ದಕ್ಷಿಣ ಕನ್ನಡ

ಕುದ್ರುಗಳಲ್ಲಿ ಡಾಲ್ಫಿನ್, ಪಕ್ಷಿ ಸಂಕುಲ ಪಾರ್ಕ್ ಯೋಜನೆ: ಯೋಗೀಶ್ ಭಟ್

Published On :

ಮಂಗಳೂರು: ಮಂಗಳೂರಿನ ಕುದ್ರುವಿನಂತಹ ದ್ವೀಪ ಪ್ರದೇಶಗಳಲ್ಲಿ ಡಾಲ್ಫಿನ್ ಮತ್ತು ಪಕ್ಷಿಸಂಕುಲ ಪಾರ್ಕ್ ಸ್ಥಾಪಿಸುವ ಮೂಲಕ ಪ್ರವಾಸೋದ್ಯಮ ಆಕರ್ಷಣೆಗೆ ಉದ್ದೇಶಿಸಲಾಗಿದೆ ಎಂದು ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ ಸಹಯೋಗದಲ್ಲಿ ಪಣಂಬೂರಿನಲ್ಲಿ 3 ದಿನಗಳ ಬೀಚ್ ಉತ್ಸವಕ್ಕೆ ಶುಕ್ರವಾರ ಉತ್ಸವದ ಲಾಂಛನವುಳ್ಳ ಗಾಳಿಪಟವನ್ನು ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದಕ್ಕಾಗಿ ಸಿಆರ್ಝಡ್ (ಕರಾವಳಿ ನಿಯಂತ್ರಣ ವಲಯ)ನಿಯಮಾವಳಿಯನ್ನು ಸಡಿಲಿಸುವಂತೆ ಚಿಂತನೆ ನಡೆಸಲಾಗಿದೆ. ಈ ಕುರಿತು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯದ ಈ ಕರಾವಳಿ 309 ಕಿ.ಮೀ ಉದ್ದವಿದ್ದರೆ, ಗೋವಾದಲ್ಲಿ 120 ಕಿ.ಮೀ ಮಾತ್ರ. ಹಾಗಾಗಿ ಇಲ್ಲಿ ಹೇರಳವಾಗಿ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಧ್ಯವಿದೆ. ಈಗಾಗಲೇ ಸುಲ್ತಾನ್ಬತ್ತೇರಿ-ತಣ್ಣೀರುಬಾವಿ ರೋಪ್ವೇ, 120 ಎಕರೆಯಲ್ಲಿ ಗಾಲ್ಫ್ ಕೋರ್ಸ್, ಮರೇನ್ ಅಕ್ವೇರಿಯಂ ಪಾರ್ಕ್, ವಾಟರ್ ಸ್ಫೋರ್ಟ್ಸ್, ಪಿಲಿಕುಳದಲ್ಲಿ ಸ್ವಾಮಿ ವಿವೇಕಾನಂದ ಪ್ಲಾನಿಟೋರಿಯಂ ನಿರ್ಮಾಣಕ್ಕೆ ತ್ವರಿತ ಚಾಲನೆ ನೀಡುವುದಾಗಿ ಹೇಳಿದರು.
ವರ್ಷದಿಂದ ವರ್ಷಕ್ಕೆ ಬೀಚ್ ಉತ್ಸವಕ್ಕೆ ಜನಾಕರ್ಷಣೆ ಜಾಸ್ತಿಯಾಗುತ್ತಿದ್ದು, ಗಾಳಿಪಟವನ್ನು ಹಾರಿಸುವಾಗ ಅದರ ಸೂತ್ರ ಕೈಯಲ್ಲಿ ಭದ್ರವಾಗಿರಬೇಕು. ಇಲ್ಲದಿದ್ದರೆ ಗಾಳಿಪಟ ಆಗಸದಲ್ಲಿ ಹಾರಾಡುತ್ತಲೇ ಇರಬಹುದು ಎಂದು ಹೇಳಿದರು.
ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರಾದರೂ, ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಯಾವುದೇ ಉತ್ತರ ನೀಡಲಿಲ್ಲ.
ಜಿಲ್ಲಾಧಿಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಬೀಚ್ ಉತ್ಸವ ಸಮಿತಿ ಅಧ್ಯಕ್ಷ, ಸಹಾಯಕ ಆಯುಕ್ತ ಡಾ.ವೆಂಕಟೇಶ್ ಗರುಡ ಚಿತ್ರದ ಗಾಳಿಪಟ ಹಾರಿಸುವ ಮುಖೇನ ಉತ್ಸವದಲ್ಲಿ ತಾವೂ ಪಾಲ್ಗೊಂಡರು. ಸಂಜೆ ಆಯ್ಕೆ ಕಲಾವಿದರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ, ಕೋಸ್ಟ್ಗಾರ್ಡ್ನಿಂದ ಸಮುದ್ರ ಗಸ್ತು ನೌಕೆ ಇಂಟರ್ಸೆಪ್ಟರ್ನಲ್ಲಿ ಗಸ್ತು ಪ್ರಾತ್ಯಕ್ಷಿಕೆ ನಡೆಯಿತು.
ಉಪಮೇಯರ್ ಅಮಿತಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಸದಸ್ಯೆ ಶಕೀಲಕಾವ, ಶಾಂತಾ, ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಸುರೇಶ್ ಕುಮಾರ್, ಮಂಗಳೂರು ತಹಸೀಲ್ದಾರ್ ರವಿಚಂದ್ರ ನಾಯಕ್, ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.