ಅನೈತಿಕ ದಂಧೆ: ಶಿವಮೊಗ್ಗದ ವಿವಾಹಿತ ಜೋಡಿ ಪೊಲೀಸ್ ವಶಕ್ಕೆ
ಉಪ್ಪಿನಂಗಡಿ: ಶಿವಮೊಗ್ಗದ ವಿವಾಹಿತೆ ಜತೆ ಅಲ್ಲಿನ ನಿವಾಸಿಯಾಗಿರುವ ವಿವಾಹಿತ ವ್ಯಕ್ತಿ ಅನೈತಿಕ ಚಟುವಟಿಕೆ ನಡೆಸಲು ಮುಂದಾದಾಗ ಅವರನ್ನು ನಾಗರಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಆಲಂಕಾರು ಸಮೀಪದ ಕುಂಡಾಜೆ ಎಂಬಲ್ಲಿ ನಡೆದಿದೆ.
ವಶಕ್ಕೆ ತೆಗೆದುಕೊಳ್ಳಲಾದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಸಿದ್ದವೇಶ್ವರ ನಗರದ ಜಮೀರ್ ಅಹ್ಮದ್ (37) ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆ. ಈತ ತನ್ನ ಊರಿನ ಮಹಿಳೆ ಜತೆ ಭಕ್ತನ ಸೋಗಿನಲ್ಲಿ ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಸಂಚರಿಸಿ, ಅಲ್ಲಿ ವಾಸ್ತವ್ಯ ಹೂಡಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ನಾಗರಿಕರಿಗೆ ಮಾಹಿತಿ ಲಭಿಸಿತ್ತು. ಈ ಜೋಡಿ ಬಗ್ಗೆ ಜಾಗೃತರಾದ ನಾಗರಿಕರ ನಡೆಯನ್ನು ಗುರುತಿಸಿದ ಜೋಡಿಯು ತಮ್ಮ ಸ್ಕಾರ್ಪಿಯೊ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದರಾದರೂ ನಾಗರಿಕರು ರಾಮಕುಂಜ ಗ್ರಾಮದ ಕುಂಡಾಜೆ ಎಂಬಲ್ಲಿ ಜೋಡಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೊಪ್ಪಿಸಿದರು. ಪೊಲೀಸರು ವಿಚಾರಣೆ ನಡೆಸಿ, ಇಬ್ಬರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.
ಮಹಡಿಯಿಂದ ಬಿದ್ದು ವ್ಯಕ್ತಿ ಸಾವು
ಉಡುಪಿ: ಇಲ್ಲಿನ ಕುತ್ಪಾಡಿ ಗ್ರಾಮದಲ್ಲಿ ಮನೆ ಮೇಲಂತಸ್ತಿನಿಂದ ಆಯ ತಪ್ಪಿ ಕೆಳಗೆ ಬಿದ್ದು ಮನೆಯೊಡೆಯ ಮೃತಪಟ್ಟ ಘಟನೆ ನಡೆದಿದೆ. ಮೃತರು ಸುಕುಮಾರ್ ಹೆಗ್ಡೆ (61), ಅವರು ತಮ್ಮ ಮನೆಯ ಮೇಲಂತಸ್ತಿನಲ್ಲಿ ಒಂದು ಹೊಸ ಕೋಣೆಯನ್ನು ನಿರ್ಮಾಣ ಮಾಡುತ್ತಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಈ ಕೋಣೆಯೊಳಗೆ ನೀರು ಹಾಕಿ ಮರದ ಏಣಿ ಮೂಲಕ ಕೆಳಗೆ ಇಳಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ನೆರೆಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅವರ ಸಂಬಂಧಿ ಕೆ. ಪ್ರಭಾಕರ ಶೆಟ್ಟಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಅನಂತ ಶಬರಾಯ
ಉಪ್ಪಿನಂಗಡಿ: ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ದೇವಳದಲ್ಲಿ ಅರ್ಚಕರಾಗಿದ್ದ, ಕೊಕ್ಕಡದಲ್ಲಿ ಜ್ಯೋತಿಷಿಯಾಗಿ ಹೆಸರುವಾಸಿಯಾಗಿದ್ದ ಹುರುಳಿ ಮಜಲು ಅನಂತ ಶಬರಾಯ (85) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಸಂಜೆ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ಕೇರಳದ ಇತಿಹಾಸ ಪ್ರಸಿದ್ಧ ತಿರುವನಂತಪುರದ ಅನಂತಪದ್ಮನಾಭ ದೇವಳದಲ್ಲಿ ಹಲವು ದಶಕಗಳ ಕಾಲ ಪೂಜಾ ಕೈಂಕರ್ಯ ಸಲ್ಲಿಸಿದ್ದರು. ಅಲ್ಲಿನ ಪೂಜಾ ಕಾರ್ಯದಿಂದ ನಿವೃತ್ತಿಯಾದ ಬಳಿಕ ಕೊಕ್ಕಡದ ಹುರುಳಿಮಜಲು ಎಂಬಲ್ಲಿ ನೆಲೆಸಿ, ಜ್ಯೋತಿಷ್ಯ ಕಾರ್ಯ ಮಾಡುತ್ತಿದ್ದರು. ಇವರು ಪತ್ನಿ ಮತ್ತು 3 ಗಂಡು, 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಯಮುನಾ ವಿ. ಪೂಜಾರಿ
ವಿಟ್ಲ: ಬಾಳ್ತಿಲ ಗ್ರಾಮದ ಕೊರಿಯ ನಿವಾಸಿ ದಿ.ವೆಂಕಪ್ಪ ಪೂಜಾರಿ ಅವರ ಪತ್ನಿ ಯಮುನಾ ವಿ. ಪೂಜಾರಿ (80) ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದೇ ದಿನ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಆರು ಮಂದಿ ಪುತ್ರರು ಇದ್ದಾರೆ.
ಕಲ್ಯಾಣಿಯಮ್ಮ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮದ ಏನೆಕಲ್ ನಿವಾಸಿ ಕಲ್ಯಾಣಿಯಮ್ಮ (91)ಎಂಬವರು ಸೋಮವಾರ ನಿಧನರಾದರು. ಸುಬ್ರಹ್ಮಣ್ಯದ ಸಮಾಜಸೇವಕ ಕುಮಾರ ನಾಯರ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

