ಆಧಾರ್ ನೋಂದಣಿ ಕೇಂದ್ರಕ್ಕೆ ಸರತಿ ಸಂಕಷ್ಟ
ಆತ್ಮಭೂಷಣ್
ಮಂಗಳೂರು: 'ಸತತ ಮೂರು ದಿನಗಳಿಂದ ಬರುತ್ತಿದ್ದೇವೆ.., ನಮ್ಮ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಜ.24 ದಿನಾಂಕ ನಮೂದಿಸಿದ್ದಾರೆ. ಸಂಜೆವರೆಗೆ ಸರತಿಯಲ್ಲಿ ನಿಂತು ಕೆಲಸವಾಗದೆ ವಾಪಾಸ್ ಹೋದೆವು. ಸಂಜೆ 3.30ರ ಸುಮಾರಿಗೆ ಸರತಿ ಸಾಲು ಕೊನೆಗೊಳಿಸಲು ಆಧಾರ್ ಸಿಬ್ಬಂದಿ ಹೇಳುತ್ತಾರೆ. ಇಂದು ಬೇಗ ಬಂದು ಸರತಿ ಸಾಲಲ್ಲಿ ನಿಂತಿದ್ದು ಸಂಜೆ ವೇಳೆಗೆ ಕೆಲಸವಾದರೆ ಸಮಾಧಾನ.'
ಇದು ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದೆ, ಸರತಿಯಲ್ಲಿ ನಿಲ್ಲಲು ಶಕ್ತಿಯೂ ಇಲ್ಲದೆ ಬವಣೆಪಡುತ್ತಿರುವವರ ನಿಟ್ಟುಸಿರ ಮಾತು.
ಈ ಮಾತು ಕೋಡಿಕಲ್ನ ರವಿಕಲಾರದ್ದು ಮಾತ್ರವಲ್ಲ, ಸರತಿ ಸಾಲಿನಲ್ಲಿ ನಿಂತ ಅಷ್ಟೂ ಮಂದಿಯದ್ದು. ಲಾಲ್ಭಾಗ್ನಲ್ಲಿರುವ ಮಹಾನಗರ ಪಾಲಿಕೆ ವಾಣಿಜ್ಯ ಕಟ್ಟಡದ ಎರಡನೇ ಮಹಡಿಗೆ ಹೋದರೆ ಅಲ್ಲಿ ನಿಂತುಕೊಳ್ಳಲು ಬಿಡಿ, ಕಾಲಿಡಲೂ ಜಾಗ ಇಲ್ಲ. ಎರಡು ಸಾಲಲ್ಲಿ ತಮ್ಮ ಸರತಿ ಯಾವಾಗ ಬರುತ್ತದೋ ಎಂದು ಬೆಳಗ್ಗೆ 8 ಗಂಟೆಯಿಂದಲೇ ಕಾಯುತ್ತಿದ್ದಾರೆ. ಇಲ್ಲಿ ಮಕ್ಕಳು, ಮರಿಮಕ್ಕಳು, ಅಂಗವಿಕಲರು, ಮಹಿಳೆಯರು, ಅಜ್ಜ, ಅಜ್ಜಿಯರೂ ಇದ್ದಾರೆ. ಸರತಿಯಲ್ಲಿರುವುದು ಒಬ್ಬೊಬ್ಬರಾದರೆ ಹಸಿವು, ಬಾಯಾರಿಕೆಯನ್ನು ತಡೆದುಕೊಂಡಿರಬೇಕು. ಸರತಿ ಸಾಲು ಬಿಟ್ಟುಹೋಗುವಂತಿಲ್ಲ, ಕನಿಷ್ಟ ಬಹಿರ್ದೆಶೆಗೂ. ಕುಟುಂಬದ ಮಂದಿಯಾದರೆ ಪರವಾಗಿಲ್ಲ, ಒಬ್ಬರಾದರೂ ಸರತಿಯಲ್ಲಿ ಇರುತ್ತಾರೆ ಎಂಬ ಸಮಾಧಾನ. ಶುಕ್ರವಾರ ಸುಮಾರು 30ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು.
ಕಳೆದ ಒಂದು ವಾರದಿಂದೀಚೆಗೆ ಇಲ್ಲಿನ ಆಧಾರ್ ನೋಂದಣಿ ಕೇಂದ್ರದಲ್ಲಿ ಅಕ್ಷರಶಃ ಜನಜಾತ್ರೆ. ಈಗ ಶುಕ್ರವಾರದಿಂದ ಸರ್ಕಾರಿ ರಜೆ ಇರುವುದರಿಂದ ಸರ್ಕಾರಿ ಅಧಿಕಾರಿಗಳ ಸಹಿತ ಎಲ್ಲರೂ ಕುಟುಂಬ ಸಮೇತ ಬರುವವರೇ. ಒಮ್ಮೆಗೇ ಆಧಾರ್ ಕಾರ್ಡ್ ಮಾಡಿಸುವ ಧಾವಂತದಲ್ಲಿ ಇಲ್ಲಿ ನೂಕುನುಗ್ಗಲು. ಇವರನ್ನು ಕೇಳುವವರು ಇಲ್ಲ, ಸಂಭಾಳಿಸುವವರಿಲ್ಲ, ಕನಿಷ್ಟ ನಿಮ್ಮ ಕೆಲಸ ಇಂದು ಆಗದು, ನಿಗದಿತ ದಿನ ಬನ್ನಿ ಎಂದು ಸಾಗಹಾಕುವವರೂ ಇಲ್ಲ. ಆಧಾರ್ ನೋಂದಣಿ ಕೇಂದ್ರದಲ್ಲಿ ಜನತೆಗೆ ವ್ಯವಸ್ಥಿತವಾಗಿ ನೋಂದಣಿ ಪ್ರಕ್ರಿಯೆ ನಡೆಸಲು ಮಾರ್ಗದರ್ಶಕರೇ ಇಲ್ಲದಂತಾಗಿದೆ.
ಟೋಕನ್ ವ್ಯವಸ್ಥೆ ಇಲ್ಲ: ಆಧಾರ್ ಕೇಂದ್ರಗಳಲ್ಲಿ ಟೋಕನ್ ವ್ಯವಸ್ಥೆ ಇಲ್ಲದಿರುವುದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ, 2ರಿಂದ ಸಂಜೆ 5ರ ವರೆಗೆ ಆಧಾರ್ ನೋಂದಣಿ ಮಾಡಿಸಬಹುದು. ಜ.26 ಹೊರತುಪಡಿಸಿದರೆ, ರಜಾ ದಿನಗಳಲ್ಲೂ ಆಧಾರ್ ಕೇಂದ್ರ ಕಾರ್ಯನಿರ್ವಹಿಸುತ್ತದೆ.
ಜಿಲ್ಲೆಯಲ್ಲಿ 7 ಆಧಾರ್ ಕೇಂದ್ರಗಳಿದ್ದು, ಕದ್ರಿ ಮಲ್ಲಿಕಟ್ಟೆಯಲ್ಲಿ 5 ಕಂಪ್ಯೂಟರ್, ಸುರತ್ಕಲ್ನಲ್ಲಿ 4, ಪಾಲಿಕೆ ವಾಣಿಜ್ಯ ಕಟ್ಟಡದಲ್ಲಿ 13, ಪೆರ್ಮನ್ನೂರಿನಲ್ಲಿ 3, ಉಳ್ಳಾಲದಲ್ಲಿ 5, ಲೈಟ್ಹೌಸ್ಹಿಲ್ನಲ್ಲಿ 5, ಮೂಡುಬಿದಿರೆಯಲ್ಲಿ 8, ಬಂಟ್ವಾಳದಲ್ಲಿ 5 ಕಂಪ್ಯೂಟರ್ಗಳು ಕಾರ್ಯನಿರ್ವಹಿಸುತ್ತವೆ. ಕದ್ರಿ ಮತ್ತು ಲೈಟ್ಹೌಸ್ಹಿಲ್ ಬಿಟ್ಟರೆ ಬೇರೆಲ್ಲೂ ಟೋಕನ್ ವ್ಯವಸ್ಥೆಯನ್ನು ಮಾಡಿಲ್ಲ. ಆಧಾರ್ ನೋಂದಣಿ ಕಾರ್ಯವನ್ನು ಮಾರ್ಸ್ ಟೆಕ್ನಾಲಜಿ ಸಂಸ್ಥೆ ವಹಿಸಿಕೊಂಡಿದೆ. ಡಿ.15ರಂದು ಈ ಕೇಂದ್ರಗಳು ಹಂತ ಹಂತವಾಗಿ ಕಾರ್ಯಾರಂಭಿಸಿದ್ದು, ಗುರುವಾರ ವರೆಗೆ 25,433 ಆಧಾರ್ ಅರ್ಜಿ ನೋಂದಣಿ ದಾಖಲಿಸಿವೆ.
ಒಬ್ಬರಿಗೆ ಕನಿಷ್ಠ 20 ನಿಮಿಷ ಬೇಕು: ಒಬ್ಬರಿಗೆ ಆಧಾರ್ ನೋಂದಣಿ ಮಾಡಿಸಲು ಕನಿಷ್ಠ 20 ನಿಮಿಷ ಬೇಕು. ದಾಖಲೆಗಳ ಸ್ಕ್ಯಾನ್, ಕಣ್ಣಿನ ಅಕ್ಷಿಪಟಲ ಸ್ಕ್ಯಾನ್, 10 ಬೆರಳುಗಳ ಮುದ್ರೆ ಪಡೆಯುವುದು, ಇದು ಸರಿಯಾಗಿ ದಾಖಲಾಗದು ಒಂದೆರಡು ನಿಮಿಷ ತೆಗೆದುಕೊಳ್ಳುತ್ತದೆ. ಬಳಿಕ ಅರ್ಜಿಯನ್ನು ಸ್ಕ್ಯಾನ್ ಮಾಡುತ್ತಾರೆ. ಸದ್ಯಕ್ಕೆ ಕರೆಂಟ್ ಇದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಜನರೇಟರ್ ವ್ಯವಸ್ಥೆ ಇನ್ನೂ ಆಗಿಲ್ಲ ಎನ್ನುತ್ತಾರೆ ಸಿಬ್ಬಂದಿ.
ಅಂಚೆ ಇಲಾಖೆಯೇ ಬೆಸ್ಟ್: ಕಳೆದ ವರ್ಷ ಅಂಚೆ ಇಲಾಖೆಯಲ್ಲಿ ಆಧಾರ್ ನೋಂದಣಿ ಮಾಡಿಸಲು ಅವಕಾಶವಿತ್ತು. ಪ್ರತಿ ಅಂಚೆ ಇಲಾಖೆಯಲ್ಲಿ ಪ್ರತ್ಯೇಕ ಕೇಂದ್ರ ತೆರೆಯುತ್ತಿದ್ದರಲ್ಲದೆ, ಆಧಾರ್ ನೋಂದಣಿಗೆ ನಿರ್ದಿಷ್ಟ ದಿನಾಂಕ, ಬರಬೇಕಾದ ಸಮಯ ನೀಡುತ್ತಿದ್ದರು. ಇದರಿಂದ ಸರತಿ ಸಾಲು, ಕಾಯಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಆಧಾರ್ ನೋಂದಣಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಹೊರಟರೂ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಹಾಕಿಕೊಳ್ಳದಿರುವುದೇ ಇಷ್ಟೆಲ್ಲ ಗೋಜಲಿಗೆ ಕಾರಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

