ಮನೋಹರ ಪ್ರಸಾದ್ಗೆ ಸ್ಕಂದಶ್ರೀ ಪ್ರಶಸ್ತಿ (ಸುದ್ದಿ ಸಂಕ್ಷೇಪ)
ಮಂಗಳೂರು: ಕೈಕಂಬ ಸ್ಕಂದಶ್ರೀ ಸೇವಾ ಸಮಿತಿ ವರ್ಷದ ವ್ಯಕ್ತಿ ಸ್ಕಂದಶ್ರೀ ಪ್ರಶಸ್ತಿಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಮನೋಹರ ಪ್ರಸಾದ್ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸ್ಕಂದಶ್ರೀ ಪ್ರಶಸ್ತಿ ನೀಡಲಾಗುತ್ತದೆ ಎಂದು ಅಧ್ಯಕ್ಷ ನವೀನ್ ಕೈಕಂಬ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 30 ವರ್ಷದಿಂದ ಉದಯವಾಣಿಯಲ್ಲಿ 2,500ಕ್ಕೂ ಹೆಚ್ಚು ಲೇಖನ ಬರೆದು ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಜ.27ರಂದು ಕಂದಾವರ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಮಹೋತ್ಸವದಂದು ಸನ್ಮಾನಿಸಲಾಗುವುದು. ಧಾರ್ಮಿಕ ಕಾರ್ಯಕ್ರಮ, ಭಕ್ತಿಗೀತೆ, ಮರಾಠಿ ಅಭಂಗ ಮತ್ತು ರಾತ್ರಿ ನಾಗದರ್ಶನ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಭರತ್ ಕರ್ಕೆರ, ಶೇಖರ್ ಶೆಟ್ಟಿಗಾರ್, ಕಂದಾವರ ಮೋಹನ ಸಾಲ್ಯಾನ್ ಇದ್ದರು.
ಶಿರ್ಲಾಲು ಮಹಾಮಸ್ತಕಾಭಿಷೇಕ, ನಾಳೆ ಸಮಾಲೋಚನಾ ಸಭೆ
ಮಂಗಳೂರು: ಕಾರ್ಕಳ ತಾಲೂಕಿನ ಶಿರ್ಲಾಲು ಅತಿಶಯ ಕ್ಷೇತ್ರ ಭಗವಾನ್ ಶ್ರೀಅನಂತನಾಥ ಸ್ವಾಮಿ ಬಸದಿಯಲ್ಲಿ ನಿರ್ಮಿಸಿದ 11 ಅಡಿ ಎತ್ತರದ ನೂತನ ಭಗವಾನ್ ಶ್ರೀಆದಿನಾಥ, ಭರತ ಮತ್ತು ಬಾಹುಬಲಿ ಸ್ವಾಮಿಗಳ ವಿಗ್ರಹಗಳ ಪ್ರತಿಷ್ಠಾ ಪಂಚ ಕಲ್ಯಾಣ ಪೂರ್ವಕ ಮಹಾಮಸ್ತಕಾಭಿಷೇಕ ಮಹೋತ್ಸವ ಫೆ.11ರಿಂದ 20ರವರೆಗೆ ನಡೆಯಲಿದೆ. ಈ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಈ ಸಮಿತಿಗಳ ಹಾಗೂ ಶ್ರಾವಕ ಬಂಧುಗಳ ಸಮಾಲೋಚನಾ ಸಭೆ ಜ.27ರಂದು ಮಧ್ಯಾಹ್ನ 2 ಗಂಟೆಗೆ ಶಿರ್ಲಾಲಿನ ಸಿದ್ಧಲಕ್ಷ್ಮಿ ಸಭಾಭವನದಲ್ಲಿ ನಡೆಯಲಿದೆ. ಮಹಾಮಸ್ತಕಾಭಿಷೇಕ ಮಹೋತ್ಸವದ ವಿವಿಧ ಸಮಿತಿಗಳ ಸದಸ್ಯರು ಹಾಗೂ ಶ್ರಾವಕ ಬಂಧುಗಳ ಈ ಪೂರ್ವಭಾವಿ ಸಿದ್ಧತೆಗಳ ಸಭೆ, ಸಮಿತಿ ಕಾರ್ಯಾಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಸಂಬಂಧಿತ ಸಮಿತಿಗಳ ಸದಸ್ಯರು ಹಾಗೂ ಶ್ರಾವಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
ಗಣರಾಜ್ಯೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆ
ಮೂಲ್ಕಿ: ಮೂಲ್ಕಿ ನಪಂ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಮೂಲ್ಕಿ ವ್ಯಾಪ್ತಿಯ ಎಲ್ಲ ಶಾಲಾ, ಕಾಲೇಜು ಶಿಕ್ಷಕಿಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಮೂಲ್ಕಿಯ ವ್ಯಾಪ್ತಿಯ ಎಲ್ಲ ಶಾಲಾ, ಕಾಲೇಜಿನ ಶಿಕ್ಷಕರು, ಮೆಸ್ಕಾಂ ನೌಕರರಿಗೆ, ಪತ್ರಕರ್ತರಿಗೆ, ಪೊಲೀಸ್ ಇಲಾಖೆ, ಕೈಗಾರಿಕಾ ಕೇಂದ್ರದ ಫ್ಯಾಕ್ಟರಿ ಮಾಲೀಕರು, ನಪಂ ಸದಸ್ಯರು, ನೌಕರರಿಗೆ ಜ.25ರಂದು ಬೆಳಗ್ಗೆ ಕಾರ್ನಾಡು ಗಾಂಧಿ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದೆ.
ಸಾಕೇತ ಕಲಾವಿದರಿಂದ ಲವ ಕುಶ ಯಕ್ಷಗಾನ
ಮಂಗಳೂರು: ಮಂಗಳೂರಿನ ಕಲಾ ಸ್ಪಂದನ ಮತ್ತು ಯಕ್ಷಗಾನ ರಂಗ ಚಿಂತನದ ಆಶ್ರಯದಲ್ಲಿ ಸಾಗರದ ಸಾಕೇತ ಕಲಾವಿದರಿಂದ ಕುಶ ಲವ ಯಕ್ಷಗಾನ ಬಯಲಾಟ ಫೆ. 12 ರಂದು ಸಂಜೆ 5 ಗಂಟೆಗೆ ಡಾನ್ಬಾಸ್ಕೋ ಹಾಲ್ನಲ್ಲಿ ನಡೆಯಲಿದೆ. ಉಪ್ಪೂರು ನಾರಾಯಣ ಭಾಗವತರು, ನೆಬ್ಬೂರು ಭಾಗವತರು, ಹೊಸ್ತೋಟ ಮಂಜುನಾಥ ಭಾಗವತರ ತತ್ವಾದರ್ಶ ಮತ್ತು ಹೊನ್ನಾವರ ಸೀಮೆ ಹೆಗಡೆ ಬಂಧುಗಳ ಗುರುತನದಲ್ಲಿ ಸಾಕೇತ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ. ತಂಡದಲ್ಲಿ ಕೆ. ಜಿ. ರಾಮರಾವ್, ಕೆ. ಜಿ. ಮಂಜುನಾಥ, ಸುಜಯೀಂದ್ರ ಹಂದೆ, ಕೆ. ಎನ್. ಶಶಾಂಕ್ ಮೊದಲಾದವರಿದ್ದಾರೆ.
ಶಿಂಧೆ ಹೇಳಿಕೆ ಸಮರ್ಥನೀಯ: ಆಸ್ಕರ್ ಫೆರ್ನಾಂಡಿಸ್
ಮಂಗಳೂರು: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ಸಮರ್ಥನೀಯ. ವಸ್ತು ನಿಷ್ಠವಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಸಮರ್ಥಸಿಕೊಂಡಿದ್ದಾರೆ. ಗುರುವಾರ ಮಂಗಳೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆಸ್ಕರ್, ಶಿಂಧೆ ಕೆಲವೊಂದು ಘಟನೆಗಳ ಬಗ್ಗೆ ಹೇಳಿದ್ದಾರೆ. ಆ ಘಟನೆಗಳ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಉದಾಹರಿಸಿ ಹೇಳಿದ್ದಾರೆ, ಇದರಲ್ಲಿ ತಪ್ಪಿಲ್ಲ ಎಂದರು.
ಈಶ್ವರಪ್ಪ ಹೇಳಿಕೆಗೆ ತಲೆಬುಡವಿಲ್ಲ: ಕೆಜೆಪಿ ಶಾಸಕ, ಸಚಿವರು ರಾಜಿನಾಮೆಯಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂಬು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ ತಲೆಬುಡ ಇಲ್ಲದ್ದು. ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಕದನ ನಡೆಯುತ್ತಿದ್ದೆ. ಪರಸ್ಪರ ಜಗಳ ಆಡುವಾಗ ಸುಮ್ಮನೆ ಕಾಂಗ್ರೆಸ್ ಹೆಸರು ಎಳೆಯುವುದು ಬೇಡ ಎಂದು ಆಸ್ಕರ್ ಹೇಳಿದರು. ರಾಜ್ಯದಲ್ಲಿ ಮುಂದಿನ ಸರ್ಕಾರ ಯಾರು ರಚಿಸಬೇಕು ಎನ್ನುವುದನ್ನು ಜನ ಹೇಳುತ್ತಾರೆ. ನಾವು ಚುನಾವಣೆ ಸಿದ್ಧವಾಗಿದ್ದೇವೆ ಎಂದರು.
ಎಂಎಸ್ಇಝಡ್ 900 ಎಕ್ರೆ ಮರು ಹಂಚಿಕೆಗೆ ಯೋಗೀಶ್ ಭಟ್ ಪತ್ರ
ಮಂಗಳೂರು: ಬೈಕಂಪಾಡಿಯಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್ಇಝಡ್)ಸಮೀಪ ಬಳಸದೇ ಇದ್ದ 900 ಎಕರೆ ಜಾಗವನ್ನು ಮರು ಹಂಚಿಕೆ ಮಾಡುವಂತೆ ಸಿಎಂ ಜಗದೀಶ್ ಶೆಟ್ಟರ್ಗೆ ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಮನವಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು ದಶಕಗಳೇ ಕಳೆದರೂ ಯಾವುದೇ ಅಭಿವೃದ್ಧಿ ಅಥವಾ ಕಾರ್ಖಾನೆಯನ್ನು ಪ್ರಾರಂಭಿಸದೇ ಇರುವುದರಿಂದ ಕೂಡಲೇ ಅವರಿಗೆ ಮಾಡಿರುವ ಹಂಚಿಕೆ ರದ್ದುಪಡಿಸಬೇಕು. 300 ಎಕರೆ ಜಾಗವನ್ನು ರಫ್ತು ಉದ್ಯಮಿಗಳಿಗೆ ಪೂರಕವಾಗಿರುವ ಸಣ್ಣ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ಕಾಯ್ದಿರಿಸಬೇಕು. ನದಿ ಬದಿಯ ಸಿಆರ್ಇಝಡ್ ವ್ಯಾಪ್ತಿಯ 300 ಎಕರೆ ಜಾಗದಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಾಪಿಸಲು ಮೀಸಲಿಡಬೇಕು. ಇನ್ನುಳಿದ 300 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಕ್ರೀಡಾನಗರ ಸ್ಥಾಪಿಸಲು ಮೀಸಲಿಡಬೇಕು ಎಂದು ವಿನಂತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

