ಕಾಂಗ್ರೆಸ್ ನಡಿಗೆ: 'ಕಾಂಗ್ರೆಸ್ನೆಡೆಗೆ ಜನತೆ' ಸಾಧ್ಯವೇ?
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಹಿಂದಿನಂತೆ ಕೋಟೆ ಭದ್ರಪಡಿಸಲು ಕಾಂಗ್ರೆಸ್ ಎರಡನೇ ಹಂತದ ನಡಿಗೆ ಕೈಗೊಂಡಿದ್ದು, ಜಿಲ್ಲೆಯಲ್ಲಿ 'ಕಾಂಗ್ರೆಸ್ ನಡಿಗೆ-ಸಾಮರಸ್ಯ ಕಡೆಗೆ' ಹೆಸರಲ್ಲಿ ನಡೆಯಲಿದೆ. ಕರಾವಳಿಯಲ್ಲಿ ಅದೆಷ್ಟೋ ಪಾದಯಾತ್ರೆ ನಡೆದಿದ್ದರೂ, ರಾಜ್ಯ ನಾಯಕರ ದಂಡು ಬಂದು ನಡೆಯುವುದು ಇದೇ ಮೊದಲು.
ಜಿಲ್ಲೆಯಲ್ಲಿ ಬಗರ್ ಹುಕುಂ, ಪೈಪ್ಲೈನ್ ವಿರುದ್ಧ, ಅಡಕೆ ಬೆಳೆಗಾರರ ರಕ್ಷಣೆಗಾಗಿ ಬಿಜೆಪಿ ಪಾದಯಾತ್ರೆ ನಡೆಸಿ ಇತಿಹಾಸ ನಿರ್ಮಿಸಿದೆ. ಕಾಂಗ್ರೆಸ್ ಕೂಡ ಕೆಲವು ಪಾದಯಾತ್ರೆ ನಡೆಸಿದೆ. ಆದರೆ ಬಣ ರಾಜಕೀಯದಿಂದ ಸದಾ ತತ್ತರಿಸುತ್ತಿರುವ ಕಾಂಗ್ರೆಸಿಗರು ಒಂದಾಗಿ ಸಾಗುವುದೇ ಕಡಿಮೆ. ಈ ಬಾರಿ ರಾಜ್ಯ ನಾಯಕರ ಸಂಗಡ ನಡೆಯುವ ನಡಿಗೆ ಬಣ ರಾಜಕೀಯ ಬಗೆಗೆ ಕುತೂಹಲ ಮೂಡಿಸಿದೆ.
ಮೊದಲ ನಡಿಗೆ: ಜನಾರ್ದನ ಪೂಜಾರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾಗಿದ್ದಾಗ ಚುನಾವಣೆ ವೇಳೆ ರಾಜ್ಯದ ವಿವಿಧೆಡೆ ಪಾದಯಾತ್ರೆ ಮಾಡಿದ್ದರು. ಮಂಗಳೂರಿನಲ್ಲಿ ಇವರ ಪಾದಯಾತ್ರೆಯಂತೂ ಪ್ರಸಿದ್ಧ. ಯಾವುದೇ ಚುನಾವಣೆ ಬರಲಿ, ಪೂಜಾರಿ ಪಾದಯಾತ್ರೆ ಸುದ್ದಿ ಮಾಡುತ್ತದೆ. ಯಾಕೆಂದರೆ, ಪಾದಯಾತ್ರೆಯಲ್ಲಿ ಕ್ವಿಝ್ ಏರ್ಪಡಿಸಿ ಗೆದ್ದವರಿಗೆ ಹಣ ನೀಡುತ್ತಾರೆ, ಮಹಿಳೆಯರ ಮುಡಿಗೆ ಮಲ್ಲಿಗೆ ಕೊಡುತ್ತಾರೆ... ಇದು ಪೂಜಾರಿ ಪಾದಯಾತ್ರೆ ಸ್ಟೈಲ್.
ಈಗಲೂ ಚುನಾವಣೆ ಬಂತೆಂದರೆ ಪೂಜಾರಿ ಪಾದಯಾತ್ರೆಗೆ ಹೊರಡುತ್ತಾರೆ. ಹಾಗೆಂದು ಸಮಸ್ಯೆ ಮುಂದಿಟ್ಟುಕೊಂಡು ಪೂಜಾರಿ ಪಾದಯಾತ್ರೆ ಮಾಡಿದ್ದಿಲ್ಲ ಎನ್ನುತ್ತಾರೆ ಅವರ ಕಟ್ಟಾ ಬೆಂಬಲಿಗರು.
ರಾಜೀವ್ಗಾಂಧಿ ಹತ್ಯೆಯಾದಾಗ ಶ್ರದ್ಧಾಂಜಲಿ ರೂಪದಲ್ಲಿ ತಲಪಾಡಿಯಿಂದ ಮಂಗಳೂರು ವರೆಗೆ ಯುವ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. 2012ರಲ್ಲಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಕಾಮಗಾರಿ ತ್ವರಿತಕ್ಕೆ ಆಗ್ರಹಿಸಿ ಸಂಪಾಜೆಯಿಂದ ಮಾಣಿ ವರೆಗೆ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು. ಆದರೆ ಇಲ್ಲಿ ಎಲ್ಲ ಬಣಗಳು ಒಂದಾಗಿರಲಿಲ್ಲ.
ಬಣ ಒಂದಾಗುತ್ತಾ?: ಕಾಂಗ್ರೆಸಿಗರ ಈ ನಡಿಗೆ ಇತಿಹಾಸ ನಿರ್ಮಿಸುತ್ತಾ ಎಂಬುದು ಯಕ್ಷಪ್ರಶ್ನೆ. ಜಿಲ್ಲಾ ಕಾಂಗ್ರೆಸ್ನಲ್ಲಿ ಪೂಜಾರಿ, ಮೊಯ್ಲಿ, ಆಸ್ಕರ್ ಹೀಗೆ ಮೂರು ಬಣ. ಎಲ್ಲರೂ ಒಂದಾಗಿ ಪಾದಯಾತ್ರೆ ಯಶಸ್ವಿಗೊಳಿಸಬೇಕು ಎಂಬುದನ್ನು ಜಿಲ್ಲೆಯ ಉಸ್ತುವಾರಿ ವಹಿಸಿದ್ದವರು ಅರುಹಿದ್ದರು. ಆದರೆ ಇದನ್ನು ಎಷ್ಟು ಮಂದಿ ಮುಖಂಡರು ಕೇಳುತ್ತಾರೆ ಎನ್ನುವುದು ನಡಿಗೆಯ ಉದ್ಘಾಟನೆಯಲ್ಲಿ ಗೊತ್ತಾಗಲಿದೆ.
ಲಭ್ಯ ಮಾಹಿತಿಯಂತೆ ಜನಾರ್ದನ ಪೂಜಾರಿ ಕಾರ್ಯ ಬಾಹುಳ್ಯ ಹಿನ್ನಲೆಯಲ್ಲಿ ನಡಿಗೆಯಲ್ಲಿ ಪೂರ್ತಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ನಡಿಗೆ ಬಗ್ಗೆ ಜಿಲ್ಲಾಧ್ಯಕ್ಷ ರಮಾನಾಥ ರೈ ಬಿಟ್ಟರೆ ಬೇರ್ಯಾರಲ್ಲೂ ಸರಿಯಾದ ಮಾಹಿತಿ ಇಲ್ಲ. ಪ್ರತಿ ಬ್ಲಾಕ್ನಿಂದ ಎಷ್ಟು ಮಂದಿ ಆಗಮಿಸಬೇಕು ಎಂಬ ಬಗ್ಗೆ ಒಂದೆರಡು ಸಭೆ ನಡೆಸಿದ್ದು ಬಿಟ್ಟರೆ ನಿಖರ ಮಾಹಿತಿ ಯಾರಲ್ಲೂ ಇಲ್ಲ.
ಸರ್ವಧರ್ಮ ಪ್ರಾರ್ಥನೆ ಶ್ರೀಕಾರ: 9ರಂದು ಬೆಳಗ್ಗೆ 9.30ಕ್ಕೆ ಕಾಂಗ್ರೆಸ್ ನಡಿಗೆಯ ಉದ್ಘಾಟನೆಯೂ ವಿಶೇಷ ರೀತಿಯಲ್ಲಿ ನಡೆಯಲಿದೆ. ಉಳ್ಳಾಲದಲ್ಲಿ ಸೋಮನಾಥೇಶ್ವರ ದೇವಸ್ಥಾನ, ಉಳ್ಳಾಲ ಮಸೀದಿ ಹಾಗೂ ಸೆಬಾಸ್ಟಿಯನ್ ಚರ್ಚ್ನಲ್ಲಿ ನಾಯಕರು ಪ್ರಾರ್ಥನೆ ಸಲ್ಲಿಸಿದ ಬಳಿಕ ರಾಣಿ ಅಬ್ಬಕ್ಕ ವೃತ್ತದಲ್ಲಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಾಮರಸ್ಯ ಕಡೆಗೆ ನಡಿಗೆ ಆರಂಭವಾಗಲಿದೆ. ಈ ನಡಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಪಾಲ್ಗೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

