ದಕ್ಷಿಣ ಕನ್ನಡ

ಮಾರಿಯಮ್ಮಗೆ ಅಲಂಕಾರ ಪೂಜೆ ಇಲ್ಲ!

Published On :

ಮಂಗಳೂರು: ಭಕ್ತರ ಅಧಿಕಾರ ವಿವಾದದಿಂದಾಗಿ ಉರ್ವ ಮಾರಿಯಮ್ಮ ದೇವಿ ತನ್ನ ಪ್ರೀತಿಯ ಸ್ವರ್ಣಭೂಷಿತ ಭೂತಾಯಿ, ಬಂಗುಡೆ ಮೀನುಗಳ ಸರ್ವಾಲಂಕಾರ ಸೇವೆಯಿಂದ ವಂಚಿತರಾಗಿದ್ದಾರೆ.
 ಕಡಲಿಗೆ ಹೋದ ಮೀನುಗಾರರು ಸಕಾಲದಲ್ಲಿ ವಾಪಸ್ ಬರಲಿ, ಬೀಸಿದ ಬಲೆಯಲ್ಲಿ ತುಂಬಾ ಮೀನು ಸಿಗಲಿ ಎಂದು ಕಾಸರಗೋಡಿನಿಂದ ಕಾರವಾರದವರೆಗೆ ಮೀನುಗಾರರು ಈ ದೇವಿಯನ್ನು ಪ್ರಾರ್ಥಿಸುತ್ತಾರೆ. ಅಂಥ ಸರ್ವರ ರಕ್ಷಕಿ ದೇವಿಗೆ ಆಡಳಿತ ಸಮಿತಿ ಅಧ್ಯಕ್ಷರ ನೇಮಕ ವಿವಾದದಿಂದ ಅಲಂಕಾರಕ್ಕೆ ತೊಂದರೆಯಾಗಿದೆ.
 ಜ.8ರಂದು ಮಂಗಳವಾರ ಸರ್ವಾಲಂಕಾರ ಮಾಡಿದ್ದು, ಬಳಿಕ ಆಡಳಿತ ಮೊಕ್ತೇಸರ ನೇಮಕ ವಿವಾದ ಹುಟ್ಟಿತ್ತು. ಹೀಗಾಗಿ ಲಾಕರ್‌ಗಳ ಕೀ ಗೊಂಚಲು ಹಸ್ತಾಂತರವಾಗದ ಹಿನ್ನೆಲೆಯಲ್ಲಿ ದೇವಿಗೆ ಸರ್ವಾಲಂಕಾರ ಪೂಜೆ ನಿಂತು ಹೋಗಿತ್ತು. ಇದೀಗ ಫೆ.25ರಿಂದ ಮಾ.3ರವರೆಗೆ ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ಸಂಧಾನ ನಡೆದು ತಾತ್ಕಾಲಿಕವಾಗಿ ಕೀ ಹಸ್ತಾಂತರವಾಗಿದೆ.
ವಿವಾದದ ಹಿನ್ನೆಲೆ: 2009 ನವೆಂಬರ್‌ನಲ್ಲಿ ಸರ್ವಜನ ಪ್ರಿಯರಾಗಿದ್ದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಬೋಳೂರು ನಿಧನರಾದಾಗ ಎಲ್ಲ ಗುರಿಕಾರರು ಸೇರಿ ದೇವದಾಸ ಪುತ್ರನ್ ಅವರನ್ನು 5 ವರ್ಷಗಳ ಅವಧಿಗೆ ಆಯ್ಕೆ ಮಾಡಿದರು.
 ಗ್ರಾಮಕ್ಕೆ ಒಬ್ಬ ಗುರಿಕಾರರು ಇರುತ್ತಾರೆ. ಕಳೆದ 3 ವರ್ಷಗಳಲ್ಲಿ ಗುರಿಕಾರರು ಬದಲಾಗುತ್ತಾ ಹೋಗಿದ್ದಾರೆ. ಜನವರಿಯಲ್ಲಿ ಸಭೆ ಸೇರಿದ ಏಳುಪಟ್ಣ ಮೊಗವೀರ ಸಭಾದ ಗುರಿಕಾರರು ಗೋಪಾಲಕೃಷ್ಣ ಬೋಳೂರು ಅವರ ಪುತ್ರ ಮನೋಹರ ಬೋಳೂರು ಅವರನ್ನು ಆಡಳಿತ ಮೊಕ್ತೇಸರರಾಗಿ ಆಯ್ಕೆ ಮಾಡಿದರು. ಆಡಳಿತ ಅವಧಿ 2 ವರ್ಷ ಬಾಕಿ ಇದ್ದರೂ ಹೊಸ ಆಡಳಿತ ಮೊಕ್ತೇಸರರನ್ನು ನೇಮಿಸಿದ್ದು ವಿವಾದಕ್ಕೆ ಕಾರಣವಾಯಿತು.
ದೇವದಾಸ ಪುತ್ರನ್ ಅವಧಿಯಲ್ಲಿ ದೇಗುಲ ಜೀರ್ಣೋದ್ಧಾರಗೊಂಡು ಅಭಿವೃದ್ಧಿ ಪಥದತ್ತ ಸಾಗಿತ್ತು. ಆದರೂ ಏಕಾಏಕಿ ಹೊಸ ಮೊಕ್ತೇಸರನ್ನು ಆಯ್ಕೆ ಮಾಡಿದ ಕುರಿತು ದೇವ ಪ್ರಶ್ನೆಯಲ್ಲಿಯೂ ಆಕ್ಷೇಪ ವ್ಯಕ್ತವಾಗಿತ್ತು.  
 ದೇವಿ ದರ್ಶನದಲ್ಲಿ 'ಬೀಗ ಕೀ ಗೊಂಚಲು ನೀಡಿಲ್ಲ' ಎಂದು ದರ್ಶನದಲ್ಲಿ ಹೊಸ ಮೊಕ್ತೇಸರರು ದೂರು ನೀಡಿದ್ದರು. ಇದಕ್ಕೆ ಪಾತ್ರಿ 'ದೂರು ಕೊಡಲು ನೀವ್ಯಾರು? ಅವರನ್ನು ಇಳಿಸುವಾಗ ನೀವು ನನ್ನನ್ನು ಕೇಳಿದ್ದೀರ' ಪ್ರಶ್ನಿಸಿದ್ದರು.  ಈ ಬಗ್ಗೆ ಮೊಕ್ತೇಸರ ದೇವದಾಸ ಪುತ್ರನ್ ಹೀಗೆ ವಾದ ಮಂಡಿಸುತ್ತಾರೆ. ನಮ್ಮ ಸಮುದಾಯಕ್ಕೆ ಸುಪ್ರೀಂ ಉಚ್ಚಿಲ ಮೊಗವೀರ ಮಹಾಜನ ಸಂಘ. ಅದರ ಅಧ್ಯಕ್ಷ ಕೇಶವ ಕುಂದರ್ ನನ್ನ ಬಳಿ ಬಂದು ಜಾತ್ರೆ ಮುಗಿಯುವವರೆಗೆ ಕೀಲಿ ಕೈ ನೀಡುವಂತೆ ಮನವಿ ಮಾಡಿದರು. ನಾನು ಅವರಿಗೆ ನೀಡಿದ್ದೇನೆ. ನಮ್ಮ ನಡುವೆ ವಿವಾದ ಇದ್ದರೂ ದೇವರು ಭಕ್ತರಿಗೆ ಸೇರಿದ್ದು, ಜಾತ್ರೆ ಸಸೂತ್ರವಾಗಿ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ನೀಡಿದ್ದೇನೆ. ನಾನೇ ಆಡಳಿತ ಮೊಕ್ತೇಸರ, ಅವರನ್ನು ಬೆರಳೆಣಿಕೆ ಜನರು ಸೇರಿಕೊಂಡು ಆಯ್ಕೆ ಮಾಡಿದ್ದಾರೆ.
 ನಿಯೋಜಿತ ಆಡಳಿತ ಮೊಕ್ತೇಸರ ಮನೋಹರ ಬೋಳೂರು ಹೇಳುವುದು ಹೀಗೆ. ಕೀ ಗೊಂಚಲು ಗುರುವಾರ ಲಭಿಸಿದೆ. ವಾಪಸ್ ನೀಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ದೇವರ ಚಿನ್ನಾಭರಣ ನನಗೆ ಸೇರಿಲ್ಲ, ಇಂದಿನ ಆಡಳಿತ ಮೊಕ್ತೇಸರಿಗೂ ಸೇರಿಲ್ಲ, ಭಕ್ತರು ದೇವಿಗೆ ನೀಡಿದ್ದು.
ಅಭಯದಾತೆ: 800 ವರ್ಷಗಳ ಹಿಂದೆ ಚಳ್ಳಿ ಗುರಿಕಾರರು ಮಾರಿಯಮ್ಮ ದೇಗುಲ ಕಟ್ಟಿಸಿದರು. ಮೋಗವೀರರು ಸಂಕಷ್ಟ ಎದುರಾದಾಗ, ಸಂಭ್ರಮದಲ್ಲಿರುವಾಗ ನೆನಪು ಮಾಡುವುದು ಇದೇ ದೇವಿಯನ್ನು. ಮೀನುಗಾರಿಕೆಗೆ ತೆರಳಿದಾಗ ಅತಿ ಹೆಚ್ಚು ಮೀನು ಸಿಕ್ಕಿದರೆ ಆ ಖುಷಿಯಲ್ಲಿ ಅದೇ ಮೀನುಗಳ ಚಿನ್ನಾಭರಣ ನೀಡುವುದು ಇಲ್ಲಿನ ವೈಶಿಷ್ಟ್ಯ. ಹೀಗಾಗಿ ಇಲ್ಲಿ ದೇವಿಗೆ ಚಿನ್ನದಿಂದ ಮಾಡಿದ ಮೀನುಗಳ ಆಭರಣ ಅಸಂಖ್ಯ.
-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.