ದಕ್ಷಿಣ ಕನ್ನಡ

ನಿಡ್ಡೋಡಿ ಉಷ್ಣ ಸ್ಥಾವರ ಸ್ಥಾಪನೆ ಪ್ರಸ್ತಾಪ: ಹೋರಾಟದ ಎಚ್ಚರಿಕೆ

Published On :

ಮಂಗಳೂರು: ಮೂಡುಬಿದಿರೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ನಿಡ್ಡೋಡಿ ಎಂಬಲ್ಲಿ 4 ಸಾವಿರ ಮೆಗಾ ವ್ಯಾಟ್ನ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೊಳ್ಳಲಿದೆ ಎಂಬ ಸುದ್ದಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಹೋರಾಟದ ಮೂಲಕ ಪ್ರತಿಭಟಿಸುವ ನಿರ್ಧಾರ ಕೈಗೊಂಡಿದ್ದಾರೆ.
 ನಿಡ್ಡೋಡಿಯಲ್ಲಿ 100 ರಿಂದ 150 ಎಕರೆವರೆಗಿನ ಜಾಗ ಬಂಜರಾಗಿದ್ದು, ಇದಕ್ಕೆ ತಾಗಿಕೊಂಡು ಬಡಗ ಮಿಜಾರು, ತೆಂಕ ಮಿಜಾರಿನ ಸುಮಾರು 600 ಎಕರೆ ಗುಡ್ಡ ಪ್ರದೇಶಗಳು ಖಾಲಿಯಾಗಿದೆ. ಇದರಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಲಾಗಿದೆ.
 ನಿಡ್ಡೋಡಿ ಪ್ರದೇಶದಲ್ಲಿ ಒಂದು ಐಟಿಐ ಕಾಲೇಜ್, ಮೂರು ಪ್ರಾಥಮಿಕ ಶಾಲೆ, ಒಂದು ಹೈಸ್ಕೂಲ್ಗಳಿವೆ. ಬುಡಕಟ್ಟು ಜನಾಂಗ ಹೆಚ್ಚಿದ್ದು, ಸುಮಾರು 60 ಕುಟುಂಬಗಳು ವಾಸಿಸುತ್ತಿದ್ದಾರೆ. ಬತ್ತ, ಅಡಕೆ, ತೆಂಗು ಸೇರಿದಂತೆ ಫಲವತ್ತಾದ ಭೂಮಿ ಇಲ್ಲಿದೆ.
 1 ಸಾವಿರ ಮೆಗಾ ವ್ಯಾಟ್ನ ನಾಗಾರ್ಜುನ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸುಮಾರು 2 ಸಾವಿರ ಎಕರೆ ಜಾಗ ಒತ್ತುವರಿಯಾಗಿದ್ದು, 4 ಸಾವಿರ ಮೆಗಾ ವ್ಯಾಟ್ ಸ್ಥಾಪನೆ 4 ಸಾವಿರ ಎಕರೆ ಜಾಗ ಕಬಳಿಕೆಯಾಗವುದು ಗ್ಯಾರಂಟಿ ಎಂಬುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯ. ಜಿಲ್ಲಾ ಪಂಚಾಯ್ತಿ ಸದಸ್ಯ ಜನಾರ್ದನ ಗೌಡ ಅವರ ಪ್ರಕಾರ, 4 ಸಾವಿರ ಮೆಗಾ ವ್ಯಾಟ್ನ ವಿದ್ಯುತ್ ಸ್ಥಾವರ ಸ್ಥಾಪಿಸಲು ಸುಮಾರು 2 ಸಾವಿರ ಎಕರೆ ಜಾಗ ಬೇಕಾಗಬಹುದು. ಇದರ ಪ್ರಕಾರ ನಿಡ್ಡೋಡಿ ಪ್ರದೇಶವನ್ನು ಸುತ್ತುವರಿದು ಬಡಗ ಮಿಜಾರು, ತೆಂಕಮಿಜಾರು, ಮುಚ್ಚೂರು, ಬಡಗ, ತೆಂಕ ಎಡಪದವು ಪ್ರದೇಶಗಳಿವೆ. ಈ ಪ್ರದೇಶವು ಸ್ಥಾವರಕ್ಕೆ ಸೇರಿಕೊಳ್ಳುತ್ತದೆ ಎಂದರು.
 ನಿಡ್ಡೋಡಿ ಪ್ರದೇಶದಿಂದ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಕಟೀಲು, ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನೆಲ್ಲಿತೀರ್ಥ ಗುಹಾಲಯ ದೇವಸ್ಥಾನ ಹಾನಿಗೊಳಗಾಗುವ ಸಂಭವವಿದೆ.
ಹಲವು ಯೋಜನೆಗಳ ಕಾರ್ಯಕ್ಕೆ ಭೂ ಸರ್ವೇ: 2 ವರ್ಷಗಳ ಹಿಂದೆ ಮೈನಿಂಗ್ ಕಂಪೆನಿಯೊಂದು ಭೂಮಿಯ ಸರ್ವೇ ಮಾಡಿತ್ತು. ಇದಾದ 1 ವರ್ಷದಲ್ಲಿ ಸುವರ್ಣ ಕಾರಿಡಾರ್ ಇಂಡಸ್ಟ್ರೀಯಲ್ ಕಂಪನಿಗಳ ಸ್ಥಾಪನೆಗಾಗಿ ಕೂಡ ಜಾಗ ಪರಿಶೀಲನೆ ನಡೆಸಲಾಗಿತ್ತು. 4 ವರ್ಷಗಳ ಹಿಂದೆ ಕೆಲವೊಂದು ರಿಯಲ್ ಎಸ್ಟೇಟ್ನವರು ಜಾಗವನ್ನು ಖರೀದಿಸಿದ್ದು, ಸರ್ಕಾರಿ ಜಾಗವನ್ನು ಕಬಳಿಸುವ ಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ ಎನ್ನುತ್ತಾರೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಿರೀಶ್.
 ಕೆಲವು ದಿನಗಳ ಹಿಂದೆ ನಿಡ್ಡೋಡಿ ಪ್ರದೇಶದಲ್ಲಿ ಹೆಲಿಕಾಪ್ಟರ್ ಸುತ್ತಾಡಿದ ಬಗ್ಗೆ ಜನರು ಮಾತಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಸರ್ವೇ ನಡೆಸಲಾಗುತ್ತಿದ್ದು, ಗ್ರಾಮಸ್ಥರು ಕೇಳಿದಾಗ ಉತ್ತರಿಸಲಾಗದೆ ತಡಕಾಡಿದ್ದಾರೆ ಎಂಬ ಮಾಹಿತಿ ಜನರಿಂದ ಬರುತ್ತಿದೆ.  ನಂದಿನಿ ನದಿಗೆ ಡ್ಯಾಂ ನಿರ್ಮಿಸಿ ಸ್ಥಾವರಕ್ಕೆ ನೀರು ಪೂರೈಸುವ ಕುರಿತು ಮಾಹಿತಿ ಲಭ್ಯವಾಗಿದೆ. ಇದರ ಮಾಹಿತಿ ಕೆಐಡಿಬಿ ಗೊತ್ತಿದ್ದರೂ, ಗೊತ್ತಿಲ್ಲದಂತೆ ಸುಮ್ಮನಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. ಭಾನುವಾರ ತನಕ ಗಡುವು ನೀಡಲಾಗಿದ್ದು, ಮುಂದಿನ ದಿನ ಗ್ರಾಮಸ್ಥರೆಲ್ಲಾ ಒಟ್ಟಾಗಿ ಉಗ್ರ ಪ್ರತಿಭಟನೆ ನಡೆಸಿ ಅಣು ಸ್ಥಾವರ ಸ್ಥಾಪನೆಯಾಗದಂತೆ ತಡೆಗಟ್ಟುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
 ಈಗಾಗಲೇ ಗ್ರಾಮದ ಪ್ರಮುಖರೆಲ್ಲಾ ಒಗ್ಗಟ್ಟಾಗಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.