ಸುಬ್ರಹ್ಮಣ್ಯ ಗ್ರಾಮ ಲೆಕ್ಕಿಗರ ಕಚೇರಿಗೆ ಕಾಯಕಲ್ಪ ಎಂದು?
ವಿಶೇಷ ವರದಿ
ಸುಬ್ರಹ್ಮಣ್ಯ: ಕಂದಾಯ ಇಲಾಖೆಯ ಗ್ರಾಮಕರಣಿಕರು ಕರ್ತವ್ಯ ನಿರ್ವಹಿಸುತ್ತಿರುವ ಸುಬ್ರಹ್ಮಣ್ಯದ ಕಾಶಿಕಟ್ಟೆಯಲ್ಲಿರುವ ಗ್ರಾಮ ಲೆಕ್ಕಿಗರ ಕಚೇರಿ ತೀರಾ ದುಸ್ಥಿತಿಯಲ್ಲಿದ್ದು ಕುಸಿಯಲು ಕ್ಷಣಗಣನೆ ಎಣಿಸುತ್ತಿದೆ. ಇದರಿಂದಾಗಿ ಸ್ಥಳೀಯ ಜನತೆ ಕಚೇರಿಯೊಳಗೆ ಹೋಗಲು ಹಾಗೂ ಇಲಾಖೆ ಸಿಬ್ಬಂದಿ ಅಲ್ಲಿ ಕಾರ್ಯನಿರ್ವಹಿಸಲು ಭಯಪಡುತ್ತಿದ್ದಾರೆ.
ಕಟ್ಟಟದ ಹೆಂಚು ಗಾಳಿಗೆ ಹಾರಿ ಹೋಗಿದ್ದು, ಮಳೆ ನೀರೆಲ್ಲಾ ಒಳಗೆ ಬೀಳುತ್ತಿದೆ. ಇದರಿಂದಾಗಿ ಗೋಡೆ ಶಿಥಿಲಗೊಂಡಿದ್ದು ಈಗಲೋ ಆಗಲೋ ಬೀಳವ ಸ್ಥಿತಿಯಲ್ಲಿದೆ. ಕಂದಾಯ ವಸೂಲಿ ಮಾಡಿ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಜನತೆಗೆ ಬಿಪಿಎಲ್, ಎಪಿಎಲ್ ಕಾರ್ಡ್ ತಯಾರಿಸುವ, ಆದಾಯ ಪ್ರಮಾಣಪತ್ರಕ್ಕೆ ಶಿಫಾರಸು ಮಾಡುವ ಪ್ರತಿಯೊಬ್ಬ ನಾಗರಿಕನೂ ಸಂಪರ್ಕಿಸಬೇಕಾ ಗ್ರಾಮ ಕರಣಿಕರ ಈ ಕಚೇರಿಗೆ ಕಾಯಕಲ್ಪ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ.
ಓಬಿರಾಯನ ಕಾಲದಲ್ಲಿ ರಚಿಸಿದ ಕೋಳಿ ಗೂಡಿನಂತಿರುವ ಈ ಕಟ್ಟಡದ ರೀಪು, ಪಕ್ಕಾಸು ತುಂಡಾಗಿದ್ದು, ಮಾಡು ಕುಸಿಯುವ ಹಂತದಲ್ಲಿದೆ. ಕಟ್ಟಡದ ದುರವಸ್ಥೆ ಬಗ್ಗೆ ಈ ಹಿಂದೆ ಎಚ್ಚರಿಸಿದ್ದರೂ ಪ್ರಯೋಜನ ಶೂನ್ಯ. ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು, ಪಡಿತರ ಚೀಟಿ, ಗುರುತಿನ ಚೀಟಿ, ಜಾತಿ, ಆದಾಯ ಪ್ರಮಾಣಪತ್ರ ಹೀಗೆ ಹತ್ತು ಹಲವು ಕಾರ್ಯಗಳಿಗೆ ದಿನನಿತ್ಯ ಸಂಪರ್ಕಿಸಲು ಬೇಕಾದ ಕೇಂದ್ರ ದುಸ್ಥಿತಿಯಲ್ಲಿದ್ದರೂ ದುರಸ್ತಿಗೊಳಿಸುವ ಕಾರ್ಯ ಮಾತ್ರ ನಡೆದಿಲ್ಲ.
ರಾಜ್ಯ ಹೆದ್ದಾರಿ ಸಮೀಪ ಏಳು ಸೆಂಟ್ಸ್ ಹಾಗೂ ನಕ್ಷತ್ರವನದ ಸಮೀಪ 30 ಸೆಂಟ್ಸ್ ಜಾಗವನ್ನು ಗ್ರಾಮ ಕರಣಿಕರ ಕಚೇರಿಗಾಗಿ ಕಾದಿರಿಸಲಾಗಿದೆ. ಆದರೆ ಹೊಸ ಕಟ್ಟಡ ನಿರ್ಮಿಸುವ ಜವಾಬ್ದಾರಿ ಇಲಾಖೆಯದ್ದೋ ಅಥವಾ ಗ್ರಾಮ, ತಾಲೂಕು ಅಥವಾ ಜಿಪಂನದ್ದೋ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಕಟ್ಟಡ ದುರಸ್ತಿ ಗೋಜಿಗೆ ಯಾರೂ ಮುಂದಾಗಿಲ್ಲ.
ಅನುದಾನದ ಕೊರತೆಯೋ, ಇಲಾಖಾಧಿಕಾರಿಗಳ ಗಮನಕ್ಕೆ ಬಾರದಿರುವುದೋ, ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನತೆಯ ಅಶೋತ್ತರಗಳನ್ನು ಈಡೇರಿಸುವ ಭೂಕಂದಾಯ ವಸೂಲಿ ಕೇಂದ್ರದ ಈ ದುಸ್ಥಿತಿಗೆ ಯಾರು ಹೊಣೆ ಎಂಬಂತಾಗಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸದ್ಯ ಇರುವ ಕಚೇರಿಯನ್ನು ದುರಸ್ತಿ ಪಡಿಸುವುದೋ ಅಥವಾ ಹೊಸ ಕಚೇರಿ ನಿರ್ಮಿಸುವ ಕೆಲಸವನ್ನು ಆದಷ್ಟು ಬೇಗ ಕೈಗೊಳ್ಳಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

