ಸೈನೈಡ್ ಮೋಹನ್ ಕೇಸ್: ಅವಧಿ ವಿಸ್ತರಣೆ ಕೋರಿ ಹೈಕೋರ್ಟ್ಗೆ ಪತ್ರ
ವಿಶೇಷ ವರದಿ
ಮಂಗಳೂರು: ಸೈನೈಡ್ ಮೋಹನ್ ಕುಮಾರ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಂಗಳೂರಿನ ತ್ವರಿತಗತಿ ನ್ಯಾಯಾಲಯದ ಅವಧಿ ವಿಸ್ತರಿಸುವಂತೆ ಕೋರಿ ಜಿಲ್ಲಾ ಪ್ರಧಾನ ನ್ಯಾಯಾಲಯದಿಂದ ಹೈಕೋರ್ಟ್ಗೆ ಪತ್ರ ಬರೆಯಲಾಗಿದೆ.
ಜಿಲ್ಲಾ ಪ್ರಧಾನ ನ್ಯಾಯಾಧೀಶ ಅಶೋಕ್ ಜಿ. ನಿಜಗಣ್ಣವರ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಈ ಪತ್ರ ಬರೆದಿದ್ದು, ಒಂದು ವರ್ಷ ಅವಧಿ ವಿಸ್ತರಣೆ ಕೋರಲಾಗಿದೆ.
2010 ಅಕ್ಟೋಬರ್ನಲ್ಲಿ ಮೊಹನ್ ಕುಮಾರ್ ಬಂಟ್ವಾಳ ಪೊಲೀಸರಿಗೆ ಸೆರೆಸಿಕ್ಕಿದ್ದು, ಆಗ ಆತ ಸೈನೈಡ್ ನೀಡಿ ನಡೆಸಿದ 23 ಯುವತಿಯರ ಹತ್ಯೆ ಬೆಳಕಿಗೆ ಬಂದಿತ್ತು. ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ ಮತ್ತಿತರ ಕಡೆಗಳಲ್ಲಿ ಯುವತಿಯರನ್ನು ಹತ್ಯೆ ಮಾಡಿದ ಬಗ್ಗೆ ಆಯಾ ವ್ಯಾಪ್ತಿಯ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಈ ಎಲ್ಲ ಪ್ರಕರಣವನ್ನು ಒಂದೇ ಕಡೆ ವಿಚಾರಣೆ ನಡೆಸುವಂತೆ ಹೈಕೋರ್ಟ್ ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. 2011 ಮೇ ತಿಂಗಳಲ್ಲಿ ಮಂಗಳೂರಿನ ಜಿಲ್ಲಾ ತ್ವರಿತಗತಿ ನ್ಯಾಯಾಲಯಕ್ಕೆ ಮೋಹನ್ ಕುಮಾರ್ ಪ್ರಕರಣದ ವಿಚಾರಣೆ ಪ್ರಾರಂಭವಾಗಿತ್ತು. 2012 ಜುಲೈ ವರೆಗೆ 13 ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಸಾಕ್ಷಿಗಳನ್ನು ನ್ಯಾಯಾಧೀಶರಾಗಿದ್ದ ನಿಂಗಣ್ಣ ಗೌಡ ಜಂಟ್ಲಿ ದಾಖಲಿಸಿದ್ದರು. ಉಳಿದ ಪ್ರಕರಣಗಳು ವಿಚಾರಣೆಗೆ ಬರಲು ಬಾಕಿ ಇದೆ. ಅಷ್ಟರಲ್ಲಿ ಅವರು ಸೇವೆಯಿಂದ ನಿವೃತ್ತರಾದ ಕಾರಣ ಈಗ ಬೇರೊಬ್ಬ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜುಲೈ ನಂತರ ಮೋಹನ್ ಕುಮಾರ್ ಪ್ರಕರಣ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿಲ್ಲ. ಈ ಮಧ್ಯೆ ಮಾರ್ಚ್ಗೆ ತ್ವರಿತಗತಿ ನ್ಯಾಯಾಲಯದ ಅವಧಿ ಮುಗಿಯಲಿದ್ದು, ಅದನ್ನು ಇನ್ನು ಒಂದು ವರ್ಷ ಮುಂದುವರಿಸುವಂತೆ ಪ್ರಧಾನ ನ್ಯಾಯಾಧೀಶರು ಪತ್ರದಲ್ಲಿ ಕೋರಿದ್ದಾರೆ ಎನ್ನಲಾಗಿದೆ.
ಹೋಮ್ಸ್ಟೇ ದಾಳಿ ವಿಚಾರಣೆಗೂ ಬಳಕೆ?: ಮೋಹನ್ ಕುಮಾರ್ ಪ್ರಕರಣವಲ್ಲದೆ, 2012ರಲ್ಲಿ ನಡೆದ ಪಡೀಲ್ ಹೋಮ್ಸ್ಟೇ ದಾಳಿ ಪ್ರಕರಣದ ವಿಚಾರಣೆಯೂ ಇದೇ ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸುವ ಸಾಧ್ಯತೆ ಇದೆ. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯದಂಥ ಪ್ರಕರಣಗಳ ವಿಚಾರಣೆಯೂ ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾವಣೆ ಸಾಧ್ಯತೆಯನ್ನು ಕಾನೂನು ತಜ್ಞರು ಹೇಳುತ್ತಾರೆ.
ಮಂಗಳೂರಿಗೆ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ಇನ್ನೊಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯವನ್ನು ಪುತ್ತೂರಿಗೆ ಮಂಜೂರುಗೊಳಿಸುವಂತೆ ಹೈಕೋರ್ಟ್ಗೆ ಪ್ರಸ್ತಾಪ ಸಲ್ಲಿಕೆಯಾಗಿದೆ.
ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಮಾನಭಂಗ, ಕೊಲೆ, ಕೊಲೆ ಯತ್ನದಂಥ ಎಲ್ಲ ಪ್ರಕರಣಗಳ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

