದ ಕೆಲ ಸಮಯಗಳಿಂದ ಪುತ್ತೂರಿನ ಹಾರಾಡಿ ಸೇತುವೆ ಬಳಿ ಮೋರಿ ತ್ಯಾಜ್ಯ ಎಸೆಯುತ್ತಿದ್ದ ಸ್ಥಳದಲ್ಲಿ ಕಾಲ ಕಳೆಯುತ್ತಿದ್ದಳು. ಈಕೆಯನ್ನು ಗಮನಿಸಿದ ಪುತ್ತೂರಿನ ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ, ಸಾಮಾಜಿಕ ಕಾರ್ಯಕರ್ತೆ ನಯನಾ ರೈ ಅವರು ಪುರಸಭಾ ಸಮುದಾಯ ವ್ಯವಹಾರ ಅಧಿಕಾರಿ ರೇಖಾ ಶೆಟ್ಟಿ ಮತ್ತು ಸಮರ್ಪಣ ಮಹಿಳಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಸಹಕಾರದೊಂದಿಗೆ ಸೋಮವಾರ ಹಾರಾಡಿಯ ತ್ಯಾಜ್ಯ ರಾಶಿಯಿಂದ ಕರೆತಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಯಲ್ಲಿ ಮಹಿಳೆಗೆ ಸ್ನಾನ ಮಾಡಿಸಿ ಶುಚಿಗೊಳಿಸಿ ಹೊಸ ಬಟ್ಟೆ ಧರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಿದ್ದರು. ಹಿಂದಿ ಭಾಷೆ ಮಾತ್ರ ಬಲ್ಲವಳಾಗಿದ್ದ ಆಕೆ ತನ್ನ ಹೆಸರನ್ನು ಲೀಲಾವತಿ ಎಂದು ತಿಳಿಸಿದ್ದು, ತಾನು ಪಾಟ್ನಾದವಳು ಎಂದು ಹೇಳಿಕೊಳ್ಳುತ್ತಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥೆಯಾಗಿರುವುದರಿಂದ ಹೆಚ್ಚಿನ ಮಾಹಿತಿ ತಿಳಿಯಲು ಸಾಧ್ಯವಾಗಿರಲಿಲ್ಲ. ಆಕೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಆಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಬಳಿಕ ಆಕೆಯನ್ನು ಹುಡುಕಿ ತಂದು ಮತ್ತೆ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರು.ಙ
ಆಕೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲದ ಕಾರಣ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಇದೀಗ 108 ರಕ್ಷಾ ಕವಚ ಆಂಬ್ಯುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

