ಮನೆಯೊಡತಿ ಹಿಂಸೆ ತಾಳದೆ ಪರಾರಿಯಾದ ಬಾಲಕಿ ಆಸ್ಪತ್ರೆಗೆ
ಪುತ್ತೂರು: ಮನೆ ಕೆಲಸಕ್ಕಿದ್ದ ಬಾಲಕಿಯೊಬ್ಬಳು ಮನೆ ಒಡತಿಯ ದೈಹಿಕ ಹಿಂಸೆ ತಾಳಲಾರದೆ ಮನೆಯಿಂದ ತಪ್ಪಿಸಿಕೊಂಡು ಬಂದು ಅಸ್ವಸ್ಥಳಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈಕೆಯ ಹೆಸರು ಪರ್ವೀನ್ (16). ಪುತ್ತೂರು ತಾಲೂಕಿನ ಸುಳ್ಯಪದವು ಬಳಿಯ ಮನೆಯೊಂದರಲ್ಲಿ ಕೆಲಸಕ್ಕಿದ್ದ ಇವಳು ಕೊಪ್ಪಳ ಜಿಲ್ಲೆಯ ಚಳ್ಳಾರೆಯ ಹೈಸನಾರ್ ಎಂಬವರ ಪುತ್ರಿ ಎಂದು ತಿಳಿದುಬಂದಿದೆ.
ಪ್ರತಿದಿನ ಹೊಡೆಯುತ್ತಿದ್ದರು: ಪರ್ವೀನ್ ಹೇಳುವಂತೆ, ಕಳೆದ ಒಂದು ವರ್ಷದ ಹಿಂದೆ ಅವಳನ್ನು ಈಕೆಯ ದೊಡ್ಡಪ್ಪ ಈಶ್ವರಮಂಗಲದ ಮನೆಯಲ್ಲಿ ಕೆಲಸಕ್ಕೆ ಇರಿಸಿದ್ದರು. ಆದರೆ, ಬಾಲಕಿ ಪರ್ವೀನ್ಗೆ ಊರಿನ ಬಗ್ಗೆಯಾಗಲಿ, ಮನೆಯ ಬಗ್ಗೆಯಾಗಲೀ ಯಾವುದೇ ಮಾಹಿತಿ ಇಲ್ಲ. ಕೆಲಸಕ್ಕಿದ್ದ ಮನೆಯಲ್ಲಿ ಪ್ರತಿದಿನ ತನಗೆ ಹೊಡೆಯುತ್ತಿದ್ದರು, ದುಡಿಸುತ್ತಿದ್ದರು ಎನ್ನುವ ಆಕೆ, ಮೂರು ದಿನಗಳ ಹಿಂದೆ (ಜ.18) ಮಧ್ಯಾಹ್ನ ತಾನು ಬೇಗ ಊಟ ಮಾಡಿದ ಕಾರಣಕ್ಕೆ ಮನೆಯೊಡತಿ ಹೊಡೆದರು. ನೋವು ತಾಳಲಾರದೆ ನಾನು ಮನೆ ಮಂದಿಯ ಕಣ್ಣು ತಪ್ಪಿಸಿ ಬಂದೆ ಎನ್ನುತ್ತಾಳೆ.
ಮನೆಯಿಂದ ತಪ್ಪಿಸಿಕೊಂಡ ಬಾಲಕಿ ಪರ್ವೀನ್ ಸುಳ್ಯಪದವು ಎಂಬಲ್ಲಿ ತಲೆಸುತ್ತು ಬಂದು ಬಸ್ ನಿಲ್ದಾಣದ ಬಳಿ ಬಿದ್ದಿದ್ದಳು. ಇದನ್ನು ಗಮನಿಸಿದ ಸ್ಥಳೀಯರು 108 ಆರೋಗ್ಯ ರಕ್ಷಾಕ್ಕೆ ಕರೆ ಮಾಡಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಂಬಳ ದೊಡ್ಡಪ್ಪನ ಪಾಲು: ತಾನು ತಲೆ ಸುತ್ತು ಬಂದು ಬಿದ್ದಿರುವ ಸುಳ್ಯಪದವಿನಿಂದ ಸುಮಾರು 2 ಕಿ.ಮೀ. ದೂರದ ಭಾಗ್ಯ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದೆ ಎನ್ನುವ ಪರ್ವೀನ್ಗೆ ಈ ಪ್ರದೇಶದ ಬಗ್ಗೆ ಸರಿಯಾದ ಅರಿವಿಲ್ಲ. ತನ್ನ ಒಡತಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದಷ್ಟೇ ಗೊತ್ತಿದೆ. ತನ್ನನ್ನು ಇಲ್ಲಿ ಕೆಲಸಕ್ಕೆ ಸೇರಿಸಿದ ಬಳಿಕ ತನ್ನ ದೊಡ್ಡಪ್ಪ ಪ್ರತಿ ತಿಂಗಳಿಗೆ ರು. 1700ರಂತೆ ತನ್ನ ಸಂಬಳ ಪಡೆದುಕೊಳ್ಳುತ್ತಿದ್ದರು ಎಂದು ಪರ್ವೀನ್ ಹೇಳುತ್ತಾಳೆ. ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ತನಗೆ ಸರಿಯಾದ ಊಟವೂ ನೀಡದೆ ಮನೆ ಮಂದಿ ದುಡಿಸುತ್ತಿದ್ದರು ಎಂದು ಬಾಲಕಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ.
ಸೂಕ್ತ ಕ್ರಮ: ಆಸ್ಪತ್ರೆಗೆ ಕಾರ್ಮಿಕ ಇಲಾಖೆ ಅಧಿಕಾರಿ ಕೃಷ್ಣಮ್ಮ ಹಾಗೂ ಸಿಬ್ಬಂದಿ ಚಿದಾನಂದ ಕಾಮತ್ ಬುಧವಾರ ಭೇಟಿ ನೀಡಿ ಬಾಲಕಿ ಬಗ್ಗೆ ವಿಚಾರಿಸಿದ್ದಾರೆ. ಬಾಲಕಿಯ ವಯಸ್ಸು 14 ಮೀರಿರುವುದರಿಂದ ಈಕೆ ಬಾಲ ಕಾರ್ಮಿಕೆ ಎಂದು ದಾಖಲಿಸಲಾಗುತ್ತಿಲ್ಲ. ಆದರೆ, ಸರ್ಕಾರ ನಿಗದಿ ಪಡಿಸಿದಂತೆ ಮನೆಗೆಲಸ ಮಾಡುವ ಹೆಂಗಸಿಗೆ ಕನಿಷ್ಠ ಕೂಲಿ ಪ್ರತಿದಿನಕ್ಕೆ ರು. 165.58 ನೀಡಬೇಕು. ಆದರೆ, ಬಾಲಕಿ ಹೇಳುವಂತೆ ಈಕೆಗೆ ತಿಂಗಳಿಗೆ ರು. 1700 ಮಾತ್ರವೇ ನೀಡಲಾಗುತ್ತಿದೆ. ಈ ಬಗ್ಗೆ ಮನೆಯವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜ. 18ರಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಪರ್ವೀನ್ ದಾಖಲಾಗಿದ್ದರೂ ಈತನಕ ಈಕೆ ಸುಳ್ಯಪದವಿನ ಯಾರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂಬುದು ಪತ್ತೆಯಾಗಿಲ್ಲ.
ಜೀತದಲ್ಲಿ ಸಿಲುಕಿದಳೇ ಬಾಲಕಿ?
ಕಳೆದ 2 ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಪರ್ವೀನ್ ದಾಖಲಾಗಿರುವುದನ್ನು ಗಮನಿಸಿದ ಇಲ್ಲಿನ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಾಧ್ಯಮಗಳ ಗಮನಕ್ಕೆ ತಂದ ಕಾರಣ ಈಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಾಲಕಿಗೆ 14 ವರ್ಷ ಮೀರಿದ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕಳೆಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳ ಮಾತಿನಿಂದ ಮನವರಿಕೆಯಾಗುತ್ತಿದೆ. ಆದರೆ ಈಕೆ, ಜೀತ ಕಾರ್ಮಿಕೆ ಎಂಬುದು ಮಾತ್ರ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಜಿಲ್ಲೆಯಲ್ಲಿ ಜೀತ ಪದ್ಧತಿ ಇಲ್ಲ ಎಂದು ಒಂದೆಡೆ ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತಗಳು ಹೇಳುತ್ತಿರುವ ನಡುವೆಯೇ ಕಳೆದ ಒಂದು ವರ್ಷದಿಂದ ಈ ಬಾಲಕಿ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತ ಸರ್ಕಾರ ನಿಗದಿಪಡಿಸಿದ ಕೂಲಿಗಿಂತ ಕಡಿಮೆ ಕೂಲಿ ಪಡೆಯುತ್ತ ಜೀತದಾಳುವಾಗಿ ದುಡಿಯುತ್ತಿರುವುದು ಹಾಗೂ ತಾನು ಮಾಡಿದ ಕೆಲಸಕ್ಕೆ ಸಂಬಳವನ್ನು ಮಧ್ಯವರ್ತಿಯಾದ ತನ್ನ ದೊಡ್ಡಪ್ಪ ಪಡೆಯುತ್ತಿರುವುದು ಮಾತ್ರ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

