ದಕ್ಷಿಣ ಕನ್ನಡ

ಭೂ ಒತ್ತುವರಿ ಪ್ರಕರಣ; ಮಾಜಿ ಸಿಎಂ ಅರ್ಜಿ ವಿಚಾರಣೆ ಮುಂದಕ್ಕೆ (ಸುದ್ದಿ ಸಂಕ್ಷೇಪ)

Published On :

ಬೆಂಗಳೂರು: ಭೂ ಒತ್ತುವರಿ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಲೋಕಾಯುಕ್ತ ನ್ಯಾಯಾಲಯ ಫೆ.4ಕ್ಕೆ ಮುಂದೂಡಿದೆ. ಬಾಗಲೂರು ಬಳಿ 8.5 ಗುಂಟೆ ಗೋಮಾಳ ಜಮೀನು ಖರೀದಿಸಲು ಡಿ.ವಿ. ಸದಾನಂದಗೌಡ ಹಾಗೂ ಅವರ ಪತ್ನಿ ನಕಲಿ ದಾಖಲೆ ಪತ್ರಗಳನ್ನು ನೀಡಿದ್ದರು ಎಂದು ನಾಗಲಕ್ಷ್ಮೀ ಬಾಯಿ ಆರೋಪಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಕಾರು ಡಿಕ್ಕಿ: ಪಾದಚಾರಿ ಸಾವು
ಮಂಗಳೂರು: ನಗರದ ಬಾಳಿಗಾ ಸ್ಟೋರ್ ಬಳಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವಿಗೀಡಾದ ಘಟನೆ ಮಂಗಳವಾರ ವರದಿಯಾಗಿದೆ. ಸಂಜೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 45ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯನ್ನು ಕಾರು ಚಾಲಕ ನಾಗೇಶ್ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಸಂಚಾರಿ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರು ಮಾರಾಟ ಪತ್ತೆ
ಮಂಗಳೂರು: ಉಳ್ಳಾಲದ ಚೆಂಬುಗುಡ್ಡೆಯಲ್ಲಿ ಮನೆಯೊಂದರ ವಠಾರದಲ್ಲಿ ಅಕ್ರಮವಾಗಿ ಜಾನುವಾರು ಕಟ್ಟಿಹಾಕಿ ಮಾರಾಟಕ್ಕೆ ಯತ್ನಿಸಿದ್ದನ್ನು ಪತ್ತೆ ಮಾಡಿದ ಪೊಲೀಸರು 28 ಜಾನುವಾರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ ವಿದ್ಯಮಾನ ಮಂಗಳವಾರ ವರದಿಯಾಗಿದೆ. ಆರೋಪಿ ಎಂ.ಸಿ.ಬಾವ ಜಾನುವಾರನ್ನು ಕದ್ದು ತಂದು ಕಟ್ಟಿಹಾಕಿ ಮಾರಾಟ ಮಾಡುತ್ತಿದ್ದು, ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಐಎಸ್‌ಐ ಹೆಲ್ಮೆಟ್ ಇಲ್ಲಾಂದ್ರೆ ದಂಡ
ಮಂಗಳೂರು: ನಕಲಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ನಡೆಸುವ ಸವಾರರು ಇನ್ನು ಜಾಗ್ರತರಾಗಿ ಅಸಲಿ ಹೆಲ್ಮೆಟ್ ಧರಿಸಿಕೊಂಡು ಸಂಚರಿಸಬೇಕಾಗಿದೆ. ನಕಲಿ ಹೆಲ್ಮೆಟ್ ಸವಾರರ ವಿರುದ್ಧ ನಗರ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದಾರೆ. ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 6ರಿಂದ 9 ಹಾಗೂ ರಾತ್ರಿ 9ರಿಂದ ವಾರದಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈವರೆಗೆ 300 ವಾಹನಗಳನ್ನು ತಪಾಸಣೆ ನಡೆಸಿದ್ದು, 100 ಪ್ರಕರಣ ದಾಖಲಿಸಿದ್ದಾರೆ. ರು. 50 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್, ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಶಪಡಿಸಲಾದ ನಕಲಿ ಹೆಲ್ಮೆಟ್‌ಗಳನ್ನು ವಶಪಡಿಸುತ್ತಿದ್ದಾರೆ.

ಇಂದು, ನಾಳೆ ರಾಷ್ಟ್ರೀಯ ಸಮ್ಮೇಳನ
ಮೂಲ್ಕಿ: ಮಂಗಳೂರು ವಿ.ವಿ. ಕಾಲೇಜು ಅದ್ಯಾಪಕರ ಸಂಘ (ಅಮುಕ್ತ್) ಮತ್ತು ಮಂಗಳೂರಿನ ಕೆನರಾ ಕಾಲೇಜಿನ ವಾಣಿಜ್ಯ ಹಾಗೂ ವ್ಯವಸ್ಥಾಪನಾ ವಿಭಾಗ ಆಶ್ರಯದಲ್ಲಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ 23,24ರಂದು ಉನ್ನತ ಶಿಕ್ಷಣ ಮುಂಬರುವ ಸವಾಲುಗಳು ಕುರಿತು 2 ದಿನಗಳ ರಾಷ್ಟ್ರೀಯ ಸಮ್ಮೇಳನ ಜರುಗಲಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಪ್ರಬಂಧ ಮಂಡನೆಯಾಗಲಿದ್ದು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಮಾಜಿ ಕುಲಪತಿ ಕೆ. ಸುಧಾ ರಾವ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಂ.ಆರ್.ವಾಸುದೇವ, ಕುಂಬ್ಳೆ ನರಸಿಂಹ ಪ್ರಭು, ಡಾ. ಎಂ ಚಂದ್ರ ಪೂಜಾರಿ, ಡಾ. ಟಿ. ಮಲ್ಲಿಕಾರ್ಜುನಪ್ಪ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಇಂದು ಜಯ ಕರ್ನಾಟಕ ಸಮಾವೇಶ
ಪುತ್ತೂರು: ಜಯ ಕರ್ನಾಟಕ ಕುಂಬ್ರ ವಲಯ ಸಮಿತಿಯ ವತಿಯಿಂದ ಸಂಘಟನೆಯ ವಲಯ ಸಮಾವೇಶ ಜ.23ರಂದು ಸಂಜೆ ಕುಂಬ್ರ ಶಾಲಾ ವಠಾರದಲ್ಲಿ ನಡೆಯಲಿದೆ ಸಮಿತಿಯ ಗೌರವ ಅಧ್ಯಕ್ಷ ಮಿತ್ರಂಬಾಡಿ ಪುರಂದರ ರೈ ತಿಳಿಸಿದ್ದಾರೆ.
  ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಾವೇಶವನ್ನು ಜಯಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಉದ್ಘಾಟಿಸಲಿದ್ದಾರೆ. ಜಯಕರ್ನಾಟಕ ಸಮಿತಿಯ ತಾಲೂಕು ಸಮಿತಿ ಅಧ್ಯಕ್ಷ ಪ್ರಕಾಶಚಂದ್ರ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಚಂದ್ರಹಾಸ ರೈ ಮಾಡಾವು ಆಶಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಇಂದು ಪ್ರತಿಭಾ ಪುರಸ್ಕಾರ
ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ.ಪೂ. ಕಾಲೇಜ್ ಉಪ್ಪಿನಂಗಡಿ ವತಿಯಿಂದ ಸಂಸ್ಥೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ದತ್ತಿನಿಧಿ ಬಹುಮಾನ ವಿತರಣಾ ಸಮಾರಂಭ ಬುಧವಾರ ನಡೆಯಲಿದೆ.

ಇಂದು ಅಭಿನಂದನೆ
ಪುತ್ತೂರು: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ, ಅಭಿಮಾನಿಗಳ ಮತ್ತು ಹಿತೈಷಿಗಳ ವತಿಯಿಂದ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ನೂತನ ಅಧ್ಯೆಕ್ಷೆ ಗೀತಾ ದಾಸರಮೂಲೆಗೆ ಅಭಿನಂದನಾ ಕಾರ್ಯಕ್ರಮ ಬುಧವಾರ ಹಿರೇಬಂಡಾಡಿ ಸಮುದಾಯ ಭವನದಲ್ಲಿ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.