ದಕ್ಷಿಣ ಕನ್ನಡ

ಜಿಲ್ಲಾಧಿಕಾರಿ ಕಚೇರಿ: ಅಭಿವೃದ್ಧಿ ಬದಲು ಎತ್ತಂಗಡಿ!

Published On :

-ಆತ್ಮಭೂಷಣ್
ಮಂಗಳೂರು: ಈಗಿರುವ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಪ್ರಥಮ ಹಂತದ ಕಾಮಗಾರಿ ಮಾತ್ರ ಮುಕ್ತಾಯವಾಗಿದ್ದು, ಇನ್ನೆರಡು ಹಂತದ ಕಾಮಗಾರಿ ಅನುದಾನದ ಕೊರತೆಯಿಂದ ನಡೆದಿಲ್ಲ. ಈಗಿರುವ ಲಭ್ಯ ಸ್ಥಳದಲ್ಲಿ ಕಚೇರಿಗಳು ಇಕ್ಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಟ್ಟಡ ಕಾಮಗಾರಿ ಪೂರ್ತಿಗೊಳಿಸಲು ಅನುದಾನ ಕೇಳಿದ್ದೇ ತಡ, ಕಟ್ಟಡ ವಿಸ್ತರಣೆಗೆ ಪುರಾತತ್ವ ಇಲಾಖೆ ಅಡ್ಡಿಯಾಗಿದೆ. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯನ್ನೇ ದೂರದ ಕೂಳೂರಿಗೆ ಸ್ಥಳಾಂತರಿಸುವ ಪ್ರಸ್ತಾಪ ಸರ್ಕಾರದ ಕಡತದಲ್ಲಿದೆ. ಹಾಗಾಗಿ ಹಾಲಿ ಕಟ್ಟಡವನ್ನು ಅಭಿವೃದ್ಧಿಗೊಳಿಸುವ ಯೋಜನೆ ಸದ್ದಿಲ್ಲದೆ ಮೂಲೆ ಸೇರಿದೆ.
 1985ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಈಗಿರುವ ಸ್ಥಳದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಗೊಂಡಿತ್ತು. ಪ್ರಥಮ ಹಂತದಲ್ಲಿ ರು. 83.80 ಲಕ್ಷ ವೆಚ್ಚ ಮಾಡಲಾಗಿತ್ತು. 'ಎಲ್‌' ಆಕೃತಿಯಲ್ಲಿಈ ಕಟ್ಟಡ ನಿರ್ಮಿಸಲಾಗಿದ್ದು, ಲೋಕೋಪಯೋಗಿ ಇಲಾಖಾ ನಕ್ಷೆ ಪ್ರಕಾರ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಬೇರೆಯೇ ಪಾರ್ಶ್ವದಲ್ಲಿ ಇರಬೇಕಿತ್ತು.
ಪ್ರಸ್ತುತ ಕಟ್ಟಡದಲ್ಲೇ ಎರಡನೇ ಹಂತಕ್ಕೆ ರು. 70.20 ಲಕ್ಷ, ಮೂರನೇ ಹಂತಕ್ಕೆ ರು. 68 ಲಕ್ಷ ಸೇರಿ ಒಟ್ಟು ರು. 22.20 ಕೋಟಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಾಲಿ ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಕಮೀಷನರ್ ಕಚೇರಿ, ಜಿಲ್ಲಾ ಖಜಾನೆ, ಚುನಾವಣಾ ಶಾಖೆ, ಭೂದಾಖಲೆಗಳ ಇಲಾಖೆ, ಸಂಸದರ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಜಿಲ್ಲಾಧಿಕಾರಿ ಕಂದಾಯ ಕಚೇರಿಯಲ್ಲಿ ಕಳೆದ ವರ್ಷ ನವೀಕರಿಸಲಾಗಿತ್ತು. ಸಭಾಂಗಣ, ಕೋರ್ಟ್ ಹಾಲ್‌ಗಳು ಕೂಡ ಹೊಸ ರೂಪ ಪಡೆದುಕೊಂಡಿವೆ. ಇಷ್ಟಾದರೂ ಒಂದೇ ಸೂರಿನಡಿ ಎಲ್ಲ ಕಚೇರಿಗಳಿಗೆ ಇಲ್ಲಿ ಸ್ಥಳಾವಕಾಶದ ಕೊರತೆ ಇದೆ.
ವಿಸ್ತರಣೆಗೆ ಪುರಾತತ್ವ ಇಲಾಖೆ ಅಡ್ಡಿ: ಜಿಲ್ಲಾಧಿಕಾರಿ ಕಟ್ಟಡ ಹಿಂಭಾಗದಲ್ಲಿರುವ ತಹಸೀಲ್ದಾರ್ ಕಚೇರಿಯ ಹಳೆ ಕಟ್ಟಡವನ್ನು ಪರಂಪರಾಗತ ಸಂರಕ್ಷಿತ ಕಟ್ಟಡ ಎಂದು ಪುರಾತತ್ವ ಇಲಾಖೆ ಪ್ರಕಟಿಸಿದೆ. ಜಿಲ್ಲಾಧಿಕಾರಿ ಕಟ್ಟಡದ ಇನ್ನೆರಡು ಹಂತದ ಕಾಮಗಾರಿ ನಡೆಸಬೇಕಾದರೆ ತಹಸೀಲ್ದಾರ್ ಕಚೇರಿ ಕಟ್ಟಡವನ್ನು ಕೆಡವಿ ವಿಸ್ತರಣೆ ಕೈಗೊಳ್ಳಬೇಕು. ಪುರಾತತ್ವ ಹಿನ್ನಲೆಯಲ್ಲಿ ಆ ಕಟ್ಟಡವನ್ನು ತೆರವುಗೊಳಿಸದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹಳೆ ಕಟ್ಟಡದಲ್ಲಿ ಧಾರ್ಮಿಕ ದತ್ತಿ ಇಲಾಖೆ, ನೆಮ್ಮದಿ ಕೇಂದ್ರ, ಸಬ್‌ರಿಜಿಸ್ಟ್ರಾರ್ ಕಚೇರಿ, ಲೋಕಾಯುಕ್ತ ಕಚೇರಿಗಳು ಇವೆ.
ಪ್ರಸ್ತಾವನೆ ಕಳುಹಿಸಲಾಗಿತ್ತು: ಕೂಳೂರಿನಲ್ಲಿ ಸರ್ವೆ ನಂ.38/1ಎ1ಎ1ರಲ್ಲಿ 9.58 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯಕ್ಕಾಗಿ ಕಾದಿರಿಸಲಾಗಿದೆ. ಇದರಲ್ಲೇ ಕ್ರಿಕೆಟ್ ಸ್ಟೇಡಿಯಂಗೆ ಕಾದಿರಿಸಿದ್ದ 4.50 ಎಕರೆಯನ್ನು ಕಿತ್ತುಕೊಂಡು ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯಕ್ಕೆ ಬರೆಸಿಕೊಳ್ಳಲಾಯಿತು. ಉಡುಪಿ ಜಿಲ್ಲಾಧಿಕಾರಿ ಸಂಕೀರ್ಣ ಮಾದರಿಯಲ್ಲಿ ಇಲ್ಲಿಯೂ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ನಿರ್ಮಿಸುವುದು ಇದರ ಉದ್ದೇಶ.
ಅನುದಾನ ಕಡತದಲ್ಲಿ ಮಾತ್ರ: ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿಯುವ ಹಂತದಲ್ಲಿ ತರಾತುರಿಯಲ್ಲಿ ಕಡತಗಳಿಗೆ ಸಹಿ ಹಾಕಲಾಗಿದೆ. ಆದರೆ ಇದುವರೆಗೆ ಅನುದಾನ ಬಂದಿಲ್ಲ. ಹೊಸ ಸಂಕೀರ್ಣ ನಿರ್ಮಾಣಕ್ಕೆ ರು. 30 ಕೋಟಿ ಬೇಡಿಕೆ ಇಡಲಾಗಿದೆ.
   ಮೂರನೇ ಒಂದಂಶವಾಗಿ ಮೊದಲು ರು. 10 ಕೋಟಿಯನ್ನಾದರೂ ಬಿಡುಗಡೆ ಮಾಡಿ ಎಂಬ ಜಿಲ್ಲಾಡಳಿತದ ಕೋರಿಕೆಗೆ ಇದುವರೆಗೆ ಮನ್ನಣೆ ಸಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.